ದೆಹಲಿಸವಿ
ಮತ್ತೊಮ್ಮೆ ಜೀವಿಸೋಣ.
ಸವಿತಾ ಇನಾಮದಾರ್
ವೃದ್ಧಾಪ್ಯ ಅನ್ನೋದು ಜೀವನದ ಕಟುಸತ್ಯದಲ್ಲೊಂದು. ಇದರಿಂದ ಯಾರಿಗೂ ಮುಕ್ತಿಯಿಲ್ಲ. ಒಂದು ರೀತಿಯಲ್ಲಿ ಇದಕ್ಕೆ ತಬ್ಬಲಿತನವನ್ನು ತಂದೊಡ್ಡುವ ವಯಸ್ಸೆಂದೂ ಸಹ ಹೇಳಬಹುದು. ಕಾರಣ ಹಕ್ಕಿಯ ಮರಿಗಳ ರೆಕ್ಕೆಗಳ ಬಲಿತು ತಮ್ಮ ಸಂಗಾತಿಯೊಂದಿಗೆ ಬಾನಲ್ಲಿ ಸ್ವಚ್ಚಂದದಿಂದ ಹಾರಾಡುವಾಗ ಮನೆಯಲ್ಲಿ ಕಡಿವಾಣ ಹಾಕುವ ವೃದ್ಧರ ಇರುವು ಸ್ವಲ್ಪ ಇರಿಸು ಮುರಿಸಾಗುತ್ತದೆ.
ಮುಪ್ಪಿನಲ್ಲಿ ಮಾನಸಿಕ ಪ್ರಕ್ರಿಯೆಗಳು ನಿಧಾನವಾಗಿ ನೆನಪು ಕುಂದುವುದರ ಜೊತೆಗೆ ಹೊಸ ಕಲಿಕೆಯ ಸಾಮರ್ಥ್ಯ ಮತ್ತು ಏಕಾಗ್ರತೆ ಕಡಿಮೆಯಾಗುತ್ತದೆ. ಕೆಲವೊಮ್ಮೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಮನಸ್ಸೊಪ್ಪದೇ ಇರಬಹುದು. ಸಂಗಾತಿಯ ಅಥವಾ ಸ್ನೇಹಿತರ ಸಾವಿನಿಂದ ಒಂಟಿತನ ಕಾಡುವುದರ ಜೊತೆಗೆ ತನ್ನ ಸಾವಿನ ಬಗೆಗೂ ಭಯ ಶುರುವಾಗುತ್ತದೆ.
ಮೊನ್ನೆ ಮಾರ್ಕೆಟಿನಲ್ಲಿ ಒಬ್ಬ ವಯಸ್ಸಾದ ಹಿರಿಯರು ಹರಕು ಮುರುಕು ಹಿಂದಿಯಲ್ಲಿ “ ಅರೇ ಕ್ಯಾ ಭಯ್ಯಾ?? ಪ್ಯಾಜ್ ಇತನಾ ಮೆಹಂಗಾ ಹೋಗಯಾ ಕ್ಯಾ??..ಹಾಂ. 75/-ರೂಪಾಯೀ ಕೋ ಸಿರ್ಫ಼್ ಏಕೀSS ಕಿಲೋನಾ??”…
“ ಅರೇ ಬಾಬೂಜಿ.. ಏ ಖಿಲೋನಾ ನಹೀ ಹೈ.. ಪ್ಯಾಜ್ ಹೈ ಪ್ಯಾಜ್..ಹಹಹ.. ಆಜ್ ಹೀ ಆಯೇ ಹೋ ಕ್ಯಾ?? ಏ ರೇಟ್ ತೋ ಕಬ್ ಸೆ ಹೈ ..ಹಹಹಹ…!!”
ಇವರ ಮಾತು ಕೇಳಿ ನಕ್ಕ ಆ ಸಬ್ಜೀವಾಲನನ್ನು ನೋಡುತ್ತಾ ಸಿಟ್ಟಿನಿಂದ “ಹಾ..ಹಾ.. ಟೀಕ್ ಹೈ.. ಚಲೋ ಅಬ್ .. ಏಕ ಕೇಜೀ ದೇ ದೊ” ಅಂದವರ ಮಾತು ಕೇಳಿ ನನಗೂ ನಗು ಬಂತು.
