ಮೂಗುತಿಯೇ ಭಾರ-ಅನಾಮಿಕ ಕವಿ

ಕಾವ್ಯ ಸಂಗಾತಿ

ಮೂಗುತಿಯೇ ಭಾರ

ಅನಾಮಿಕ ಕವಿ

ಮೂಗಿಗಿಂತ ಮೂಗುತಿಯೇ
ಭಾರವಾದ ಅನುಭವ
ಕಲಿಕೆ ಗಿಂತ ಕಾರ್ಯಕ್ರಮಗಳ ಹೊರೆ
ಅದಕ್ಕಿಂತ ದಾಖಲೆಗಳ ಬರೆ
ನಿರ್ವಹಿಸಿದ ದಾಖಲೆಗಳ
ಜಾಲತಾಣಗಳಲ್ಲಿ
ಹಂಚಿಕೊಳ್ಳಬೇಕಾದ ತೊಂದರೆ

ಊಟದಲ್ಲಿ ಉಪ್ಪಿನಕಾಯಿಯಂತೆ
ಶಾಲೆಯಲ್ಲಿ ಕಾರ್ಯಕ್ರಮಗಳಿದ್ದರೆ
ಚೆಂದ ಉಪ್ಪಿನಕಾಯಿಯೇ
ಊಟವಾದರೆ
ಊಟ ರುಚಿಸೀತೆ?
ಮತ್ತೆ ಗುಣಮಟ್ಟದ ಕಲಿಕೆ
ಸಾಧ್ಯವಾದೀತೆ??

ಒಂದೆಡೆ ಬದಲಾದ
ಪಠ್ಯಪುಸ್ತಕಗಳ ಅವಾಂತರ
ಮತ್ತೊಂದೆಡೆ ಕಲಿಕಾ ನಷ್ಟ
ತುಂಬಲು ಕಲಿಕಾ ಚೇತರಿಕೆ
ಎಂಬ ಹೊಸ ಚಪ್ಪರ!
ಇತ್ತ ಪಠ್ಯಪುಸ್ತಕ
ಗಳನ್ನು ಕಲಿಸಲಾಗದ
ಅತ್ತ ಚೇತರಿಕೆಯನ್ನು
ಮಾಡಲಾಗದೆ ಸುಸ್ತಾದ
ಶಿಕ್ಷಕರ ಹೆಣಗಾಟ
ದಿನಚರಿ ಬಲು ದುಸ್ತರ!

ಇಲಾಖೆ ಕೇಳುವ ದಾಖಲೆ
ಪಾಲಕರು ನಿರೀಕ್ಷಿಸುವ ಕಲಿಕೆ
ಇತ್ತ ದರಿ ಅತ್ತ ಪುಲಿ
ಪಾಪ ,ನಮ್ಮ ಕುರಿಗಳಂತ
ಶಿಕ್ಷಕರ ಗೋಳು ಮೊಟ್ಟೆ ಚಿಕ್ಕಿ
ಬಾಳೆಹಣ್ಣು ಬಿಸಿಯೂಟದ
ಲೆಕ್ಕಾಚಾರದಲ್ಲೇ ಸದ್ದಿಲ್ಲದೇ
ಬಂದಡರಿದ ಬಿಪಿ ಶುಗರ್ !!

ಮೇ ತಿಂಗಳಿಂದಲೇ ಆರಂಭ
ಮಳೆಬಿಲ್ಲು ದಾಖಲಾತಿ
ಜೊತೆಗೂಡಿದ ಮಳೆ ನೆರೆ
ನೀಡಲಾದ ರಜೆ ಸಂಜೆ
ಇನ್ಸ್ಫ ಯರ್ ಎವಾರ್ಡ
ಇಕೊ ಕ್ಲಬ್ ಕಾರ್ಯಕ್ರಮ
ಪಂದ್ಯಾಟ , ಕಾರಂಜಿ
ಜಂತು ಹುಳು ನಿವಾರಣೆ
ಕೈ ತೊಳೆಯುವ ದಿನ
ಅಮೃತ ಮಹೋತ್ಸವ
ಸ್ವಚ್ಛತಾ ಪಕ್ವಾಡ
ಪೋಷಣ ಅಭಿಯಾನ
ಆ ಸ್ಪರ್ಧೆ ಈ ಸ್ಪರ್ಧೆ
ನಮ್ಮ ಮಕ್ಕಳೇನು
ಯಂತ್ರಗಳೆ ಕೀಲಿ
ಕೊಟ್ಟಂತೆ ತಿರುಗಲು!!
ಭಾಗವಹಿಸುವವರು
ಬೆರಳೆಣಿಕೆಯ ಮಕ್ಕಳು
ಬಲಿಪಶುಗಳು ಹಲವು ಮಕ್ಕಳು

ಹತ್ತರಲ್ಲಿ ನಾಲ್ಕು ಮಾತ್ರ
ಗಟ್ಟಿ ಕಾಳು ಉಳಿದೆರಡು
ಕಡಿ ನುಚ್ಚು ಮತ್ತೆ ನಾಲ್ಕು
ತೌಡು ಬರೀ ಜೊಳ್ಳು
ಅಕ್ಷರ ಜೋಡಿಸಿ
ಓದಲಾರಂಭಿಸಿದವ
ಕವನ ಬರೆಯಬೇಕಂತೆ ಕವನ!!

ಕೂಸು ಹುಟ್ಟುವ ಮೊದಲೇ
ಕುಲಾವಿ ಹೊಲಿಸಿದಂತೆ
ಆನ್ಲೈನ್ ತರಬೇತಿ ಬೇರೆ!
ತಟ್ಟಿ ಬಡಿದು ಬೆದರಿಸುವ
ಅಧಿಕಾರಿ ವರ್ಗ ಒಟ್ಟಾರೆ
ಶಿಕ್ಷಕನ ಮಕ್ಕಳ ಪಾಡು
ಮತ್ಯಾರಿಗೂ ಬೇಡ ನೋಡು!

……………
ಅನಾಮಿಕ ಕವಿ

Leave a Reply

Back To Top