ಕಾವ್ಯಸಂಗಾತಿ
ಗಜಲ್
ಜಯಶ್ರೀ.ಭ.ಭಂಡಾರಿ.
ರವಿಯ ಸ್ವಾಗತಿಸಿ ಶುಭೋದಯ ಹೇಳುತಾ ಬರುವೆನು ಗೆಳೆಯಾ.
ಬೆರಗಲಿ ನಿದಿರೆಯ ಧ್ಯಾನದಿ ರಂಗೋಲಿಯ ಕೋರುವೆನು ಗೆಳೆಯಾ
ಒಲವ ಅನುರಾಗ ಹಾಡುತ ಹರುಷದಿ ಮುದ್ದಿಸುವೆಯಾ ಸಖ
ಸಲಹುವ ಭರವಸೆಯ ಕಿರಣಗಳ ಕಿನ್ನರಿಯ ಸಾರುವೆನು ಗೆಳೆಯಾ.
ಮರಳಲಿ ಗೂಡನು ಕಟ್ಟಿ ಸತ್ಯವು
ಬೇಸರಿಸದೆ ಕಾಯುವೆ.
ಕೆರೆಯಲಿ ಮೀನುಗಳ ನೋಟವ ಬಣ್ಣಿಸುತ ಕೂರುವೆನು ಗೆಳೆಯಾ
ಮರದಿ ಹಣ್ಣುಗಳ ಹರಿದು ಶಬರಿಯ ತರಹ ನಿರೀಕ್ಷೆಯಲಿ ಬೆಂದಿಹೆ
ಶರವೇಗದಿ ಕಣ್ಣುಗಳ ಕಾಂತಿಯಲಿ ಅರಸುತ ಏರುವೆನು ಗೆಳೆಯಾ.
ಸಿಂಗಾರಿಯ ಬಾಳು ಬೆಳಗಿ ತೋರಣ ಕಟ್ಟಿ ಸಖಿಯಾಗಿಹೆನು
ರಂಗಿನ ಹಕ್ಕಿಯಾಗಿ ಹಾರುತ ಎದೆಯ ಕದವ ಸೇರುವೆನು ಗೆಳೆಯಾ.
ಮಂದ ಮಾರುತ ಬೀಸುತ ಆಗಸದಿ ಗೋಧೂಳಿ ಓಕುಳಿಯಾಡಿದೆ.
ಚೆಂದದ ಮರುಳ ಮಾತಿನ ಅಧರದಿ ಮೀಯುತ ಜಾರುವೆನು ಗೆಳೆಯಾ
ಕ್ಲಿಷೆಯನು ದಾಟಿ ಧರಣಿಯ ಹಸಿರಲಿ ಜಯಾ ಹಾಯಾಗಿಹಳು.
ಕೃಷ್ಣನ ರಾಧೆಯಾಗಿ ರಮಣನ ಬಾಹುಗಳಲಿ ತೂರುವೆನು ಗೆಳೆಯಾ..