ಕೆ.ಶಶಿಕಾಂತ ಕವಿತೆ-ನುಲಿಯ ಚಂದಯ್ಯ

ಕಾವ್ಯ ಸಂಗಾತಿ

ನುಲಿಯ ಚಂದಯ್ಯ

ಕೆ.ಶಶಿಕಾಂತ

ಸ್ವತಃ ತ್ರಿಪುರಾಂತಕನ ಬಲವೇ
ಸುಜಲವಾಗಿ ನೆಲೆ ನಿಂತ
ಕಲ್ಲನ್ನೂ ಎಳೆ ಎಳೆಯಾಗಿಸುವ
ಕಲ್ಯಾಣದ ಕೆರೆಯಲ್ಲಿ
ಜಡಜಗದ ಕಾಷ್ಠವ
ಮೆದುಗೊಳಿಸಿ ಎಳೆದೆಗೆದು,
ಹುರಿಗೊಳಿಸಿ ಹೊಸೆದು
ಅರಿಭಾವಗಳ ಹೆಡೆಮುರಿ
ಕಟ್ಟಿದ ಶರಣ

ಕಾಯಕವಿಡಿದ ಶರಣನಿಗೆ
ಲಿಂಗದ ಹಂಗಿಲ್ಲ
ಲಿಂಗ ಪೂಜೆಯ ಮೀರಿದ
ಕಾಯಕಯೋಗಿ ತಾ ಶರಣ
ಕಾಯಕವೇ ಶಿವಯೋಗವು
ಕಾಯಕವೇ ಜಪತಪವು
ಕಾಯಕವನೇ ಮರೆವ
ಬರೀ ಲಿಂಗದ ಧ್ಯಾನವು
ಶರಣನಿಗೆ ಸಲ್ಲದು
ಅಪ್ಪ ಬಸವಣ್ಣನೇ ತಲೆಬಾಗಿದ
ಲಕ್ಕಮ್ಮನ ಶಾಸನವು…..

ಲಿಂಗವಿಡಿದವನೇ
ನಿಜಶರಣನಹುದಹುದು
ಆದಡೂ ಶರಣನಾಗಲು
ಕಾಯಕವೇ ಮಿಗಿಲು

ಸಾಕ್ಷಾತ್ ಸಂಗಯ್ಯನೇ
ಈ ಅಂಗೈಯೊಳಗಿನ ಲಿಂಗ
ಚಂದಯ್ಯನ ಕಾಯಕಕೆ
ಮಾಡಲು ಭಂಗ
ಕಾಯಕದ ಯೋಗಿಗೆ ಹೊಲ್ಲ
ಲಿಂಗದ ಹಂಗ
ಪರಿಪರಿಯ ಭಿನ್ನಹಕೂ
ಆಗಲಿಲ್ಲ ಚಂದಯ್ಯಗೆ ಭಂಗ
ಲಿಂಗಯ್ಯನ ಬಿನ್ನಹವ
ಕೇಳಲಿಲ್ಲ ಮಾಚಯ್ಯ ಹಂಗ
ಹೇಳಿದನು ಲಿಂಗಯ್ಯಗೆ
ನೀವು ಮಾಡಲೇಬೇಕು
ಶರಣ ಕಾಯಕದ ಸಂಗ.
ಚಂದಯ್ಯನ ಕಾಯಕವ
ಹಿಡಿದನು ಲಿಂಗ
ಮೆರೆಯಿತು ಕಲ್ಯಾಣದಿ
ಶರಣರ ಕಾಯಕ-ದಾಸೋಹದ
ಉತ್ತುಂಗ.
ಏನು ಚಂದ…..ಏನು ಚಂದ
ನಮ್ಮ ಶರಣ ನುಲಿಯ ಚಂದ…
ನಡೆ ಚಂದ,ನುಡಿ ಚಂದ
ಹರಡಿತು ಎಲ್ಲೆಡೆ
ಬಸವನ ಕಲ್ಯಾಣದ ಗಂಧ.
—————————

Leave a Reply

Back To Top