ನೋಡಿದ್ರಾ ನಮ್ಮ ದೇಶದ ಈರುಳ್ಳಿ ಡಾಲರ್ ನ್ನೇ ಹಿಂದಕ್ಕೆ ಹಾಕಿದೆ ಅಂತ ಹೇಳಬೇಕನಿಸಿತು. ಅಷ್ಟರಲ್ಲಿ ಅವರೇ- “ಅರೇ ನೀವು ಸವಿತಾ ಅಲ್ವಾ?” ಅಂತ ಅಚ್ಚ ಕನ್ನಡದಲ್ಲಿ ಕೇಳಿದಾಗ,
”ಓ. ರಾವ್ ಅಂಕಲ್…ನೀವು?? ” ಎಂದೆ. ಎಲ್ಲಕ್ಕಿಂತ ಆಶ್ಚರ್ಯ ಅಂದ್ರೆ ರಾವ್ ಅಂಕಲ್ ಎಂದೂ ಈರುಳ್ಳಿ ತಿನ್ನದ ವ್ಯಕ್ತಿ, ಇವತ್ತು ಯಾಕೆ ಈರುಳ್ಳಿ ಕೊಂಡು ಕೊಳ್ತಾ ಇದ್ದಾರೆ?? ಮತ್ತೆ ಆಂಟಿ ಹೋದ ಬಳಿಕ ಇವರೂ ಸಹ ಮಕ್ಕಳ ಜೊತೆಗೆ ಅಮೇರಿಕಾಗೆ ಹೋಗಿದ್ದಾರೇಂತ ಕೇಳಿದ್ದೆ.. ಮತ್ತೆ ಡೆಲ್ಲಿಗೆ ಯಾವಾಗ ಬಂದ್ರು?? ಮನದಲ್ಲಿ ಹುಟ್ಟುತ್ತಿದ್ದ ಅನೇಕ ಪ್ರಶ್ನೆಗಳಿಗೆ ಕಡಿವಾಣ ಹಾಕುತ್ತಾ..
“ನಮಸ್ಕಾರಾ ಅಂಕಲ್, ಯಾವಾಗ ಬಂದ್ರಿ??..ಹಹಹ… ಇದೇನು , ಈರುಳ್ಳಿ??” ಅಂತ ನಾನು ಅವರ ಕೈಯಲ್ಲಿ ಹಿಡಿದಿದ್ದ ಈರುಳ್ಳಿ ಚೀಲವನ್ನು ನೋಡಿದಾಗ,
“ ಓ.. ಹಹಹಹ… ಯಾಕೆ ನಿನಗೂ ಆಶ್ಚರ್ಯ ಆಯ್ತಾ?? ಸರಿ ಬಿಡು” ಅನ್ನುತ್ತ ಮುಂದಕ್ಕೆ ನಡೆದರು. ನನಗೋ ಕುತೂಹಲದಿಂದ ಇನ್ನು ಹೊಟ್ಟೆನೋವೆಲ್ಲಿ ಶುರುವಾಗುತ್ತೋ ಅನ್ನುವ ಭಯದಲ್ಲಿ ‘‘ಅಂದ್ರೆ??” ಎಂದು ಮತ್ತೊಮ್ಮೆ ಪ್ರಶ್ನಾರ್ಥಕ ಚಿನ್ಹೆಯನ್ನು ಮುಖದಲ್ಲಿ ಮೂಡಿಸಿ ಅವರನ್ನ ಬೆನ್ನು ಹತ್ತುತ್ತಾ ಕೇಳಿದಾಗ ಅವರು ನಗುತ್ತಾ.. “ ನಮ್ಮ ಮನೇಲಿ ಗಣೇಶನ ಪೂಜೆ ಇದೆ. ನನ್ನ ಜೊತೆಗೆ ಬಾ.. ಆಗ ನಿಂಗೇ ತಿಳಿಯುತ್ತೆ ” ಎನ್ನುತ್ತಾ ನನಗೆ ಮಾತಾಡೋಕೂ ಅವಕಾಶ ನೀಡದೆ ಮುಂದೆ ನಡೆದರು. ಅವರ ಹಿಂದೆ ಸುಮ್ನೆ ನಡೀತಿದ್ರೂ ಮನಸ್ಸೆಲ್ಲಿ ಸುಮ್ನಿರುತ್ತೆ ಹೇಳಿ?? ರಾವ್ ಆಂಟಿ ಯಾವಾಗ್ಗೂ ನಮ್ಮತ್ತೆ ಮುಂದೆ ಗೋಳಿಡ್ತಾ ಇದ್ದದ್ದು ನೆನಪಾಯ್ತು.
