ಕಾವ್ಯ ಸಂಗಾತಿ
ಸಂಧ್ಯಾರಾಗದ ಘಮಲು
ಈರಪ್ಪ ಬಿಜಲಿ
ಮುಡಿಗೆ ಮುಡಿಸುವೆ ಬಾರೆ ಮೆಲ್ಲಗೆ
ಘಮಿಸುವ ಹೂವಾ
ಮಡಿಲ ತುಂಬಿದ ಮನವ ದಹಿಸುವ
ಮರೆಸುವೆ ನೋವಾ ||
ಮನಸು ಮಲ್ಲಿಗೆ ಸ್ನೇಹ ಸಂಪಿಗೆ
ನುಡಿಜೇನ್ಗಡಲೂ
ಮುನಿಸು ಸರಿಸುತ ಸೊಗಸು ತೋರುತ
ನಗಿಸನುದಿನವೂ ||
ಹೊನ್ನ ಹೃದಯದ ಪಟ್ಟದರಸಿಯೆ
ಬಾ ಸತಿ ಸುಮತಿಯೆ
ಚೆಂಗುಲಾಬಿಯೆ ನಿನ್ನ ಕಾಯುವೆ
ಜತೆಗಿರುವೆ ಮುಳ್ಳಂತೆ ||
ಗಡಗಿ ಒಳಗಿನ ಉಪ್ಪು ಗಂಜಿಯ
ಹಂಚ್ಕೊಂಡು ಕುಡಿಯುವಾ
ಗುಡುಗು ಸಿಡಲದು ಏನೆ ಬರಲದು
ಮುನ್ನುಗ್ಗಿ ನಡೆಯುವಾ ||
ಹೃದಯ ಹೃದಯವು ಅರಿತು ಬಾಳಲು
ಬದುಕಲ್ಲಿ ಅನುರಾಗ
ಯೋಗ ಭೋಗವು ಬೆರೆತು ಬಂದರೆ
ಜೀವನ ಸಂಧ್ಯಾರಾಗ ||