ಗಜಲ್ ಜುಗಲ್ ಬಂದಿ

ಕಾವ್ಯಸಂಗಾತಿ

ಗಜಲ್ ಜುಗಲ್ ಬಂದಿ

ನಯನ. ಜಿ. ಎಸ್.

ವಿಜಯಪ್ರಕಾಶ್. ಕೆ

ಸಿಯಾಸತ್ ಗಜಲ್

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಲಕ್ಷ್ಯವಲ್ಲದ ಮಾತುಗಳಿಗೆ ಕಿಡಿ ಕಾರುತ್ತಾ ಗೆಲುವನ್ನು ಹಿಮ್ಮೆಟ್ಟಿಸುತ್ತಿದ್ದೇನೆ

ತನು ಮನವು ಒಂದಾಗಿದ್ದರಷ್ಟೇ ಪತನಕೆ ಸೆಡ್ಡು ಹೊಡೆಯಬಹುದು ಇಲ್ಲಿ
ಚಿತ್ತಕೆ ಚಾಂಚಲ್ಯದ ಖಯಾಲಿ ಹತ್ತಿಸಿ ಚಿಂತನವನ್ನು ಮುಂದೂಡುತ್ತಿದ್ದೇನೆ

ಮೆರೆದು ಮಾಗಿ ಚದುರುವ ಪ್ರಕೃತಿ ಸೊಬಗಿಗೂ ಗೊತ್ತಿದೆ ತನ್ನಯ ಸಹಜತೆ
ಕಳಚುವ ಬಣ್ಣಗಳ ಹಂಗಿನೊಳು ಸಾರ್ಥಕ್ಯ ಸುಖವನ್ನು ಮರೆಯುತ್ತಿದ್ದೇನೆ

ದಿವ್ಯತೆಯ ಕನಸನು ಮನಗಳ ತಂತಿನೊಳು ಹೊಸೆದಾಗಲೇ ಪಕ್ವತೆಯ ಭಾಸ
ಹಾರ ತುರಾಯಿಗಳ ಮಾಯೆಗೆ ಬಿದ್ದು ಸ್ವವಿಕಾಸ ತತ್ವವನ್ನು ನಿರ್ಲಕ್ಷಿಸುತ್ತಿದ್ದೇನೆ

ನುಡಿದಂತೆ ನಡೆಯುವವರ ಸಖ್ಯದಲಿ ವಸುಧೆಗೆ ಎಂದೂ ಕೇಡಿಲ್ಲ ‘ನಯನ’
ಬಿರಿಯುವ ನಸು ಹಾಸದ ಗಾರುಡಿಯಲಿ ಉದ್ದಿಷ್ಟ ಪಥವನ್ನು ತಿರುಚುತ್ತಿದ್ದೇನೆ.

****
ನಯನ. ಜಿ. ಎಸ್.

.

ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.

*****************************


ವಿಜಯಪ್ರಕಾಶ್. ಕೆ

Leave a Reply

Back To Top