ಕಾವ್ಯ ಸಂಗಾತಿ
ಅರ್ಥವಿಹಿನ ಬಾಳು
ಶಂಕರಾನಂದ ಹೆಬ್ಬಾಳ
ಬಾಳಪಥಕೆ ಅಣಿಯಾಗಲಿಲ್ಲ
ಆಣತಿಯ ಆಲಿಸಲಿಲ್ಲ…!
ಮಂದಹಾಸ ಮರೆಮಾಚಿ
ಬೆಳಕನ್ನು ಅರಸುವೆಯಲ್ಲ….!!
ಉರಿವ ಕೆಂಡವಾದ ಹೃದಯ
ಕನಲಿಹೋದ ಕಣ್ಣು
ನಿರ್ಲಿಪ್ತವಿಲ್ಲದ ಕನಸು…!
ಇದು ಕರ್ಮವೇ.?
ರೋಧನೆಗೆ ಕೊನೆಯಿಲ್ಲವೆ..?
ಕೊರಗಿ ಮರುಗುತಿದೆ ಮನಸು…!!
ಭಾವಭಿತ್ತಿಯ ಚೇತನವಾಗಿದ್ದೆ,
ರಾಗಕೆ ಸ್ವರವಾಗಿದ್ದೆ,
ನಿಶೆಯ ನಶೆಯಲ್ಲಿ ನಿನ್ನನುಡಿ
ಮೃಷೆಯಾಯಿತಲ್ಲ ಇಂದು…!
ನಿರ್ಭಾವದ ಲೋಕದಿ
ಉತ್ಕಟದ ಆಕಾಂಕ್ಷೆ
ಪ್ರೇಮದ ಮಾರ್ದನಿ
ಬಾಳಸೊಡರಾಗಿ ನೀ ಬಂದು…!!
ಎದೆಕೊಟೆಯ ಬಾಗಿಲು ಬಡಿದೆ
ನೀ ಇಣುಕಲಿಲ್ಲ,…!
ಕಣ್ಣಾಲೆಯ ನೀರೊರೆಸಲು
ನೀ ಬರಲಿಲ್ಲ…!
ಒಡಲ ತಾಪಕ್ಕೆ ಮುಲಾಮು
ಹಚ್ಚಲು ತರಲಿಲ್ಲ,
ಬಾವಲಿಯಂತೆ ಜೋತುಬಿದ್ದೆ,
ನೀ ನನ್ನ ನೋಡಲೆಯಿಲ್ಲ..!!
ಅರ್ಥವಿಹಿನ ಬದುಕು
ನನ್ನದಾಯಿತು ತಹಿಕಾರ..
ಎದೆಯ ದರ್ದಗೆ ಹಕೀಂನಾಗಿ
ದವಾಕೊಡು…?
ಕನವರಿಕೆಯ ಪ್ರಶ್ನೆಗೆ
ಎದುರು ಬಂದು ನಿಂತುಬಿಡು
ಮುಚ್ಚುಮರೆಯಿಲ್ಲದೆ
ನನಗುತ್ತರ ಕೊಡು….?