“ನೋಡಿ ರಾಜಮ್ಮಾ, ನನ್ನ ಮಗನಿಗೆ ಪ್ರತಿಯೊಂದು ಸಬ್ಜಿಗೂ ಈರುಳ್ಳಿ ಹಾಕಿ ಮಾಡಿದ್ರೆ ಮಾತ್ರ ತಿಂತಾನೆ, ಇಲ್ಲಾಂದ್ರೆ ಆಜ್ ಸಹೀ ನಹೀ ಬನಾ ಹೈ ಅಂತಾ ಹಾಗೇ ಹೋಗಿಬಿಡ್ತಾನೆ. ಮತ್ತೆ ನಮ್ಮೆಜಮಾನ್ರಿಗೆ ಈರುಳ್ಳಿ ಅಂದ್ರೆ ಎಣ್ಣೆ ಸೀಗೇಕಾಯಿ, ಈಗ ನೀವೇ ಹೇಳಿ, ಇರೋ ಮೂವರಲ್ಲಿ ಅದೇನು ಮಾಡ ಬೇಕೂಂತ??’
ಹೂಂ ಮತ್ತೆ , ಪ್ರತಿಯೊಬ್ಬರ ಮನೆಯ ಹಾಡೂ ಹೀಗೇನೇ ಅಲ್ವೇ ?? ಹಹಹ..ಹೋಗ್ಲಿ ಬಿಡಿ… ನಮ್ಮ ಮನೆಯ ಬಗ್ಗೆ ಇನ್ನೊಮ್ಮೆ ಯಾವಾಗಾದ್ರೂ ಹೇಳ್ತೀನಿ.. ಅಂಕಲ್ ಜೊತೆಗೆ ಅವರ ಮನೆಯನ್ನ ತಲುಪಿದೆ.
ಅದೇ ಮನೆಯಾದ್ರೂ ತುಂಬಾನೇ ಬದಲಾವಣೆಗಳು ಕಂಡು ಬಂದವು. ತೋರಗೊಡದೆ, ಗಣೇಶನಿಗೆ ನಮಸ್ಕರಿಸುತ್ತಿದ್ದಾಗ..“ಅರೇ ಸುನೋತೋ, ಜರಾ ಓ ಪ್ರಶಾದ ಲಾನಾ’ ಅಂತ ಕೂಗಿ ಹೇಳಿದ್ರು. ಕೆಲಸದವ ಇರಬೇಕು ಅಂತ ನಾನೂ ಸುಮ್ನಿದ್ದೆ. ಆದ್ರೆ ಒಳಗಿಂದ ಪ್ಲೇಟ್ ಹಿಡಿದು ಬಂದ ಸೌಮ್ಯ ಮುಖದ ಮಹಿಳೆಯನ್ನು ನೋಡಿ ‘ಇವರು ’ ಅಂತ ರಾವ್ ಅಂಕಲ್ ಕಡೆಗೆ ನೋಡಿದೆ.
‘ ಸವಿತಾ, ಮೇಟ್ ಮೈ ವೈಫ಼್, ಕಮಲೇಷ್…’ ಅಂದ್ರು. ನಾನೋ ಕಕ್ಕಾವಿಕ್ಕಿಯಾಗಿ ಬೆಪ್ಪಳಂತೆ ನಿಂತು ಬಿಟ್ಟೆ. ಇದನ್ನು ನೋಡಿದ ಕಮಲೇಷ್ ನಗುತ್ತ ‘Its ok.. ಇನ್ಕೋ ಭೀ ಬತಾದೋ.!!” ಎಂದು ನಮ್ಮ ಮುಂದೆ ಕುಳಿತರು.
