ಬಿ.ಟಿ.ನಾಯಕ್ ಕಥೆ- ಸಮಾನತೆಯ ಅವಹೇಳನ 

ಕಥಾ ಸಂಗಾತಿ

ಸಮಾನತೆಯ ಅವಹೇಳನ

ಬಿ.ಟಿ.ನಾಯಕ್

                                  ಮಹೇಶ್ ಮತ್ತು ಶಾಂಭವಿ ಇಬ್ಬರೂ ಐಪಿಯಸ್ ಮತ್ತು ಐ.ಏ.ಯಸ್ ಅಧಿಕಾರಿಗಳು.  ಇಬ್ಬರೂ ಪ್ರೇಮಿಸಿಮದುವೆ ಯಾದವರು.  ಅಹಂ ಇಬ್ಬರಲ್ಲಿಯೂ ಮನೆ ಮಾಡಿತ್ತು. ಆದರೇ, ಅವರು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಡುತ್ತಿರಲಿಲ್ಲ. ಇನ್ನೇನು ಹತ್ತಿರ ಇದ್ದವರಿಗೆ ಮಾತ್ರ ಅವರ ಕಲಹ ಮತ್ತು ದೂಷಣೆಗಳು ಕೇಳಿ ಬರುತ್ತಿದ್ದವು. ಮಹೇಶ್

ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದರಿಂದ ಅವರಿಗೆ ದೊಡ್ಡ ಬಂಗಲೆ ಸಿಕ್ಕಿತ್ತು. ಶಾಂಭವಿ ಪ್ರೊಬೇಷನ್ ನಲ್ಲಿ ಇರುವದರಿಂದ ಅವರಿಗೆ ಯಾವ ಬಂಗಲೆಯನ್ನು ಸರಕಾರ ಕೊಟ್ಟಿರಲಿಲ್ಲ. ಅಲ್ಲದೇ  ಶಾಂಭವಿ ಸಹಾಯಕ ಕಮಿಷನರ್ ಆಗಿದ್ದರು. ಹಾಗಾಗಿ, ಮಹೇಶ್  ಶಾಂಭವಿಗೆ ಯಾವಾಗ್ಲೂ ಕುಟುಕುತ್ತಿದ್ದರು. ಆದರೇ, ಶಾಂಭವಿ ಹೆಸರಿಗೆ ತಕ್ಕಂತೆ ಬಹಳೇ ಧೈರ‍್ಯವಂತೆ, ಮಹೇಶ್ ಅವರಿಗೆ

ತಿರುಗಿ ಬೀಳುತ್ತಿದ್ದಳು.  ಹೀಗೆಯೇ ಅವರ ಸಂಅಸಾರ ನಡೆಯುತ್ತಿತ್ತು. 

ಮಹೇಶ್ ಗೆ ಯಾವಾಗ್ಲೂ ಕೋಪ ಜಾಸ್ತಿ. ಅವರ ಕೈಯಲ್ಲಿರುವ ಆರ‍್ಡರ‍್ಲೀಗಳಿಗೆ (ಪೊಲೀಸ್ ಪೇದೆ) ಅವಾಗಾವಾಗ ತಮ್ಮ ಕೋಪವನ್ನು ತೋರಿಸುತ್ತಿದ್ದರು.  ಆರ‍್ಡರ‍್ಲೀಗಳು ಒಂದು ರೀತಿ ಅಡ್ಜಸ್ಟ್ ಆಗಿದ್ದರು.  ಒಂದು ಬಾರಿ ಒಬ್ಬ ಆರ‍್ಡರ‍್ಲೀ ಕಿಚನ್ ನಲ್ಲಿ ಕೊಬ್ಬರಿ ತುರಿಯುತ್ತಿದ್ದ.  ಹಾಗೆ ತುರಿಯುತ್ತಿರುವಾಗ ಕೊನೆಗೆ ಒಂದು ತುಣುಕು ಉಳಿಯಿತು ಮತ್ತು ಮುಂದೆ ತುರಿಯಲು ಆಗೋದಿಲ್ಲ

ಎಂದುಕೊಂಡು ಅದನ್ನು ಬಾಯಿಯಲ್ಲಿ ಹಾಕಿಕೊಂಡು ಕಚಕಚನೇ ಜಗಿಯ ತೊಡಗಿದ. ಆ ಸನ್ನಿವೇಶವನ್ನು

ಮಹೇಶ್  ದೂರದಿಂದ ಕೂಲಂಕುಷವಾಗಿ ನೋಡುತ್ತಲೇ ಇದ್ದರು. ಅವರು ಧಾವಿಸಿ ಬಂದು

ಆರ‍್ಡರಲೀಯ ಕೆನ್ನೆಗೆ ಬಾರಿಸಿಯೇ ಬಿಟ್ಟರು !  ಅಷ್ಟಕ್ಕೇ ಬಿಡಲಿಲ್ಲ ಹೀಗೆ ಬೈದರು;

