ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ಕವಿತೆ-ತೇವ ಕಾಯ್ವ ನೆನಪುಗಳು

ಕಾವ್ಯ ಸಂಗಾತಿ

ತೇವ ಕಾಯ್ವ ನೆನಪುಗಳು

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ತುಂಬುಗಣ್ಣಲ್ಲಿ ತೂಗಿದೆ
ಹಿಗ್ಗಿನಲಿ ಬೀಗಿದೆ
ಗಾಳಿಯಲಿ ತೇಲಿ
ಹಗುರ ಕರಗಿದೆ
ಪ್ರೀತಿ, ಪ್ರೇಮ ಎನ್ನುತ-
ಬದುಕಿನುದ್ದಕ್ಕೂ….
ನನಗೆ ಅರಿವಿರದೆ…!
ಅವಳು ಮಾತ್ರ…ಕವಿತೆಯಾಗಲಿಲ್ಲ

ಕಾತರಿಸುವ ಕನಸುಗಳ
ಬೀಜ ಊರಿದೆ
ತೇವ ಕಾಯ್ವ ಭರದಲಿ
ಅದೇಕೋ….
ಚಿಗಿತು ಮೊಳೆಯಲಿಲ್ಲ
ನೆಲಕ್ಕಿಳಿಯಲಿಲ್ಲ
ನವಿರು ತುಮುಲದ ಬೇರು

ರಾಜಿಗಾಗಿ
ಪ್ರೀತಿಯ ತಲೆ ಸವರಿದೆ
ವಸಂತದಲ್ಲೂ
ಎಲೆ ಉದುರಲಿಲ್ಲ
ಕೊರಳು ಬಿಗಿಯಲಿಲ್ಲ
ಕರಾಳ ಗಾಳಿಯಂತೆ
ಅವಳ ನೆರಳೂ ಅಲ್ಲಿರಲಿಲ್ಲ

ಬಸಿರಾದ ಹಾಳೆಯ
ಮಸಿಯ-
ಮಳೆಯಲಿ ತೊಯ್ಸಿದೆ
ಅದರ ಮತ್ತು ನನ್ನ
ಉಸಿರು ನಿಲ್ಲುವತನಕ
ನನ್ನ ದುಸ್ಥರ ಬರಹದ
ಅಳಲು…..
ಅವಳೆದೆಗಿಳಿಯಲಿಲ್ಲ

ನನಗೀಗ-
ಕತ್ತಲು ಬೆಳಕಿನ ಭಯವಿಲ್ಲ
ಪ್ರತಿ ಬೆಳಗೂ-
ಹಣೆಯ ಮೇಲೆ ಸಹಸ್ರ ನೆರಿಗೆಗಳು,
ಆಗಂತುಕವಾಗಿ-
ಬಂದ ಬೋಳು ತಲೆಯು
ಸಾಂತ್ವಾನ ಹೇಳುತಿದೆ
ಅವಳ ಅಲೆಯಬ್ಬರ ಮಾತ್ರ ಕರಗಲಿಲ್ಲ.

ಅವಳು ಬರುತ್ತಾಳೆ
ಹೆಜ್ಜೆ ಗೆಜ್ಜೆಗಳ ಸದ್ದಿಲ್ಲದೆ
ದಿನವೂ ರಾತ್ರಿ
ನಾನು ಸಾಯುವ ಹೊತ್ತು..!
ವಿಷ ವರ್ತುಲ ಕಡಲಿಂದ
ಕವಿತೆ ಹೊತ್ತು,
ನನ್ನ ಬಾಳ ಬೆಳಕ ನುಂಗಿ
ಮತ್ತೆ….ಮತ್ತೆ…ಮುಳ್ಳ ಬೇಲಿಯೊಳಗೆ ತುಳಿಯುತ್ತ
ಪಾತಾಳಕ್ಕಿಳಿಸುತ್ತ..!


Leave a Reply

Back To Top