ಪ್ರಭಾವತಿ ಎಸ್ ದೇಸಾಯಿಯವರ ಗಜಲ್

ಕಾವ್ಯ ಸಂಗಾತಿ

ಗಜಲ್

ಪ್ರಭಾವತಿ ಎಸ್ ದೇಸಾಯಿ

ಒಲವ ಹೊಳೆಯಲಿ ರಾಸಕ್ರೀಡೆ ಜೊತೆಯಾಗಿ ಆಡಲಿಲ್ಲ ಅವನು
ಹೃದಯ ಗೂಡಲಿ ಪ್ರೀತಿಯ ನಂದಾದೀಪ ಹಚ್ಚಲಿಲ್ಲ ಅವನು

ಕಲ್ಯಾಣ ಮಂಟಪದಲಿ ಬದಲಿಸಿದ ಸುಮ ಮಾಲೆಗಳು ಬಾಡಿವೆ
ಅನುರಾಗದ ಬದುಕಿಕೆ ಮುತ್ತಿನ ಹಾರವ ಹಾಕಲಿಲ್ಲ ಅವನು

ಬಾನ ತಾರೆಗಳ ಎಣಿಸುತಾ ಮಲಗಿದೆ ಬಯಲ ಹೂ ಮಂಚದಲಿ
ಹುಣ್ಣಿಮೆಯ ಚಂದಿರನಾಗಿ ಎದೆ ಕಡಲು ಉಕ್ಕಿಸಲಿಲ್ಲ ಅವನು

ಸಾಂಗತ್ಯ ಬಯಸಿದ ತನು ಮನಗಳು ನರಳುತಿವೆ ಏಕಾಂತದಲಿ
ವಿರಹದ ತಾಪಕೆ ತಂಪಿನ ಚಂದನವ ಲೇಪಿಸಲಿಲ್ಲ ಅವನು

ಮಾಗಿದ ಸಿಹಿ ಹಣ್ಣು ತಿನಿಸಿದರೂ ಕಾಣದು ತೃಪ್ತಿಯ ಭಾವ
ಮನಸು ಅರಳಿಸುವ ಮೋಹದ ಪಿಸುಮಾತು ಆಡಲಿಲ್ಲ ಅವನು

ಕಿಟಕಿಯಿಂದ ತೂರಿಬಂದ ಬೆಳದಿಂಗಳು ಇಡುತಿದೆ ಕಚಗುಳಿ
ಮೌನದಿ ನಾಚಿ ಕಂದೀಲು ನಂದಿಸಿದ್ದು ತಿಳಿಯಲಿಲ್ಲ ಅವನು

ಮರಳುಗಾಡಿನಲಿ ಬಾಳ ಬಂಡಿಯ ಎಳೆದು ದಣಿದೆ ” ಪ್ರಭೆ”
ಬಳಲಿದಾ ದೇಹಕ್ಕೆ ಒಲವಿನ ಸಿಹಿ ನೀರು ಕುಡಿಸಲಿಲ್ಲ ಅವನು


Leave a Reply

Back To Top