‘ಬ್ಲಡಿ ರಾಸ್ಕಲ್ ! ತಿನ್ನೋದಿಕ್ಕೆ ಬಿಟ್ಟಿ ಬಂದಿದೆಯಾ ? ಅದ್ಹೇಗಲೋ  ತಿಂದ್ಹಾಕಿದೆ , ಇದನ್ನು ನಿಮ್ಮಪ್ಪನ್ ಮನೆದೆಂದು ತಿಂದ್ಯಾ ? ‘

‘ಸಾರಿ ಸಾರ್,  ನನ್ನದು ತಪ್ಪಾಯಿತು.’ ಕ್ಷಮೆಯಾಚಿಸಿದ.

‘ಸಾರಿ ಎಂದರೆ ಆಯ್ತಾ ? ಇದರ ಹಾಗೆ ಎಷ್ಟು ಬಾರಿ ಬಾಯಿ ಚಪಲ ತೀರಿಸಿಕೊಂಡಿದ್ದೆಯೋ ಏನೋ, ಯಾವನಿಗೆ ಗೊತ್ತು. ?

‘ಇಲ್ಲ ಸಾರ್ ಯಾವಾಗ್ಲೂ ಇಲ್ಲ, ಇದೆ ಮೊದಲು ‘

‘ಬೋ…… ಮಗನೆ… ನಿನ್ನನ್ನು ನಾನು ನಂಬಬೇಕಾ ? ನಾನು ಯಾರು,  ಐ. ಪಿ.ಯಸ್. ಕಣಲೋ.. ನಿನ್ನ ಹಂಗೆ

ಥರ‍್ಡ್ ರೇಟ್ ಕಾನ್ಸ್ಟೇಬಲ್ ಅಲ್ಲಾಲೇ ಬೇಕೂಫಾ ‘.

ಈಗ  ಆರ‍್ಡರ‍್ಲೀ ನಿಜವಾಗಿ ಗರಂ ಆದ.  ಸ್ವಲ್ಪ ಗಾಂಭೀರ್ಯವಾಗಿ ಎದ್ದು ನಿಂತು ಅವರಿಗೆ ಉತ್ತರ ಕೊಟ್ಟ.

‘ನೋಡಿ ಸಾರ್ ನಾನು ನಿಮ್ಮ ಕೈ ಕೆಳಗೆ ಕೆಲಸ ಮಾಡುತ್ತಿರಬಹುದು, ಆದರೇ, ಅದು ಸರಕಾರಿ ಆದೇಶದ  ಪ್ರಕಾರ ಎಂದು ಮರೆಯಬೇಡಿ. ಇವತ್ತು ಇಲ್ಲೇ ನಾಳೆ ಇನ್ನೆಲ್ಲೋ ಅನ್ನೋದು ನಿಮಗೆ ತಿಳಿದಿದೆ ಅಂತ ಅನ್ಕೊಂತೀನಿ.’

‘ನಾನ್ಸೆನ್ಸ್, ನನಗೆಯೇ ಅವಾಜ್ ಹಾಕ್ತೀಯ ಒದ್ದು ಬಿಡ್ತಿನೀ’ ಎಂದರು ಸಾಹೇಬ್ರು.  ಅದಕ್ಕವನು ;

‘ದಂ ಇದ್ರೇ ಒದ್ದು ನೋಡಿ’ ಎಂದ.

ಮತ್ತಷ್ಟು ಕೆರಳಿದ ಸಾಹೇಬ್ರು ಝಾಡಿಸಿ ಒದ್ದೇ ಬಿಟ್ಟರು. ಅವನು ಕಟ್ಟು ಮಸ್ತಾದ ಯುವಕ, ಅವನು ಕೂಡ ತಯಾರಾಗಿಯೇ ನಿಂತ. ಇನ್ನೇನು ಅವನು ಮುಂದೆ ಬರ‍್ತಾನೆಂದುಕೊಂಡು ಸಾಹೇಬ್ರು ಅವನ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ಅವನ ಕಾಲುಗಳಿಗೆ ಅಡ್ಡಗಾಲು ಹಾಕಿ ಅವನನ್ನು ಕೆಳಗೆ ಕೆಡವಿದರು.

