ಪುಸ್ತಕ ಸಂಗಾತಿ
ಕದ ತೆರೆದ ಆಕಾಶ-ಮಂಜುನಾಥ್ ಚಾಂದ್ ಕಥಾ ಸಂಕಲನ
ಒಂದು ವಿಶ್ಲೇಷಣೆ
ದೀಪಾ ಗೊನಾಳ್
ಪುಸ್ತಕದ ಹೆಸರು- ಕದ ತೆರೆದ ಆಕಾಶ
ಲೇಖಕರು- ಮಂಜುನಾಥ್ ಚಾಂದ್
ಪ್ರಕಾಶನ- ಅಕ್ಷರ ಮಂಡಲ ಪ್ರಕಾಶನ
ಪುಸ್ತಕ ದೊರೆಯುವ ಸ್ಥಳ- bookmaadi.com
ಪುಸ್ತಕದ ಬೆಲೆ- ೧೨೦/-
ಪುಟ. -೧೪೩
ಒಟ್ಟು ಕಥೆಗಳು- ೯
ಕತೆ
ಓದಿ ಗಂಟೆಗಳು ಉರುಳಿದವು ಮಳೆ ಸುರೀತಲೇ ಇದೆ, ಎದೆಯೊಳಗೆ ಒಂದೇ ಸಮನೆ ಧೋ..!! ಮಳೆ ನಿಂತರೂ ಸುತ್ತಲ ನೀರು ನಿಲ್ಲುತ್ತಿಲ್ಲ . ಏರುತ್ತಿದೆ ನೀರು ಬರುತ್ತಿದೆ ಹರಿದರಿದು ಬರುತ್ತಿದೆ ಒಳಗೆ. ಇನ್ನೇನು ಮುಟ್ಟುವುದು ಎದೆಮಟ್ಟಕ್ಕೆ. ಮುಳಿಗುತ್ತೇನಾ!? ತೇಲುತ್ತೇನಾ!? ಬದುಕುತ್ತಿನಾ!? ಬದುಕಲು ಸಾಧ್ಯವಾ? ಇದು ಹಡಗಲ್ಲ ನಾನು ನಿಂತಿರುವುದು ಸಮದ್ರದ ನಡುವಲ್ಲ. ಇದು ಬಸ್ಸು ಹಾಯಿದೋಣಿಯಲ್ಲವಲ್ಲ. ಅವನು ಕೊಟ್ಟ ಜಾಕೆಟ್ಟು ತೊಟ್ಟು ಎಷ್ಟು ಕ್ಷಣ ಬೆಚ್ಚಗಿರಬಲ್ಲೆ. ನಡುಗುತ್ತಿದೆ ಜೀವ. ದೇಹದ ಹಂಗು ತೊರೆಯಬೇಕು.
ಅಷ್ಟೆ,
ಅಷ್ಟೆ…
ಬೆಂಗಳೂರಿನಲ್ಲಿ
ವಾರದಿಂದ ನೋಡುತ್ತಿರುವ ದೃಶ್ಯ ಇಂದು ಅಕ್ಷರಗಳಲ್ಲಿ. ನನ್ನ ಕೈಯೊಳಗಿನ ಪುಸ್ತಕದಲ್ಲಿ.
