ಅಂಕಣ ಸಂಗಾತಿ

ಸಿನಿ ಸಂಗಾತಿ

ದ ಟನೆಲ್ (ಇಂಗ್ಲಿಷ್) THE TUNNEL

ಹೆಸರು _ದ ಟನೆಲ್ (ಇಂಗ್ಲಿಷ್) THE TUNNEL

ನಿರ್ದೇಶನ -ಅರಶ್ ಆಸ್ಟೀಯಾನಿ

ನಿರ್ಮಾಣ-  ಯಾನ ಗ್ರಿಫಿನ್

ಸಂಗೀತ -ಸಿಜೆ ಮಿರ್ರಾ

ಸಂಕಲನ -ಸ್ಟುವರ್ಟ್ ಗೇಝರ್ಡ್

 ಛಾಯಾಗ್ರಹಣ -ನಿಕ್ ಮೋರಿಸ್

ತಾರಗಣ -ಮಹಮ್ಮದ್ ಅಮಿರಿ ರಮಿನ್ ಘರಾಹಾನಿ, ಜಾರ್ಜ್ ಜಾರ್ಜಿಯೋ

ಅದೊಂದು ರೈಲು ಸುರಂಗ. ಅಲ್ಲಿ ದಟ್ಟವಾದ ಕತ್ತಲು ಆವರಿಸಿದೆ. ಆ ಕತ್ತಲನ್ನು ಸೀಳಿಕೊಂಡು ಬೆನ್ನಿಗೆ ತಮ್ಮ ಲಗೇಜ್ ಬಿಗಿದುಕೊಂಡು ಏದುಸಿರು ಬಿಡುತ್ತಾ ಓಡುತ್ತಾ ಬರುತ್ತಿರುವ ವ್ಯಕ್ತಿಗಳು ಕಾಣುತ್ತಾರೆ .ಓಡುತ್ತಾ ಬಂದಿದ್ದರಿಂದ ಅವರ ಮುಖದಲ್ಲಿ ಬೆವರು ಇಳಿಯುತ್ತಿದೆ.   ಮುಂದೆ ಕ್ರಮಿಸುವ ದಾರಿ ಬಹಳಷ್ಟು ಇದೆ . ಗಮ್ಯವೂ ಯಾವಾಗ ಸಿಗಬಹುದು ಎಂಬ ತವಕ ಅವರ ಮುಖದಲ್ಲಿ ಕಾಣುತ್ತಿದೆ . ಸವೆಸಿದ ದಾರಿಗಿಂತ ಸವೆಸಬೇಕಾದ ಹಾದಿ ಇನ್ನೆಷ್ಟು? ಎಂಬ ಆತಂಕ ಕಾಣುತ್ತಿದೆ…!!

       ಹಾಗಾದರೆ ಯಾರಿವರು ಇವರು ಹೀಗೇಕೆ ?ಓಡುತ್ತಿದ್ದಾರೆ… ಎಂಬ ಪ್ರಶ್ನೆ ಮೂಡಬಹುದು. ಅದುವೇ ಈ ಕಿರುಚಿತ್ರ – ‘ದ ಟನಲ್.’ THE TUNNEL

       ಅಂದ ಹಾಗೆ ಇಡೀ ಕಿರು ಚಿತ್ರ ನಡೆಯುವುದು ರೈಲು ಸುರಂಗದಲ್ಲಿ .ಮೊದಲ ಒಂದು ದೃಶ್ಯವನ್ನು ಹೊರತುಪಡಿಸಿದರೆ ಇಡೀ ಚಿತ್ರ ಸುರಂಗದೊಳಗೆ ಘಟಿಸುತ್ತದೆ .ವರ್ತಮಾನದಲ್ಲಿಯೇ ಘಟಿಸುತ್ತದೆ.

        ಚಿತ್ರದಲ್ಲಿ ಕುಟುಂಬವನ್ನು ತೊರೆದು ಬಂದಿರುವ ಮೂವರು ನಿರಾಶ್ರಿತರು ಇಂಗ್ಲೆಂಡ್ ನತ್ತ ಹೊರಟಿದ್ದಾರೆ ಪೊಲೀಸರ ಕಣ್ಣು ತಪ್ಪಿಸಿ ಅವರು ಈ ದೇಶಕ್ಕೆ ನುಸುಳಲು ಇರುವ ದಾರಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವಿನ ರೈಲ್ವೆ ಸುರಂಗ. ಸುರಂಗದ ದಾರಿಯೋ ಬಹಳಷ್ಟು ದೊಡ್ಡದು. ಅದಲ್ಲದೆ ಆ ಸುರಂಗವನ್ನು ಅವರು, ಒಳಗೆ ಒಂದು ರೈಲು ಬರುವ ಮೊದಲೇ ದಾಟಬೇಕು.