ಆಗ ಆರ‍್ಡರ‍್ಲೀ ಶಕ್ತಿ ಹಾಕಿ ಸಾಹೇಬ್ರನ್ನು ಕೆಳಗೆ ಕೆಡವಿದ. ಕೆಳಗೆ ಬಿದ್ದ ಸಾಹೇಬ್ರು ರೊಚ್ಚಿಗೆದ್ದು ಮರಳಿ

ಅವನನ್ನು ಅಂಗಾತ ಮಾಡಿ, ರಪ ರಪನೇ ಅವನ ಎರಡೂ ಕೆನ್ನೆಗಳಿಗೆ ಬಾರಿಸ ತೊಡಗಿದರು. ಆರ‍್ಡರ‍್ಲಿತನ್ನ ಪೂರ‍್ತಿ ಶಕ್ತಿಯನ್ನು ಉಪಯೋಗಿಸಿ ಸಾಹೇಬ್ರನ್ನು ಎತ್ತಿ ಕೆಳಗೆ ಕುಕ್ಕಿದ.  ಕುಕ್ಕಿದ ರಭಸಕ್ಕೆ

Silhoutte of couple walking along a beach under a colorful sunset sky

ಸಾಹೇಬ್ರು ಮೆತ್ತಗಾಗಿಬಿಟ್ರು !     

‘ಬ್ಲಡಿ ರಾಸ್ಕಲ್…ಯು ಆರ್  ಸಸ್ಪೆಂಡೆಡ್ ನೌ…. ಗೋ.. ಟು.. ಹೆಲ್ ‘ ಎಂದು ಅವನನ್ನು ತಿರುಗಿಸಿ ಒದ್ದರು.

ಅದಕ್ಕೆ ಪ್ರತಿಯಾಗಿ ;

‘ನನಗೂ ಸಾಕಾಗಿಹೋಗಿತ್ತು.  ಈ ಚಾಕರಿ ನನಗೆ ಬೇಕಾಗಿಲ್ಲ ನಿನ್ನಲ್ಲೇ ಇಟ್ಟುಕೋ ‘ ಎಂದು ಮುಖದ

ಮೇಲೆ ಹೊಡೆದ ಹಾಗೆ ಹೇಳಿ ಹೊರಟು ಹೋದ ಆರ‍್ಡರ‍್ಲಿ !   

ಅದನ್ನು ನೋಡುತ್ತ ನಿಂತಿದ್ದ ಉಳಿದವರು ಅಂಜಿ ಹೊರಕ್ಕೆ ಹೋದರು. ಆಗ ಆ ದೊಡ್ಡ ಬಂಗಲೆಯಲ್ಲಿ

ಉಳಿದವರು ಸಾಹೇಬ್ರು ಮತ್ತು ಮೆಯ್ಡ್ ಸರ‍್ವೆಂಟ್ ರೆಹನಾ ಮಾತ್ರ …… 

ಆಮೇಲೆ ಸಾಹೇಬ್ರು ತಮ್ಮ ಬೆಡ್ ರೂಮ್ ಕಡೆಗೆ ಹೋಗಿ ಒಂದು ಅರ‍್ಧ ಜಗ್ ನೀರನ್ನು ಕುಡಿದು

ದೊಪ್ಪನೆ ಬೆಡ್ ಮೇಲೆ ಬಿದ್ದುಕೊಂಡರು.                 ಆಗ ಮುಂಜಾವಿನ ಹತ್ತು ಗಂಟೆ. ಸ್ವಲ್ಪ ಹೊತ್ತಿನಲ್ಲಿ

ಕಂಟ್ರೋಲ್ ರೂಮಿನಿಂದ  ಕಾಲ್ ರಿಂಗಣಿಸಿತು.  ಕಾಲ್ ರಿಸೀವ್ ಮಾಡಿದ ಸಾಹೇಬ್ರು ಮಾತಾಡಿದ್ರು.

‘ನೋಡಿ, ನನಗೆ ಅರೋಗ್ಯ ಸರಿಯಿಲ್ಲ, ಏ.ಯಸ್.ಪಿ.ಯನ್ನು ನನಗೆ ಮಾತಾಡಲಿಕ್ಕೆ ಹೇಳಿ’ ಎಂದು

ರಿಸೀವರ್ ಇಟ್ಟರು.

