ಕಾವ್ಯ ಸಂಗಾತಿ
ಮೌನದ ಸದ್ದಿನಲಿ
ಶಿವಲೀಲಾಹುಣಸಗಿ
ಒಳಸುಳಿವ ಗಾಳಿಯಲಿ
ತಂಪಿನ ಪಿಸುಮಾತು
ಉಲಿದು ನುಲಿಯುವ ತೆರದಿ
ಹಾಸು ಹೊಕ್ಕಿಹುದು
ಇಂಚರದ ಇಂಚಿನಲಿ
ಕಾಮನಬಿಲ್ಲು ಮೂಡಿದಾಂಗೆ
ಮುಸುಕಿದ ಮುಸುಕು ಜಾರಿದಂಗೆ
ನನ್ನೊಳಗೆ ಬಿಂಬ ಮೂಡಿದಂತೆಲ್ಲ
ನೇಸರನ ಹೊಂಗಿರಣದ ಬೆಳಕಿಗೆ
ಚಿಲಿಪಿಲಿ ಸದ್ದು, ಮುಂಗಾರು
ತುಟಿಯಂಚಿಗೆ ಮುತ್ತಿಕ್ಕಿದಂತೆ
ಏನಿತು ಮಾಧುರ್ಯದಂಚಿಗೆ
ಮುನಿಸೇತಕೆ ಮುಖಾರವಿಂದಕೆ
ಮೈಮನವು ಸೋಕಿರಲು ನಿನ್ನಡಿಗೆ
ದಹನವಾಯಿತು ನನ್ನೊಳಗಿನ ಭಾವ
ಕೊಂಚ ಬಿಡುವಿಲ್ಲಿ,ಬೆವರಿನಾರ್ಭಟಕೆ
ಮುತ್ತಾಗುವ ಕ್ರಿಯೆಗೆ ಬೆಚ್ಚಗಾದಂತೆ
ಒಲವಿನ ತೇರು ಏಳೆದಷ್ಟು ತೀರದು
ನನ್ನ ನಿನ್ನ ಸಮ್ಮಿಲನಕ್ಕೊಂದು ಮೇರುಗು
ಕಾದು ಕೆಂಪಾದ ಭೂವಿಗೊಂದು ಗುದ್ದು
ಅಪ್ಪಳಿಸಿದ ತಣ್ಣೀರಿಗೊಂದು ಮುದ್ದು
ಧರೆಯಗಲ ನಸುಗಂಪಿನ ಹೊಂಗಿರಣ
ನಾನು ನೀನಾಗಿ ಹುದುಗಿದ ಸಂಭ್ರಮ..
ಮತ್ತೆ ಒಳಸುಳಿವು ನಡುಕ ಹುಟ್ಟಿಸಿದೆ
ಬಿತ್ತಿಬಾಳವ ತವಕ ಹೆಚ್ಚಿಸಿದೆ
ಭುವಿಯಗಲ ಮತ್ತೇರುವ ಹುಚ್ಚಿದೆ
ಹಕ್ಕಿಗಳ ಇಂಚರಕೆ ಸೋತಮನವು
ಮತ್ತೆ ಜಾರಿದೆ ಮುರುಳಿಯ ಮೋಹಕೆ
ಮೌನದ ಸದ್ದಿನಲಿ ಪ್ರೀತಿಯ ಹಂಚಲು…