ರಾವ್ ಅಂಕಲ್ ಗಂಟಲು ಸರಿಪಡಿಸುತ್ತಾ, “ ಮೂರುವರ್ಷದ ಹಿಂದೆ ಕಮಲಾ ನನ್ನ ಬಿಟ್ಟು ಹೋದ ಬಳಿಕ ಜೀವನ ಯಾಕೋ ಜಡಭರತ ಅನಿಸತೊಡಗಿತು…ಪಾಪ ನನ್ನ ಮಗ ಅಮೇರಿಕಾಗೆ ನನ್ನ ಕರೆದೊಯ್ದರೂ ಅಲ್ಲಿಯ ವಾತಾವರಣ ನನಗ್ಯಾಕೋ ಹಿಡಿಸಲೇ ಇಲ್ಲ. ನಡುವೆ ಒಮ್ಮೆ ಬೆಂಗಳೂರಿಗೂ ಬಂದಿದ್ದೆ. ಎಷ್ಟೇ ಅಂದ್ರೂ ಬೇರೆಯವರ ಮನೆ.. ಯಾಕೋ ಅವರ್ಯಾರೂ ಅಷ್ಟಾಗಿ ಹಚ್ಚಿಕೊಳ್ತಾ ಇಲ್ಲಾ ಅನಿಸ್ತು. ಮತ್ತೆ ಡೆಲ್ಲಿಯ ನನ್ನ ಮನೆಗೇ ಬಂದು ಬಿಟ್ಟೆ. ಕೇಶವಾ ಪ್ರತಿ ದಿನಾ ಫೋನ್ ಮಾಡಿ ವಾಪಸ್ ಬಂದು ಬಿಡಿ ಪಪ್ಪಾ ಅಂತ ಮತ್ತೆ ದುಂಬಾಲು ಬೀಳ್ತಿದ್ದ.. ಈ ಮಧ್ಯ ನನ್ನ ಆರೋಗ್ಯ ಹಾಳಾಗಿ ಮನೆಯಲ್ಲಿ ಮಾಡೋರ್ಯಾರೂ ಇಲ್ಲದೇ ಹೋದಾಗ ನಮ್ಮ ಮನೆ ಮುಂದಿನ ಸಿಂಗ್ ಸಾಬ್ ತಂಗಿ ಕಮಲೇಷ್ ಬಂದು ತುಂಬಾ ಸಹಾಯ ಮಾಡಿದ್ರು. ಈಕೆನೂ ಮದುವೆ ಮಾಡಿಕೊಂಡಿರಲಿಲ್ಲಾ.. ಒಬ್ಬಂಟಿ, ಸಿಂಗ್ ಸಾಬ್ ಹೋದ ಮೇಲೆ ಅವರ ಮಕ್ಕಳೆಲ್ಲಾ ನೋಯ್ಡಾ ಅಲ್ಲಿ ಇಲ್ಲೀಂತ ಹೊರಟು ಹೋದ್ರಂತೆ. ನಾಬ್ಬರೂ ಒಂಟಿ ಹಕ್ಕಿಗಳು. ಹೀಗೆ ದಿನಾಲೂ ಒಂದಿಲ್ಲಾ ಒಂದು ಕಾರಣದಿಂದ ಭೇಟಿ ಆಗ್ತಿದ್ವಿ. ಆರು ತಿಂಗಳ ಬಳಿಕ ನನ್ನ ಮಗ ಬಂದಾಗ ನಮ್ಮಿಬ್ಬರ ಅನ್ಯೋನ್ಯತೆಯನ್ನು ನೋಡಿ ರಾತ್ರಿ ಊಟಮಾಡೋವಾಗ , “ ಅಪ್ಪಾ, ನೀವು ನನ್ನ ಜೊತೆಗೆ ಬರೋಕಂತೂ ತಯಾರಿಲ್ಲ. ತಪ್ಪು ತಿಳಿಯೋದಿಲ್ಲಾಂದ್ರೆ ಒಂದು ಮಾತು