ಅನಸೂಯ ಜಹಗೀರದಾರ-ಗಜಲ್

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

ವಾರೆ ನೋಟದಲಿ ನೋಡಿ ಸುಮ್ಮನಿರೆ ಅವನು ಒಲಿಯದಿರುವನೆ
ಸೋಲ ತುರುಬಿನ ಮುಡಿಯು ಬಿಗಿದರೆ ಅವನು ಒಲಿಯದಿರುವನೆ

ಬಿಂಕವೇತಕೆ ಸಿಂಗಾರಿ ನೀ ಕಾದು ನಿಂತಿಹೆ ಅವನಿಗದು ತಿಳಿಯದೆ
ಕುಡಿನೋಟದಲಿ ತುಸು ನಗೆಯು ಕರೆದರೆ ಅವನು ಒಲಿಯದಿರುವನೆ

ಗರದಿ ಗಮ್ಮತ್ತಿನ ಗರಜು ನಿನ್ನದು ಗಿಣಿರಾಮ ಕೂಗಿ ಹೇಳುತಿದೆ
ಬಿರಿವ ಎದೆ ನೈದಿಲೆ ಘಮಲು ಸೆಳೆದರೆ ಅವನು ಒಲಿಯದಿರುವನೆ

ಕಪ್ಪು ಕೇಶದಿ ಇಳಿದ ಕತ್ತಲು ಮೊಗ ಚಂದ್ರಿಕೆಯ ನೆನಪಿಸಿತು
ಉಸುರುವ ನುಡಿಯನು ಅಧರದಿ ಅಡಗಿಸಿದರೆ ಅವನು ಒಲಿಯದಿರುವನೆ

ಯಾವ ಬಣ್ಣಗಾರನ ಕುಂಚವೋ ತೀಡಿ ತೀಡಿದ ಚಿತ್ರ ಸೆಳೆಯುತಿದೆ
ಭಿತ್ತಿ ಚಿತ್ರವು ಚಿತ್ತವ ಕೆದಕಿ ಕಲಕಿ ನಾಟಿದರೆ ಅವನು ಒಲಿಯದಿರುವನೆ

ಅಷ್ಟ ಮೋಹ ವರ್ಣದ ಮಾಯಾ ಕುಂಚವಿದೆ ಈ ಜಗದಲಿ ಅನು
ಸತ್ಯ ಶಿವ ಸುಂದರತೆ ಪ್ರತಿ ದಿಟ್ಟಿಯಲಿ ಸಾಕಾರವಾದರೆ ಅವನು ಒಲಿಯದಿರುವನೆ

****

ಅಷ್ಟಮೋಹ=ದಾಸವರೇಣ್ಯರು ಅಷ್ಟಮೋಹಗಳ ವಿವರ ಕೊಡುತ್ತಾರೆ
ವರ್ಣಿಸುತ್ತಾರೆ.
ಅದರಿಂದ ಪಾರು ಮಾಡೆಂದು ಕರ್ತ ಹರಿಯ ನೆನೆಯುತ್ತಾರೆ
*ಶಿಶು, ಸತಿ, ಜನನಿ ಜನಕ, ರಸಿಕ ಮಿತ್ರ, ರಾಜ, ಪಶು, ಭೂ , ಬಂಧುವರ್ಗ
ಇವು ಅಷ್ಟ ಮೋಹಗಳು.

Leave a Reply

Back To Top