ಮರವಾಗಿದ್ದರೆ…ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ

ಕಾವ್ಯ ಸಂಗಾತಿ

ಮರವಾಗಿದ್ದರೆ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ನಾ ಮರವಾಗಿದ್ದರೆ
ಆರಡಿ ಆಸುಪಾಸಿನ
ಕುಬ್ಜ ಖಂಡಿತ ಆಗುತ್ತಿರಲಿಲ್ಲ
ಬಂಗಲೆಗಳ ಮೀರಿ ಅಂತಸ್ತುಗಳ
ಲೆಕ್ಕದಲ್ಲಿ ಎದ್ದು ನಿಲ್ಲುತ್ತಿದ್ದೆ

ಹೆತ್ತವರನೆ ಮರೆತ ಕೆಟ್ಟ
ಮಕ್ಕಳ ಹಾಗಲ್ಲದೆ
ಸದಾ ಮಣ್ಣು ನೀರಿನ ನಂಟಿನ
ಬಂಧುವಾಗಿ ಬೇರಿಳಿಸುತ್ತಿದ್ದೆ
ಮಣ್ಣು ಇಳಿದಷ್ಟು ಆಳ

‘ನನಗೆ ನಾನೇ’ ಸ್ವಾರ್ಥದ ಬದಲು
ವಿವಿಧ ಪಕ್ಷಿಗಳ ಆಶ್ರಯ ತಾಣ
ಕೀಟ ವೈವಿಧ್ಯಗಳ ಗೂಡಾಗಿ
ಮರಕುಟಿಕದಂಥ ಹಕ್ಕಿಗಳ
ಆಹಾರವಾಗುತ್ತಿದ್ದೆ

ಬಿರುಗಾಳಿ ಸುಂಟರಗಾಳಿಗೆ
ನಾನೇ ಪ್ರಥಮ ಮೈ ಆಗುತ್ತಿದ್ದೆ
ನನ್ನ ಬದುಕಿನುದ್ದಕೂ
ನಿಮ್ಮ ಪುಪ್ಪಸಗಳ ಆಹಾರವಾಗುತ್ತಿದ್ದೆ
ಬಿಸಿಲಲಿ ಛತ್ರಿ ಚಾಮರ
ಮಳೆಗೆ ಗೊರಗು ಹೊದಿಕೆಯಾಗುತ್ತಿದ್ದೆ
ನಿಮ್ಮ ಇಡೀ ಮನೆ ಬೀದಿಗಳ
ನೆರಳ ತವರಾಗುತ್ತಿದ್ದೆ

ಕೊನೆಗೆ ಕಾರಣಾಂತರ ಬಿದ್ದು
ನೆಲ ಒರಗಿದರೂ ನನ್ನ
ಮೈ ಕೋಶಕೋಶವೂ ನಿಮ್ಮ
ಉಪಯೋಗ ವೈವಿಧ್ಯವಾಗಿ
ಅಂತ್ಯಕಾಣುತ್ತಿದ್ದೆ
ಆದರೆ ನಾ ಮರವಾಗಲಿಲ್ಲ
ಈ ಬದುಕಿನಲಿ…


5 thoughts on “ಮರವಾಗಿದ್ದರೆ…ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ

  1. ಇಷ್ಟೊಂದು ವೈವಿಧ್ಯ ವಿಷಯಗಳು, ಶ್ರೇಷ್ಠ ಚಿಂತನೆಗಳು ನಿಮ್ಮ signature ❤

  2. ಅದ್ಭುತವಾದ ಕವಿತೆ. ಹೃತ್ಪೂರ್ವಕ ಅಭಿನಂದನೆಗಳು ನೀಲಣ್ಣ.

  3. Thumba chennagide Kavithe
    Bolumarada chithraviddaru,
    Neelagaganadduddakuu rembe habbisida Pari hrudaya muttuthade, danya vadagalu
    Jagannatha hebbaka

  4. ನಿಖಿತ, ರಮೇಶ್ ಮತ್ತು ಜಗನ್ನಾಥ ನಿಮಗೆಲ್ಲ ಅನಂತಾನಂತ ಧನ್ಯವಾದಗಳು…
    ನಿಮ್ಮ, ನೀಲಕಂಠ ಮೂರ್ತಿ

Leave a Reply

Back To Top