ಕಾವ್ಯ ಸಂಗಾತಿ
ಗಜಲ್
ಯ.ಮಾ.ಯಾಕೊಳ್ಳಿ
ನೀ ನಡೆವ ದಾರಿಯಲೆಲ್ಲ ಮುತ್ತು ರತ್ನ ಸುರಿದುವಂತೆ ಖಬರನ್ನೇಕೆ ಕಳಿಸಲಿಲ್ಲ
ನಿನ್ನ ಮೆದುವಾದ ಪದತಲಕ್ಕೆ ಹೂಗಳು ಮುತ್ತನಿತ್ತವಂತೆ ಖಬರನ್ನೇಕೆ ಕಳಿಸಲಿಲ್ಲ
ನಿನ್ನ ಮುಖಮಂದಾರ ಜಗವ ಬೆಳಗುವದು ಎದುರು ನಕ್ಷತ್ರಗಳೇ ಮಂಕು
ಸೂರ್ಯ ಚಂದ್ರರೇ ನಾಶಿಕಾಗ್ರದ ಮೇಲೆ ನಯನವಂತೆ ಖಬರನ್ನೇಕೆ ಕಳಿಸಲಿಲ್ಲ
ನೀ ನನ್ನೆದೆಯ ತಾಕದೆ ಎದೆಯ ಕವಾಟು ಗಳು ಬಿರಿದು ಹೋಗಿವೆ.
ಬೆರಳ ಸ್ಪರ್ಶವಿಲ್ಲದೆ ತನುವು ದನಿಯ ಕಳೆದಿದೆಯಂತೆ ಖಬರನ್ನೇಕೆ ಕಳಿಸಲಿಲ್ಲ
ಅಲ್ಲೆಲ್ಲೊ ನಿನ್ನ ಬೆಳಕು ಸೂಸಿ ಜಗವ ಬೆಳಗಿದೆ ನನ್ನೆದೆಯ ದೀಪ ಮಂಕು
ಕನಸ ಕಳೆದುಕೊಂಡ ನನ್ನೊಳಗೆ ಜೀವ ತುಂಬಿದ್ದಿಯಂತೆ ಖಬರನ್ನೇಕೆ ಕಳಿಸಲಿಲ್ಲ
ಉಸಿರು ಕಳೆದುಕೊಂಡ ಈ ಜೀವ ಕಾದಿದೆ ಮಾಂತ್ರಿಕ ಸ್ಪರ್ಶಕಾಗಿ
ಕರಚಾಚಿ ಬೇಡುತ್ತಿದ್ದಾನೆ ‘ ಯಯಾ ‘ಕಾರುಣ್ಯ ನಿಧಿಯಂತೆ ಖಬರನ್ನೇಕೆ ಕಳಿಸಲಿಲ್ಲ