ಮುಳುತ್ತಿರುವ ಕಾರುಗಳು. ನಡು ರೋಡಲ್ಲಿ ನಿಂತ ಬಸ್ಸುಗಳು. ನೀರು!ನೀರು! ಮಳೆ! ಮಳೆ! ಲೈವ್ ಟೆಲಿಕಾಸ್ಟ್. ಯಾರಿಗೆ ಬಯ್ಯುವುದು? ಯಾರನ್ನು ಹೊಣೆಗಾರರನ್ನಾಗಿ ಮಾಡುವುದು!? ಮಾಧ್ಯಮದವರು ನಾವು ನೀವು ಎಲ್ಲ ಹುಡುಕುತ್ತಿದ್ದೇವೆ. ಮುನ್ನೂರ ಮುವತ್ತು ಕೆರೆಗಳು ಎಲ್ಲಿ ಹೋದವು!? ಕೆಂಪೇಗೌಡರು ಕಟ್ಟಿಸಿದ ಭಾರತದಲ್ಲೆ ಬಲು ಸೊಗಸಿನ ಊರು ಇದೇನಾ ನೀರು ತುಂಬಿ ದುಮ್ಮಿಕ್ಕುತ್ತಿರುವ ರೋಡಿಗೆ ಬೋಟು ಬಿಡುವುದೊ ರಾಕೆಟ್ ಬಿಡುವುದೊ ಎಂದು ಘನ ಗಂಭೀರ ಟ್ರೊಲ್ ನಡೆಸಿರುವ ನಾವುಗಳು-
-ಒಮ್ಮೆ
ಕೇವಲ ಒಮ್ಮೆ, ದಾರಿಯಲ್ಲಿ+ ಕಾರಿನಲ್ಲಿ+ಬಸ್ಸಿನಲ್ಲಿ+ ಬೈಕಿನಲ್ಲಿ ಮುಂದೋಗಲಾರದ, ಹಿಂದೆ ಮರಳಲಾರದ, ಅತಂತ್ರ ಸ್ಥಿತಿಯಲ್ಲಿ ನಿಂತ ಅವನ/ಅವಳ ಮನಸ್ಸಲ್ಲಿ ಈಗ ಏನ ಓಡುತ್ತಿದೆ ಅಂತ
ಒಮ್ಮೆ ಯೋಚಿಸಿದೇವಾ!? ಅವರು ಧೀರರಾ!? ಅಧೀರರಾ!?
ಅಪ್ಪನಿಗಾಗಿ
ಕಾಯುತ್ತಿರುವ ಅವನ ಮಗ ಟಿವಿಯಲ್ಲಿ ಊರು ತುಂಬಿದ ನೀರು ಕಂಡು ಅಪ್ಪನ ಫೋನು ನಾಟ್ ರಿಚೇಬಲ್ ಬಂದಾಗ ಆ ಕಂದನ ಮೊಗ ಉಹಿಸಿದ್ದೇವಾ?
ಉಹುಂ!
ಗಂಡನಿಗೆ
ಸಂಜೆಗೆ ಟೊಮೇಟೊ ತರಲು ಹೇಳಿ ಕಾದು ಕುಳಿತ ಆಗುಂಬೆಯ ಅವಳು ಇದೇನು ದೊಡ್ಡ ಮಳೆಯೆ ಅಲ್ಲ ಅಂದವಳು ಈಗ ಹೇಗೆ ತತ್ತರಿಸಿ ಹೋಗಿದ್ದಾಳೆ.!?
ಇದೆಲ್ಲಾ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿತು.
ವರ್ಷವತಿಯ
ಮೇಲೆ ಚೂರೇ ಚೂರು ಸಿಟ್ಟಿಲ್ಲ. ರೋಡು ಮಾಡಿಟ್ಟವನ ಕುರಿತಾಗಿ ಕೊಂಕಿಲ್ಲ. ಬೇಗ ಮನೆ ಮುಟ್ಟಲಾರದ್ದಕ್ಕೆ ಅಸಮಾಧಾನವಿಲ್ಲ ಕೇವಲ-
-ಘರ್ಷಣೆ
ಎದೆಯೊಳಗೆ,ಗುಡುಗು ತಲೆಯೊಳಗೆ, ಸಿಡಿಲು ಕಣ್ಣಂಚಲ್ಲಿ, ನಾಳೆ ತಂಗಿಯರೊಂದಿಗೆ ಪಾಲುಮಾಡಬೇಕಿದ್ದ ನೆಲದ ಋಣ ತೀರಿತಾ!? ಎಂಬ ಕುರಿತು. ಮಗನ ಬರ್ತ್ ಡೇ ಗಾಗಿ ಆರ್ಡರ್ ಮಾಡಿಟ್ಟ ಕೇಕು ತೆಗೆದುಕೊಂಡು ಮನೆ ಮುಟ್ಟಲಾರದ್ದಕ್ಕೆ. ತನ್ನದಲ್ಲದ ಹೆಸರು ಹೊತ್ತು ಈ ಊರಲ್ಲಿ ಕಟ್ಟಿಕೊಂಡ ಅವಳ ಬದುಕ ಕುರಿತಾಗಿ,ಎಷ್ಟೆಲ್ಲ ಘರ್ಷಣೆಗಳು…
ಇದೆಲ್ಲದರ
ನಡುವೆ, ಅವಳು ಆ ಗೋಧಿಬಣ್ಣದ ತೋಳಿನ ಮೇಲೆ “ತಪಸ್ವಿ” ಎಂದು ಹಚ್ಚೆ ಹಾಕಿಸಿಕೊಂಡ, ಅವಳ ಕುರಿತಾಗಿ ಮುಗಿಯದ ಪ್ರಶ್ನೆಗಳು ಹಾಗೆ ಉಳಿದಿವೆ ಹೇಳಬೇಕೀಗ ಕಥೆಗಾರರು ನನಗೆ.
