ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಮೆತ್ತನೆಯ ಪಾದಕ್ಕೆ ಮುಳ್ಳು ಚುಚ್ಚಬಹುದೆ ಮಠದ ಅಂಗಳದಲ್ಲಿ
ಗೊತ್ತಾಗದ ಹಾಗೆಯೆ ಕತ್ತು ಕೊಯ್ಯಬಹುದೆ ಮಠದ ಅಂಗಳದಲ್ಲಿ
ರಾಮ ಕೃಷ್ಣ ಬುದ್ಧ ಏಸು ಪೈಗಂಬರರ ಹೆಸರು ಮಾತ್ರ ಬಾಯಲ್ಲಿ
ನೇಮವಿಲ್ಲದ ಪೂಜೆ ನಿತ್ಯ ಮಾಡಬಹುದೇ ಮಠದ ಅಂಗಳದಲ್ಲಿ
ಕೊಚ್ಚಿ ಹಾಕುವ ಮಚ್ಚುಗಳು ಒಳಗೊಳಗೆ ಹರಿತಗೊಂಡಿವೆ ಇಲ್ಲಿ
ಕೊರಳ ಕಡಿಯುವ ಕಾಳಗ ಘಟಿಸಬಹುದೆ ಮಠದ ಅಂಗಳದಲ್ಲಿ
ಸಹಸ್ರದಳದ ಕಮಲದಲಿ ಹಾಲಾಹಲ ಹೇಗೆ ಬೆರೆಯಿತೊ
ಕಾವಿಗೂ ಕಾಮದ ವಾಸನೆ ತಗುಲಬಹುದೆ ಮಠದ ಅಂಗಳದಲ್ಲಿ
ನ್ಯಾಯ ಅನ್ಯಾಯದ ಲೆಕ್ಕಾಚಾರಕ್ಕೆ ಅಂತರಾತ್ಮದ ಸಹಿ ಬೇಕಿದೆ ಅರುಣಾ
ನಂಬಿಕೆ ವಿಶ್ವಾಸಗಳಿಗೆ ಬೆಂಕಿ ಬೀಳಬಹುದೆ ಮಠದ ಅಂಗಳದಲ್ಲಿ