ಹೇಳಲಾ?? ನೀವು ಮತ್ತೆ ಕಮಲೇಶ್ ಆಂಟಿ ಯಾಕೆ ಮದುವೆ ಮಾಡಕೋ ಬಾರ್ದು??” ಅಂದ.. ನನಗೆ ತುಂಬಾನೇ ಕೋಪ ಬಂತು. ಉತ್ತರಿಸೋಕೂ ಬಿಡದೆ “ಅಪ್ಪಾ, ನಾನಂತೂ ತುಂಬಾ ದೂರದಲ್ಲಿದ್ದೀನಿ. ಕೆಲಸದಲ್ಲಿದ್ದರೂ ನಿಮ್ಮ ಬಗ್ಗೆ ಚಿಂತೆ ಆಗ್ತಾನೇ ಇರುತ್ತೆ. ಕಮಲೇಷ ಆಂಟಿ ನಮಗೆ ಮೊದಲಿಂದನೂ ಪರಿಚಯ. ತುಂಬಾ ಒಳ್ಳೆಯ ಸ್ವಭಾವದವ್ರು. ಅಮ್ಮನ ಸ್ಥಾನ ಅಂತೂ ಯಾರಿಂದಲೂ ತುಂಬೋದಕ್ಕೆ ಸಾಧ್ಯವಿಲ್ಲಪ್ಪಾ. ಆದ್ರೆ ಇವ್ರು ನಿಮಗೊಬ್ಬ ಸಂಗಾತಿ ಅಂತ ಆಗ್ತಾರೆ. ನಿಮ್ಮಿಬ್ಬರ ಆಭಿರುಚಿಗಳೂ ಒಂದೆ..ಅವರಿಗೂ ಒಂದು ಆಧಾರ ಅಂತ ಆಗುತ್ತೆ.. ನೋಡಿ ವಿಚಾರ ಮಾಡಿ..ಅವರನ್ನೂ ಒಂದು ಮಾತು ಕೇಳಿ ನೋಡಲಾ??” ಅಂದ. ನನಗ್ಯಾಕೋ ಇದೆಲ್ಲಾ ಸರಿ ಬೀಳಲಿಲ್ಲಾ ಸವಿತಾ. “ಲೋ ಕೇಶವಾ.. ಅಮೇರಿಕಾದಂತೆ ಇಲ್ಲಿ ನಡೆಯೋದಿಲ್ಲಪ್ಪಾ …ನೀನು ಅನ್ನೋದೇನೋ ಸರಿ… ಆದ್ರೆ ನಮ್ಮ ಜನ ಏನಂತಾರೆ?? ..ಛೇ.. ಇದೆಲ್ಲಾ ಬೇಡಪ್ಪಾ.. ದೊಡ್ಡ ರಾದ್ಧಾಂತ ಆಗಿಬಿಡುತ್ತೆ..” ಅಂದಾಗ . “ ನೋಡಿ, ಆ ನಿಮ್ಮ ಜನ ಇಲ್ಲಿ ಬಂದು ನಿಮ್ಮನ್ನ ನೋಡಿಕೊಳ್ತಾರಾ?? ಹೋದ್ರೆ ಎರಡೇ ದಿನದಲ್ಲೇ ವಾಪಸ್ ಬಂದು ಬಿಟ್ರಿ ..ಮತ್ತೆ?? ನಿಮಗೂ ಜೀವಿಸುವ ಹಕ್ಕಿದೆ ಅಪ್ಪಾ… ಅವ್ರಿಗೆಲ್ಲ ಹೆದರಿ ಹೀಗೆ ಜೀವಿಸಬೇಕಾ?? ” ಅಂದ. “ ಆತನಿಗೆ ಏನು ಉತ್ತರಿಸೋಕೂ ತೋಚದೆ ಸರಿಯಪ್ಪಾ.. ವಿಚಾರ ಮಾಡ್ತಿನಿ” ಅಂದೆ.
