ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ

ಕಾವ್ಯ ಸಂಗಾತಿ

ಗುರುವೆಂಬ ಬೆಳಕಿಗೆ

ವಿಷ್ಣು ಆರ್. ನಾಯ್ಕ

ಬಾ.. ದೇವ…ಗುರುದೇವ
ಹೇ ದೇವ…ಪ್ರಭು ದೇವ
ನೀ ದೇವ ಕನಿಕರಿಸು, ನೀ ಬೇಗ ಬಾ
ವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ

ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿ
ಗೈದ ಕಾರ್ಯದ ಕನಸ ನನಸಾಗಿ  ಬಾ..
ಮೈದಳೆದು ಗುರುವೇ ನೀ ವರವಾಗಿ ಬಾ..

ಮಕ್ಕಳೆನ್ನುವ ಬಳ್ಳಿ  ಹೂ, ಮೊಗ್ಗು, ಹಣ್ಣುಗಳು
ಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..
ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ…

ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳು
ಮದದ ಮತ ಮೌಢ್ಯವನೆಲ್ಲ ನೀ ನೀಗು ಬಾ..
ಸಾಧನೆಯ ಸಮರಸವ  ನೀ ತೋರು ಬಾ..

ರಾಜಕೀಯದ ರಂಗು ಶಿಕ್ಷಣದಿ ತುಂಬಿರಲು
ರಾಜಸದ ಕೊಳೆಯನ್ನು ಕಳೆ ಬೇಗ ಬಾ..
ಬಿಜ್ಜೆಯೊಳು ಸಜ್ಜನತೆ ನೀ ತುಂಬು ಬಾ..

ನೀತಿ ಮೌಲ್ಯಗಳನೆಲ್ಲ ಹೆಡೆಮುರಿಯ ಕಟ್ಟಿರುವ
ರೀತಿ ರಾಕ್ಷಸರನ್ನು ನೀನಳಿಸು ಬಾ..
ಭೀತ ಮನಗಳನೆಲ್ಲ ನೀ ಮುದಗೊಳಿಸು ಬಾ

ಧನವೆಂಬ ದಾನವನ ದುಷ್ಕಾರ್ಯವಳಿಸುತಲಿ
ಜನಕೆ ಘನ ವಿದ್ಯೆಯನು ನೀ ಹಂಚು ಬಾ..
ಮನದಿ ಕಾಂತಿಯ ತುಂಬಿ ಜಗ ಬೆಳಗು ಬಾ

ಚೇತನವನಿಕೇತನದ ವರವಾಗಿ ರೂಪಿಸುವ
ಗತದ ಬದುಕಿಗೆ ನೀ ಬಲ‌ ನೀಡು ಬಾ..
ಋತದ ಕಾರ್ಯದಿ ಜಗವ ನೀ ಕಟ್ಟು ಬಾ..


Leave a Reply

Back To Top