ಕಾವ್ಯ ಸಂಗಾತಿ
ಇಲ್ಲಿ ಯಾವುದೂ ಸರಿ ಇಲ್ಲ
ಪ್ರಭುರಾಜ ಅರಣಕಲ್
ಇಲ್ಲಿ ಯಾವುದೂ ಸರಿ ಇಲ್ಲ
ಎನ್ನುತ್ತಲೇ ಕಳೆದುಹೋಯಿತು
ನನ್ನ ಅರ್ಧ ಆಯುಷ್ಯ
ಬೆಳಗಾಗೆದ್ದರೆ ಇಲ್ಲಿ
ಸರಿ ತಪ್ಪುಗಳ ತಕ್ಕಡಿ ಹಿಡಿದ
ಕಣ್ಣಿಗೆ ಕಪ್ಪುಪಟ್ಟಿ ಬಿಗಿದುಕೊಂಡ
ನ್ಯಾಯದೇವತೆ ಇಲ್ಲದ
‘ಪ್ರತಿವಾದಿ’ ಗಳಿಲ್ಲದ, ಬರೀ
‘ವಾದಿ’ ಗಳದೇ– ‘ಬೀದಿ ನ್ಯಾಯಾಲಯಗಳಿವೆ’….
ಅವರ ತೀರ್ಪಿಗೆ ತಲೆಬಾಗಿದರೆ ಸರಿ
ನಿರಾಕರಿಸಿದರೆ, ದಿನಾ ಮೂದಲಿಕೆಗಳ
ಬಿರುಮಳೆಗೆ ತುಂಬಿಹರಿಯುವ —
ಹೊಳೆಯ ಪ್ರವಾಹ…
ಇವರ ಪ್ರವಾಹಕ್ಕೆ ಸಿಕ್ಕರೂ–
ಅಲುಗದೆ ಸವೆಯುತ್ತಿರುವ
ಬಂಡೆ ನಾನು…
‘ಬಂಡೆ ಎಂದಿಗೂ ಮೇಣವಾಗದೆಂಬುದೂ’
ಅದೇ ಬೀದಿಯ…
ಗಲ್ಲಿ ಗಲ್ಲಿಗಳಲ್ಲಿನ
‘ಮಂದ್ರ ಸಪ್ತಕದ’ ಸಣ್ಣ ಸ್ವರಗಳಲ್ಲಿನ
ಪಿಸುದನಿಗಳ ಗುಸು ಗುಸು…
ಅಂತೆಯೇ — ಇಲ್ಲಿ ಯಾವುದೂ – ಎಂದಿಗೂ ಸರಿಯಾಗುವುದೇ ಇಲ್ಲ!
ಇಂತಹ ಇಕ್ಕಟ್ಟಿನಲ್ಲಿಯೇ
ಇನ್ನುಳಿದ ಆಯುಸ್ಸು
ಕಳೆಯ ಬೇಕಲ್ಲ…
ತುಂಬಾ ಚೆನ್ನಾಗಿದೆ ಸರ್
ಅನುಸೂಯಾ ಮೇಡಂ. ನಿಮ್ಮ ಕವಿತೆಯ .ಮೆಚ್ಚುಗೆಗೆ ಧನ್ಯವಾದಗಳು.
–ಪ್ರಭುರಾಜ ಅರಣಕಲ್