ಕಾವ್ಯಸಂಗಾತಿ
ಮುಕ್ತಕಗಳು
ಉಷಾಜ್ಯೋತಿ ಮಾನ್ವಿ
ಮುಕ್ತಕ ೧
ಬರಗಾಲ ಬಂದೊಡನೆ ಹಲುಬುವಾ ಜೀವವಿದು
ಹರಿನಾಮ ಜಪಿಸುತಲೆ ನೋವ ಮರೆತು|
ಕರಮುಗಿದು ಕಂಬನಿಯ ಸುರಿಸುರಿದು ಬೇಡುವುದು
ನರಬಾಳು ನರಕವಿದು ಪೆದ್ದುಮನವೆ||
ಮುಕ್ತಕ ೨
ವೇದವನ್ನೋದಿದರ್ ಜ್ಞಾನಿಗಳ ಬರವಿಹುದು
ಬಾಧೆಗಳ ಸುಳಿಯಲ್ಲಿ ಸಿಲುಕುತಿಹರು||
ಕ್ರೋಧವನು ತೊರೆದು ನೀ ಶಾಂತತೆಯ ಧರಿಸುತಿರು
ಭೇದಗಳ ಕಡೆಗಣಿಸು ಪೆದ್ದುಮನವೆ||
ಮುಕ್ತಕ-೩
ಹೆಣ್ಣಿವಳು ಹೊತ್ತಿಹಳು ಜೀವನದ ಭಾರವನು
ಕಣ್ಣಿವಳು ತೋರುವಳು ಬದುಕುದಾರಿ|
ಸಣ್ಣತನ ತೋರದಲೆ ಸಹನೆಯಲಿ ಸಾಗುವಳು
ಮಣ್ಣಿನಲಿ ಮಣ್ಣಾಗಿ ಪೆದ್ದುಮನವೆ||
ಮುಕ್ತಕ ೪
ಶಕ್ತಿ ಸಾಲದಪಾಯದಿಂದ ಪಾರಾಗಲಿಕೆ
ಯುಕ್ತಿಯಲಿ ನಿಜಗೆಲುವು ಅರಿತು ಬಾಳು|
ಭಕ್ತಿಯಿಂ ಪೂಜಿಸಲ್ ಒಲಿಯನೇ ಮಹದೇವ
ಮುಕ್ತಿಯನು ನೀಡುತಲಿ ಪೆದ್ದುಮನವೆ||
ಮುಕ್ತಕ- ೫
ಮನವದುವೆ ನವನೀತ ಇನಿಯನಲಿ ಒಲವಿರಲು
ತನುಬಳ್ಳಿ ಹಬ್ಬುವುದು ಹರುಷದಿಂದ|
ಮುನಿದಿರಲು ಮನದನ್ನೆ ಶಿಲೆಯಾಗಿ ಕೂಡುವಳು
ಅನುನಯದಿ ಒಲಿಸಿಕೋ ಪೆದ್ದುಮನವೆ||
ಮುಕ್ತಕ-೬
ನೆನಹುಗಳು ನೂರಾರು ಕಳೆದಿರುವ ಹಳತಿನಲಿ
ಮನದಲ್ಲಿ ನೋವುಗಳು ಮರುಕಳಿಸವೆ|
ಕನಸಿನಲಿ ಕನವರಿಕೆ ಕಂಬನಿಯ ಹರಿಸಿರಲು
ದಿನ ಹೊಸದು ಮೂಡಲಿದೆ ಪೆದ್ದುಮನವೆ||
ಮುಕ್ತಕ-೭
ಹೊಸದಿನದ ಆಹ್ವಾನ ಹರುಷದಿಂ ಮಾಡುವಾ
ಹಸನಾದ ಜೀವನವ ಅನುಭವಿಸುತ|
ಕಸದಂಥ ಕಷ್ಟಗಳ ಗುಡಿಸುತ್ತ ಸಾಗುವಾ
ತುಸುಹೊತ್ತು ಸಹಿಸಿಕೋ ಪೆದ್ದುಮನವೆ||
ಮುಕ್ತಕ-೮
ಹೆದರದಿರು ಅವಘಡವ ಎದುರಿಸಲು ಆಗದಿರೆ
ಬೆದರದಿರು ಕಾರ್ಮೋಡ ಗುಡುಗುತಿರಲು|
ಚದುರಿಸದೆ ಭಾವಗಳ ಮುದವಾಗಿ ಹಿಡಿಯುತಲಿ
ತುದಿವರೆಗೆ ಸಹಿಸಿಕೋ ಪೆದ್ದುಮನವೆ.||
ಮುಕ್ತಕ-೯
ಗೆಳೆತನದ ಅಮೃತವನು ಸವಿಯುವುದೆ ಜಾಣತನ
ಕಳೆಯುವುದು ನಗುನಗುತ ಬಾಳ ಸಮಯ|
ತಿಳಿ ನೀನು ಗುಟ್ಟಿದನು ತಿಳಿಸುತ್ತ ಜಗಕೆಲ್ಲ
ಕೊಳೆಯನ್ನು ತೊಳೆದುಕೋ ಪೆದ್ದುಮನವೆ||
ಮುಕ್ತಕ-೧೦
ಭಕ್ತಿಯಲಿ ಮೀಯುತ್ತ ಜಪತಪವ ಮಾಡುತ್ತ
ಮುಕ್ತಿಯನು ಜತನದಲಿ ಪಡೆಯುತಿರಲು|
ಉಕ್ತಿಗಳ ಆಲಿಸುತ ಸತ್ಯವನು ಅರಿಯುತ್ತ
ಶಕ್ತಿಯನು ಪಡೆ ನೀನು ಪೆದ್ದುಮನವೆ||
ಮುಕ್ತಕ-೧೧
ರವಿಕಾಂತಿ ಸೂಸುತ್ತ ಜಗವೆಲ್ಲ ಬೆಳಗುವನು
ಬುವಿಯಲ್ಲಿ ನಗುಚೆಲ್ಲಿ ಸುಡುವ ತಾನು|
ಸವಿತನವ ಹಂಚುತ್ತ ಕಹಿಯನ್ನು ನುಂಗುವುದು
ಅವನಿಯಲಿ ಅದ್ಭುತವು ಪೆದ್ದುಮನವೆ||
ಮುಕ್ತಕ-೧೨
ಒಲವಿರದ ಹೃದಯವದು ಮರುಭೂಮಿ ಆಗಿಹುದು
ಬಲವಿರದ ದೇಹದಲಿ ರೋಗ ರುಜಿನ|
ಛಲವಿರದ ಜೀವನವು ಉಪ್ಪಿರದ ಊಟವೈ
ಫಲವರಿತು ಬಾಳು ನೀ ಪೆದ್ದುಮನವೆ||
ಮುಕ್ತಕ -೧೩
ನೋವುಗಳು ನೂರಾರು ನಗುನುಂಗಿ ಮೆರೆದಿಹವು
ಸಾವಿಲ್ಲದ ಜೀವಿಗಳು ಧರೆಯಲಿಲ್ಲ|
ಕಾವಿರದೆ ಅಂಡವದು ಮರಿಯಾಗಿ ಬರುವುದೇ
ದೇವನಿಹ ಕೊರಗದಿರು ಪೆದ್ದುಮನವೆ||