       ತಮ್ಮ ದೇಶವನ್ನು ಕುಟುಂಬವನ್ನು ತೊರೆದು ಅತಂತ್ರವಾದ ದುಃಖ ಹತಾಶೆ ಒಂದು ಕಡೆ. ಪೊಲೀಸರ ಕೈಗೆ ಸಿಕ್ಕಿಬಿಡುವ ಆತಂಕ ಇನ್ನೂಒಂದು ಕಡೆ. ಈ ಎಲ್ಲ ಭಾವಗಳು ಅವರ ಮುಖದಲ್ಲಿ ಎದ್ದು ಕಾಣುತ್ತಿವೆ.

       ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಒಬ್ಬರಲ್ಲಿ ಇನ್ನೊಬ್ಬರು ಆತ್ಮವಿಶ್ವಾಸ ತುಂಬಿಕೊಳ್ಳುತ್ತಲೇ, ಆ ಮೂವರು ಸುರಂಗದಲ್ಲಿ ಓಡಲು ಶುರು ಮಾಡುತ್ತಾರೆ .ಆದರೆ ಮೈಯಲ್ಲಿ ಬೆವರು ಬಸೆಯುತ್ತಿದ್ದಂತೆಲ್ಲ ಮಾತುಗಳು ಕಡಿಮೆಯಾಗುತ್ತದೇ ಭೀತಿ ಕುಡಿಯುಡೆಯುತ್ತದೆ.

        ಸುರಂಗದ ನಡುವಿನಲ್ಲಿ ರೈಲು ಬಂದರೆ ಪ್ರಾಣಪಾಯ ಇಂಗ್ಲೆಂಡಿನ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಸೆರೆವಾಸ. ಇಂತಹ ಅತಂತ್ರದ ಅನಿಶ್ಚಿತತೆಯಲ್ಲಿ ಅವರ ಓಟ ನಿಲ್ಲದು. ಆ ಓಟ ಸಾವು ಬದುಕಿನ ಹೋರಾಟ.

         ಸುರಂಗದ ನಡುವಿನಲ್ಲಿರುವಾಗಲೇ ಒಮ್ಮೆ ರೈಲು ಬಂದುಬಿಡುತ್ತದೆ .ಸುರಂಗದ ನಡುವಿನಲ್ಲಿ ರೆಫ್ರೀಗಾಗಿ  ಇಟ್ಟಿದ್ದ ಒಂದು ಸಣ್ಣ ಸಂಧಿ ಇರುತ್ತದೆ .ಅಲ್ಲಿ ಕೂರಲು ಇಬ್ಬರಿಗೆ ಮಾತ್ರ ಅವಕಾಶ. ಮೂವರಲ್ಲಿ ಒಬ್ಬನು ಉಳಿದಿಬ್ಬರಿಗೆ ಅವಕಾಶ ಮಾಡಿಕೊಟ್ಟು ತಾನು ಮುಂದಕ್ಕೆ ಓಡುತ್ತಾನೆ.

 ಇರುವ ಸಣ್ಣ ಜಾಗದಲ್ಲಿ ಜೀವ ಕೈ ಹಿಡಿದು ಇಬ್ಬರುಕುಳಿತಿದ್ದಾರೆ .ರೈಲು ಬಂದೇ ಬಿಡುತ್ತದೆ. ಜೋರಾಗಿ ಶಬ್ದ ಮಾಡುತ್ತಾ ಸಾಗುವ ರೈಲಿನ ಬೆಳಕು ಇವರ ಮುಖಗಳ ಮೇಲೆ ಹಾಯುತ್ತದೆ .ಅಲ್ಲಿ ಕಾಣುವ ಜೀವ ಭಯ ಆತಂಕ ನೋಡುಗರನ್ನು ಒಂದು ಕ್ಷಣ ಅಲ್ಲಾಡಿಸಿ ಬಿಡುತ್ತದೆ. ಸಾವಿಗೆ ಬಹಳ ಹತ್ತಿರವಾಗಿ ಬಿಡುವ ಆ ಕ್ಷಣಗಳು ಎದೆಯ ಬಡಿತವನ್ನು ಪ್ರಯಾಣಿಕರಲ್ಲಿಯೂ ನೋಡುಗರಲ್ಲಿಯೂ ಏಕಕಾಲದಲ್ಲಿ ಹೆಚ್ಚಿಸುತ್ತದೆ.

