ಕಾವ್ಯ ಸಂಗಾತಿ
ಆಧುನಿಕ ವಚನ
ಯ.ಮಾ.ಯಾಕೊಳ್ಳಿ
೧
ವೇದಿಕೆಯನೇರಿ ಮಾತಾಡಿದ್ದು ಅಧಿಕ
ಸಾಧನೆಯ ಕುದುರೆಯನು ಹತ್ತಿದ್ದು ಕ್ಷಣಿಕವಯ್ಯ
ಆದರ್ಶದ ಮಾತಾಡಿದ್ದು ಅಧಿಕ, ನಿಜವಾಗಿ ನಡೆದದ್ದು ಕ್ಷಣಿಕವಯ್ಯ
ಬಿತ್ತರದ ಕನಸು ಕಂಡದ್ದು ಅಧಿಕ ಚಪ್ಪರವನೇರಿದ್ದೂ
ಕ್ಷಣಿಕವಯ್ಯ
ಆಗದ ಹೋಗದ ಮಾತಲೆ ಬದುಕು ಹೋಯಿತು, ನಿಜದ ನಡೆಯತ್ತ ಸಾಗಿಸಯ್ಯ ಸೌಗಂಧೀಪುರಾಧೀಶ್ವರಾ
೨
ನನಗೆ ತೋರಿದಂತೆಬರೆದೆ
ವಚನವೆಂದು ಕರೆದೆ
ನೀನು ಒಪ್ಪದೆ,ನಿನ್ನ ನಿನ್ನವರ ತಕ್ಕಡಿಯಲ್ಲಿ ತೂಗಿ ಬೆಲೆಕಟ್ಟಿಸಯ್ಯ ಸೌಗಂಧಿಪುರಾಧೀಶ್ವರಾ
೩
ಮನದ ಕಲ್ಮಷ ಮೀರದೆ ಮನೆಯ ಕಲ್ಮಷ ಹೋಗದಯ್ಯ
ತನುವಿನ ತೋಷ ಕಳೆಯದೆ ಹೊರಗನ ರೋಷ ಹೋಗದಯ್ಯ
ಬರಿ ಹೊರಹೊರಗನೆ ತೋರಿ ಬೆರಗುಗೊಳಿಸಿದೆನಯ್ಯ
ಒಳಗು ತಿಳಿಯುವ ಪರಿಯ ನೀನೇ ಬಲ್ಲೆಯಯ್ಯ ಸೌಗಂಧೀಪುರಾಧೀಶ್ವರಾ
೪
ಒಲವಿನ ಮಾತನಾಡುವದು ಸರಳ ಒಲವ ನಿಭಾಯಿಸುವದು ಕಷ್ಟವಯ್ಯ.
ಸತ್ಯದ ಮಾತನಾಡುವದು ಸರಳ ಸತ್ಯದ ದಾರಿಯಲಿ ನಡೆವುದು ಕಠಿಣವಯ್ಯ
ಸರಳತೆಯಮಾತು ಸರಳ ,ಸರಳತೆಯ ದಾರಿ ಸುಲಭವಲ್ಲವಯ್ಯ
ನಡೆದಂತೆ ನುಡಿದಂತೆ,ಬದುಕಿದವರು ಶರಣರಾದರು.
ಉಳಿದವರಿಲ್ಲಿಯೆ ತಿರುಗುವ ಹುಳವಾದೆವಯ್ಯ ಸೌಗಂಧೀಪುರಾಧೀಶ್ವರಾ
೫
ನಿತ್ಯವೂ ನಾನಿಡುವ ಹೆಜ್ಹೆಗಳು ನನ್ನ ಚುಚ್ಚುತಿವೆಯಯ್ಯ
ನಿತ್ಯವೂ ನಾನಾಡುವ ಮಾತುಗಳು ನನ್ನ ಚುಚ್ಚುತಿವೆಯಯ್ಯ
ಮಾತಿನಲಿ ಮನಾರ ಕೆಲಸ ಸುಮಾರವಾದಂತೆ ಬದುಕಿದೆನಯ್ಯ
ನೀನಾದರೂ ಮಾತು ಮನದಲಿ ಏಕವಾದವರ ತೋರಿ ಸಲಹಯ್ಯ ಸೌಗಂಧೀಪುರಾಧೀಶ್ವರಾ