ಮಾಲತಿ ಹೆಗಡೆ-ಗಜಲ್

ಕಾವ್ಯಸಂಗಾತಿ

ಗಜಲ್

ಮಾಲತಿ ಹೆಗಡೆ

ಸುರಿವ ಮಳೆಗೆ ಮೈದುಂಬಿ ಗಮ್ಯದೆಡೆ ಸಾಗಬೇಕು ನದಿಯಂತೆ
ಕೊರೆವ ಚಳಿಗೆ ಬೆದರದೇ ದೃಢವಾಗಿ ನಿಲ್ಲಬೇಕು ಗಿರಿಯಂತೆ

ಮನದ ಕೊಳೆಯ ಒಗ್ಗೂಡಿಸಿ ಹೊರಹಾಕಬೇಕು ಕಡಲಂತೆ
ಪ್ರೀತಿ ಮಮತೆಗಳ ಸೆಳಕಲ್ಲಿ ತಂಪಾಗಬೇಕು ಬೆಳದಿಂಗಳಂತೆ

ಮಾತುಗಳ ಸೊಗಸಲ್ಲಿ ಸಂತಸ ಹರಡಬೇಕು ಮಂದಾನಿಲದಂತೆ
ಅನ್ಯಾಯ, ದೌರ್ಜನ್ಯಗಳ ಕಂಡರೆ ಉರಿಯಬೇಕು ಅಗ್ನಿಯಂತೆ

ಕಷ್ಟನಷ್ಟಗಳ ಗೊಬ್ಬರವಾಗಿಸಿ ಸತ್ವಯುತವಾಗಬೇಕು ಭುವಿಯಂತೆ
ಅನುಭವಗಳ ಸಾರ ಒಗ್ಗೂಡಿಸಿ ಪಾಕವಾಗಬೇಕು ಜೇನುತುಪ್ಪದಂತೆ

ಅಲ್ಪಾಯುಷ್ಯದ ಬದುಕಲ್ಲೂ ಪರಿಮಳ ಪಸರಿಸಬೇಕು ಮಾಲತಿ ಪುಷ್ಪದಂತೆ
ಜೀವನದ ಮರ್ಮ ತಿಳಿಯದಿದ್ದರೂ ನಿರುಮ್ಮಳವಾಗಿರಬೇಕು ನೀಲಾಕಾಶದಂತೆ


Leave a Reply

Back To Top