         ರೈಲು ಹೋದ ನಂತರ ಇಬ್ಬರ ಪ್ರಯಾಣ ಮತ್ತೆ ಮುಂದೆ ಸಾಗುತ್ತದೆ .ಮುಂದೆ ಹೋಗಿ ನೋಡಿದರೆ ಮೊದಲು ಓಡಿದ ವ್ಯಕ್ತಿ ಯ ದೇಹ ರೈಲ್ವೆ ಹಳಿಯಲ್ಲಿ ಬಿದ್ದು ನಜ್ಜುಗಜ್ಜಾಗಿದೆ . ಇನ್ನೊಂದು ಕ್ಷಣಕ್ಕೆ ಬಂದುಬಿಡಬಹುದಾದ ಮತ್ತೊಂದು ರೈಲು ತಮ್ಮ ನ್ನ ಛಿದ್ರ ಗೊಳಿಸುತ್ತದೆ ಎಂಬ ಭಯ ಆ ಇಬ್ಬರು ಪ್ರಯಾಣಿಕರಲ್ಲಿ .ಕಿಲೋಮಿಟರ್ ಗಟ್ಟಲೆ ಓಡಿಬಂದು ಬಾಯೊಳಗೆ ಶಕ್ತಿಯುಡುಗಿ ಹೆಜ್ಜೆ ಎತ್ತಿಡಲಾಗದ ಅಸಹಾಯಕತೆ ಇನ್ನೊಂದು ಕಡೆ ಅವರನ್ನು ಹೈರಾಣಾಗಿಸಿದೆ.

       ತುದಿ ಇಲ್ಲದ ಸುರಂಗ .ಅಲ್ಲಿ ಸಾವು ಬದುಕಿನ ಒಂದು ಭಾಗ .ಅವರ ಆ ಓಟವೋ ಸಾವನ್ನು ಗೆಲ್ಲಲು ನಡೆಸುವ ಎಡಬಿಡದ ಹೋರಾಟ .ಈ ಸಾವು ಬದುಕಿನ ನಡುವಿನ ಹೋರಾಟವನ್ನು ರೋಚಕವೂ ಅಷ್ಟೇ ದಾರುಣವು ಆಗಿ ಸೆರೆಹಿಡಿದಿರುವುದೇ ಈ ಕಿರು ಚಿತ್ರದ ವೈಶಿಷ್ಟ್ಯ.

     ಈ ಕಿರು ಚಿತ್ರದಲ್ಲಿ ಅಂತಹ ಫ್ಲಾಶ್ ಬ್ಯಾಕ್ ಗಳಿಲ್ಲ .ಪಾತ್ರದ ಗುರಿ ಏನು ಎಂಬುದರ ಸ್ಪಷ್ಟ ಚಿತ್ರಣವು ಇಲ್ಲ .ಮೂರು ಮುಖ್ಯ ಪಾತ್ರಗಳಲ್ಲಿ ಒಂದು ಪಾತ್ರದ ಫೋನ್ ಸಂಭಾಷಣೆಯ ಹೊರತು ಬೇರೆ ಕಥನದ  ಎಳೆಯ ಸುಳಿವಿಲ್ಲ .ಆದರೂ ಈ ಚಿತ್ರ ಉಸಿರು ಬಿಗಿ ಹಿಡಿದು ನೋಡಿಸಿಕೊಳ್ಳುತ್ತದೆ .ದೂರದಲ್ಲೆಲ್ಲೋ ಅಸ್ಪಷ್ಟವಾದ ರೈಲಿನ ದನಿ ಹತ್ತಿರವಾದಂತೆ ವೇಗ ಹೆಚ್ಚಿಸಿಕೊಂಡು ತನ್ನ ಶಬ್ದವನ್ನು ತಾನೇ ಏರಿಸಿಕೊಂಡು ಕಿವಿಗೆ ಅಪ್ಪಳಿಸಿ ತನ್ನ ಸದ್ದನ್ನು ತಾನೇ ಗುಡಿಸಿಕೊಂಡು ಸಾಗು ವಂತೆ ಈ ಕಿರು ಚಿತ್ರ ನೋಡಿದ ಅನುಭವ.