ಆದ್ರೆ ನಮ್ಮ ಕೇಶವಾ ಹ್ಯಾಗೇಂತಾ ನಿಂಗೊತ್ತಾಲ್ಲಾ.. ಸಂಜೆ ಕಮಲೇಷ್ ಜೊತೆಗೆ ನಗುತ್ತ ಬಂದೇ ಬಿಟ್ಟ. ಆಕೆಗೂ ಮುಜುಗುರ.. ಪಾಪ…ನನ್ನ ಉತ್ತರಕ್ಕೆ ಕಾಯ್ತಾ ಇದ್ದಂತೆ ಅನಿಸ್ತು. “ ದೇಕೋ ಕಮಲೇಷ್ ಜಿ.. ಗಲತ್ ಮತ್ ಸಮಜನಾ…ಬಚ್ಚೆ ಕೊ ಮೆರಾ ಫಿಕರ್ ಹೈನಾ.. ” ಎಂದಾಗ ನನ್ನ ಮಗ- “ಅಪ್ಪಾ..ಆಂಟಿಜಿ.. ಮೈನೆ ಜೋ ಕಹಾಹೈ ಆಪ್ ದೋನೋ ಅಚ್ಛೀ ತರಹಸೆ ಸೋಚಿಯೆ.. ಕಲ್ ಹಮ್ ಶಾಮ್ ಕೋ ಮಿಲತೆ ಹೈ… ಓಕೆ ಆಂಟಿಜಿ??” ಅಂದಾಗ ಆಕೆ ಹೂಂ ಅಂತ ತಲೆಅಲ್ಲಾಡಿಸಿದ್ರು. ನಾನು ಕುತೂಹಲ ತಾಳಲಾರದೆ “ಮುಂದೆ??” ಅಂದಾಗ..“ಹಹಹ.. ಮುಂದೇನು?? ಒಂದು ವಾರದಲ್ಲೇ ಈಕೆ ನನ್ನ ಸಹಧರ್ಮಿಣಿ ಆಗಿ ನನ್ನ ಮನೆಯನ್ನು ತುಂಬಿದ್ಲು. ಕಮಲಾ ನನ್ನ ಬಿಟ್ಟು ಹೋದ್ರೂ ಕಮಲೇಷ ಮತ್ತೆ ಮನೆಗೆ ಬಂದ್ಲು..ಆರು ತಿಂಗಳು ಅಮೇರಿಕಾದಲ್ಲಿದ್ವಿ. ಹೋದ ವಾರ ಬಂದ್ವಿ.” ಅಂದಾಗ “ ಓ… ಕಂಗ್ರಾಟ್ಸ್… ತುಂಬಾ ಖುಷಿಯಾಯ್ತು ಅಂಕಲ್.. ಬಧಾಯಿ ಹೋ ಆಂಟೀಜಿ” ಅನ್ನುತ್ತಾ ಇಬ್ಬರ ಕೈ ಕುಲುಕಿ, ಆಕೆ ಕೊಟ್ಟ ಪ್ರಸಾದ ಸೇವಿಸಿ ಬಾಯ್ ಎಂದು ಮನೆಗೆ ಬಂದೆ. ಹೂಂ.. ಈಗ ತಿಳೀತು ನೋಡಿ ನನಗೆ..ಈ ಈರುಳ್ಳಿಯ ಹಿಂದಿನ ಕಥೆ. ಕಮಲೇಶ್ ಆಂಟಿಯ ಪಂಜಾಬಿ ತಡಕಾಗೆ ಪ್ಯಾಜಿನ ಪ್ರೀತಿಯಿಲ್ಲದೇ ಹೋದ್ರೆ ಹ್ಯಾಗೇಂತ?
ಬರೋವಾಗ ಅಪ್ಪನ ಬಗ್ಗೆ ಕೆಶವ ತೋರಿದ ರೀತಿಯ ಬಗ್ಗೇನೇ ಯೋಚಿಸ್ತಾ ಬಂದೆ.
ವೃದ್ಢ ತಂದೆ – ತಾಯಿಯರ ಜವಾಬ್ದಾರಿಯನ್ನು ತೊರೆದು ಹೊರಟು ಹೋಗುವ ಮಕ್ಕಳೂ ಇರ್ತಾರೆ.. ಆದ್ರೆ ಒಬ್ಬಂಟಿಯಾದಾಗ ಅವರ ಬಗ್ಗೆ ಕಳಕಳಿ, ಪ್ರೀತಿ ತೋರಿಸಲು ಮತ್ತೊಂದು ಜೀವ ಜೊತೆಗಿದ್ದರೆ ಒಳಿತೆಂದು, ಅವರನ್ನು ಅರ್ಥ ಮಾಡಿಕೊಳ್ಳುವ ಕೇಶವನಂತಹ ಮಕ್ಕಳೂ ಇದ್ದಾರೆ ಅಲ್ವಾ??
ಸಂಬಂಧಪಟ್ಟ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಹೊಂದಾಣಿಕೆ ಸುಲಭವಾಗುತ್ತೆ, ಬರಡು ಜೀವನದ ಬಳ್ಳಿ ಮತ್ತೆ ಸುಂದರವಾಗಿ ಚಿಗುರುತ್ತೆ, ‘ಮತ್ತೊಮ್ಮೆ ಜೀವಿಸೋಣ’ ಅನ್ನುವ ಇಚ್ಛೆ ಮತ್ತೆ ಹುಟ್ಟುತ್ತೆ.
—————————————–
ಸವಿತಾ ಇನಾಮದಾರ್.