ಬಾಗೇಪಲ್ಲಿಯವರ ಗಜಲ್

ಕಾವ್ಯಸಂಗಾತಿ

ಗಜಲ್

ಬಾಗೇಪಲ್ಲಿ

ಪ್ರೀತಿ ಬಯಸಿ ನಾ ನಿಟ್ಟ ಮೊದಲ ಹೆಜ್ಜೆಗೆ ನೀ ವಿರೋಧಿಸಲಿಲ್ಲ ಗೆಳತಿ
ಹೆದರುತ ನಿನ್ನ ಬಗ್ಗೆ ಬರೆದ ಕವನ ಓದಿದಾಗ ಪ್ರತಿರೋಧಿಸಲಿಲ್ಲ ಗೆಳತಿ

ಪ್ರಥಮ ಚುಂಬನಂ ದಂತ ಭಗ್ನಂ ಆಗದ್ದು ಕಂಡು ನಾ ಗೆದ್ದೆನೆಂದು ಭಾವಿಸಿದೆ
ನೂರ ನಲವತ್ತ ಮೂರರ ಸೂಚಕ ವೇನೆನೆ ವಿವರಿಸಿದೆ ಕೋಪಗೊಳಲಿಲ್ಲ ಗೆಳತಿ

ಪಂಚಾಕ್ಷರೀ ಷಡಾಕ್ಷರೀ ಇನ್ನೂ ಹಲವಾರು ಮಂತ್ರಗಳುಂಟು ನಿನ್ನ ಧ್ಯಾನಿಸೆ
ಪ್ರಸಿದ್ಧ ಅಷ್ಟಾಕ್ಷರೀ ಗೊತ್ತೇ ಎನಲು ಥಟ್ ಅಂತ ಉತ್ತರಿಸಿದೆ ಬೇಸರಿಸಲಿಲ್ಲ ಗೆಳತಿ

ಕನ್ನಡದ ಸಪ್ತಾಕ್ಷರೀ ಮಂತ್ರ ಒಮ್ಮೆ ಹೇಳೆ ನೀ ನಕ್ಕು ಮೌನವಾದೆ ನೆನಪಿಸಿಕೋ
ಮೌನಂ ಅಂಗೀಕಾರ ಲಕ್ಷಣಂ ಎನುತ ನನ್ನ ಪ್ರೀತಿ ನಿವೇದನೆ ನಾ ಕೈ ಬಿಡಲಿಲ್ಲ ಗೆಳತಿ

ಕೃಷ್ಣಾ! ಹಲವು ಹತ್ತು ವರ್ಷ ಕಳೆದು ತುಸುದೂರದಿ ವಾಸಿಸಿತಿರುವೆವು ಅಷ್ಟೇ
ಪ್ರೇಮವಲ್ಲ ಗೆಳೆತನದ ಸಲುಗೆ ಎನುವೆ ನೀ ಹೇಳಿದ್ದು ವ್ಯರ್ಥವೇ ತಿಳಿಯಲಿಲ್ಲ ಗೆಳತಿ


Leave a Reply

Back To Top