ಈ
“ಕದ ತೆರೆದ ಆಕಾಶ”ವನ್ನು
ಎದೆ ಕದ ತೆರೆದು ಹೀಗೆ ಧೋ ಮಳೆಯಂತೆ ಅಷ್ಟು ತೀವ್ರವಾಗಿ-ಗಾಢವಾಗಿ ಹ್ಯಾಗೆ ಇಳಿಸಿದರು ಅನ್ನುವುದನ್ನು….
ಇನ್ನೂ
ನಾನು ನಿಮಗೆ ತಿಮಿರನ ಕಥೆ ಕುರಿತು ಹೇಳಲಿಲ್ಲ. ಪ್ರಜಾವಾಣಿ ಪ್ರಶಸ್ತಿ ಗರಿ ಹೊತ್ತ ತಿಮಿರ ನನಗೀಗ ಅಚ್ಚುಮೆಚ್ಚು. ಸಧ್ಯ ಈ ಮಳೆ ಮಾಡಿದ ಅವಾಂತರವೇ ಸಾಕಷ್ಟಿದೆ. ತಿಮಿರನ ಕಥೆ ಕೇಳಿದರೆ ನೀವು ನಕ್ಕು ನಕ್ಕು ಸುಸ್ತಾಗಿ ಹೋಗ್ತಿರಿ. ಇವತ್ತು ಅದು ಬೇಡ….
ಈ
ಕಥಾ ಸಂಕಲನ ಕೊಂಡು ಎತ್ತಿಟ್ಟಿದ್ದರೆ ಈ ರಾತ್ರಿ ತೆಗೆದು ಈ ಕಥೆ ಓದಬಹುದಾ ನೋಡಿ.. ಇಲ್ಲವಾದರೆ ಕೊಂಡು ಓದಿ.ಅಕ್ಷರಶಃ ನೀವು ಬೆಂಗಳೂರಿನ ತುಂಬಿದ ರೋಡಿನಲ್ಲಿ ನಿಂತು ಒಮ್ಮೆ ಬದುಕನ್ನ ತಿರುಗಿನೋಡದಿದ್ದರೆ ಕೇಳಿ..
ಪುಸ್ತಕದ ಹೆಸರು- ಕದ ತೆರೆದ ಆಕಾಶ
ಲೇಖಕರು- ಮಂಜುನಾಥ್ ಚಾಂದ್
ಪ್ರಕಾಶನ- ಅಕ್ಷರ ಮಂಡಲ ಪ್ರಕಾಶನ
ಪುಸ್ತಕ ದೊರೆಯುವ ಸ್ಥಳ- bookmaadi.com
ಪುಸ್ತಕದ ಬೆಲೆ- ೧೨೦/-
ಪುಟ. – ೧೪೩
ಒಟ್ಟು ಕಥೆಗಳು- ೯
ದೀಪಾ ಗೊನಾಳ್