        ಸಾವು ಎಲ್ಲರಿಗೂ ಒಂದು ಪ್ರಶ್ನೆಯೇ .ಅದು ನಿರಂತರವಾಗಿ ನಮ್ಮಲ್ಲಿ ಭಯ ಆತಂಕ ಮೂಡಿಸಿ  ಕಾಡುತ್ತಲೇ ಇರುತ್ತದೆ ಈ ಸಾವು ಕಥೆಗಳಲ್ಲಿ ಸಾಹಿತ್ಯದಲ್ಲಿ ಸಿನಿಮಾದಲ್ಲಿ ವಸ್ತುವಾಗಿದೆ .ಅದರ ರೋಚಕತೆ ನಮ್ಮಲ್ಲಿ ಬೆರಗು ಮೂಡಿಸಿದೆ .ಅಂತಹ ಸಾವಿನೊಂದಿಗಿನ ಮುಖಮುಖಿ ಈ ಕಿರು ಚಿತ್ರದಲ್ಲಿ ನಿರಂತರವಾಗಿದ್ದು ಕ್ಷಣ ಕ್ಷಣಕ್ಕೂ ನಮ್ಮನ್ನು ಆತಂಕದಲ್ಲಿ ಸಿಕ್ಕಿಸುತ್ತದೆ.

              ಈ ಚಿತ್ರ ನೋಡುವಾಗ ಜಗತ್ತಿನಾದ್ಯಂತ ಕಾಡುತ್ತಿರುವ ನಿರಾಶ್ರಿತರ ಸಮಸೆಯು ನೆನಪಾಗದಿರದು .ತಮ್ಮ ದೇಶದಲ್ಲಿ ನೆಲೆ ಕಳೆದುಕೊಂಡು ಅಲೆಯುತ್ತಿರುವ ರೋಹಿಂಗ್ಯಾ ಮುಸಲ್ಮಾನರ ಅತಂತ್ರದ ಸ್ಥಿತಿ ಒಮ್ಮೆ ನೆನಪಾಗದಿರದು. ಶ್ರೀಮಂತ ದೇಶ ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಕೆನಡಾ ಮೂಲಕ ನುಸುಳಲು ಪ್ರಯತ್ನಿಸುವ ನಿರಾಶ್ರಿತರು ಕೊರೆಯುವ ಚಳಿ, ಹಿಮಪಾತವನ್ನು ಲೆಕ್ಕಿಸದೆ ಜೀವವನ್ನು ಬಿಗಿ ಹಿಡಿದು ಅಮೆರಿಕವನ್ನು ಪ್ರವೇಶಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ . ಈ ಪ್ರಯತ್ನದಲ್ಲಿ ಅಲ್ಲಿನ ಪ್ರತಿಕೂಲ ವಾತಾವರಣವನ್ನು ತಡೆಯಲಾರದೆ ಹಲವರು ಜೀವವನ್ನೇ ತೆತ್ತಿದ್ದಾರೆ. ಇಂತಹ ಜನರ ಬದುಕ ಬವಣೆ ಈ ಕಿರುಚಿತ್ರ ನೋಡುವಾಗ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತದೆ.

    ಹಾಗಾಗಿಯೇ ಈ ಕಿರು ಚಿತ್ರ ಏಕಕಾಲಕ್ಕೆ ಮೂವರು ವ್ಯಕ್ತಿಗಳ ಜೀವದ ಹೋರಾಟದ ಜೊತೆಗೆ ನಮ್ಮೆಲ್ಲರ ಬದುಕಿನ ಓಟಕ್ಕೆ ರೂಪಕವೂ ಆಗಿಬಿಡುತ್ತದೆ .ಒಟ್ಟಾರೆಯಾಗಿ ಉಸಿರು ಬಿಗಿ ಹಿಡಿದು ಓಡುವ ಈ ಮೂವರು ನಮ್ಮಲ್ಲಿಯೂ ಅದೇ ಓಟದ ಭಾವವನ್ನು ಮೂಡಿಸುವುದು ಚಿತ್ರದ ವಿಶೇಷ. ಚಿತ್ರವು ಯೂಟ್ಯೂಬ್ ನಲ್ಲಿ ಲಭ್ಯವಿದೆ.

ಹೆಸರು _ದ ಟನೆಲ್ (ಇಂಗ್ಲಿಷ್) THE TUNNEL

ನಿರ್ದೇಶನ -ಅರಶ್ ಆಸ್ಟೀಯಾನಿ

ನಿರ್ಮಾಣ-  ಯಾನ ಗ್ರಿಫಿನ್

ಸಂಗೀತ -ಸಿಜೆ ಮಿರ್ರಾ

ಸಂಕಲನ -ಸ್ಟುವರ್ಟ್ ಗೇಝರ್ಡ್

 ಛಾಯಾಗ್ರಹಣ -ನಿಕ್ ಮೋರಿಸ್

ತಾರಗಣ -ಮಹಮ್ಮದ್ ಅಮಿರಿ ರಮಿನ್ ಘರಾಹಾನಿ, ಜಾರ್ಜ್ ಜಾರ್ಜಿಯೋ


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top