ಆಮೇಲೆ  ಏ.ಯಸ್.ಪಿ ಇವರನ್ನು ಸಂಪರ‍್ಕಿಸಿದಾಗ ;

‘ರಾಣಾ ನನ್ನ ಅರೋಗ್ಯ ಸರಿಯಾಗಿಲ್ಲ.  ಸಾಯಂಕಾಲ ಸುಮಾರು ಆರು ಗಂಟೆಗೆ ಬರುತ್ತೇನೆ, ಅಲ್ಲಿಯವರೆಗೆ ಬ್ಯಾಲೆನ್ಸ್ ಮಾಡಿ.   ಏನಾದ್ರೂ ಎಮರ‍್ಜೆನ್ಸಿ ಇದ್ರೆ ತಿಳಿಸಿ  ಬರ‍್ತೇನೆ.’ ಎಂದು ಹೇಳಿದರು.

‘ ಓಕೆ ಸಾರ್ ‘ ಎಂದು ರಾಣಾ ಹೇಳಿದರು.

ಮಹೇಶ್ ರವರಿಗೆ ಸಮಾಧಾನವೇ ಇಲ್ಲದಾಯ್ತು. ಏನು ಮಾಡುವದು ಎಂದು ಗೊತ್ತಾಗಲೇ ಇಲ್ಲ.’

ಅವರ ಪಿ.ಏ. ನಕುಲ್ ಗೆ ಫೋನ್ ಮಾಡಿದರು. ಆಗ ನಕುಲ್ ಅವರ ಫೋನ್ ಕಾಲ್

ತೆಗೆದುಕೊಂಡು;

‘ ಗುಡ್ ಮಾರ‍್ನಿಂಗ್ ಸರ್…ಹೇಳಿ ಸರ್..,’

‘ ಮಿ. ನಕುಲ್… ಬೇರೆ ಒಬ್ಬ ಕುಕ್ ನನ್ನು ಕಳಿಸಿಕೊಡಿ.’

‘ ಏಕೆ ಸರ್, ಮುತ್ತು  ಬಂದಿಲ್ವ ?’

‘ ಅದರ ಬಗ್ಗೆ ನಾನು ಆಮೇಲೆ ಹೇಳ್ತೇನೆ.. ನೀವು ಅರ‍್ಜೆಂಟ್ ಕುಕ್ ನನ್ನು ಕಳಿಸಿಕೊಡಿ’

‘ ಓಕೆ ಸರ್., ನಾನು ನಿಮ್ಮಲ್ಲಿಗೆ ಬರಲೇ ?’

‘ಬೇಡ… ಹಾಗೇನಿದ್ದರೆ ನಾನೆ ನಿಮಗೆ ಕಾಲ್ ಮಾಡ್ತೇನೆ ‘  ಎಂದು ಮಾತು ಮುಗಿಸಿದರು.

ಅವರ ಆದೇಶದಂತೆ ಒಬ್ಬ ಹೊಸ ಕುಕ್ ಬಂದ.  ಬಂದವನೇ ಸಲ್ಯೂಟ್ ಹೊಡೆದ.

‘ಏನ್ ನಿನ್ನ ಹೆಸರು ?’ ಸಾಹೇಬ್ರು ಕೇಳಿದ್ರು.

‘ ಮಧು ಸಿಂಗ್… ಸಾಬ್  ‘ ಎಂದ ಕುಕ್.

‘ ಸರಿ ನಿನ್ನ ಡ್ಯೂಟಿ ಮಾಡಿಕೋ ‘

‘ ಮೆನು ಏನು ಇರಲಿ ಸಾಬ್  ‘ ಎಂದ.

‘ ಪರೋಟ, ಬೈಂಗನ್ ಸಬ್ಜಿ, ಆಲೂ ಬಾತ್ ಮತ್ತು ಖೀರ್ ಇರಲಿ ‘  ಎಂದರು.

‘ಆಯುತು ಸಾಬ್  ‘ ಎಂದು ಮತ್ತೊಂದು ಸಲ್ಯೂಟ್ ಹೊಡೆದು ಕಿಚನ್ ಕಡೆಗೆ ಹೋದ.

ಸ್ವಲ್ಪ ಹೊತ್ತಿನಲ್ಲೇ ಲಾಂಡ್ರಿಯವ ಬಂದ. ಮನೆಯಲ್ಲಿ ಯಾರೂ ಇರದ್ದನ್ನು ನೋಡಿ, ಜೋರಾಗಿ ಕಿರುಚಿದ.’ಸಾಬ್, ಮೇಮಸಾಬ್ ಯಾರಿದ್ದೀರಾ ?’

ಮೆಯ್ಡ್ ರ‍್ವೆಂಟ್ ರೆಹನಾ ಬಂದು ವಿಚಾರಿಸಿದಳು.

‘ರಾಜಣ್ಣ ನಿನ್ನೆ ನಿಮ್ಮ ಹೆಂಡ್ತಿ ಬಂದು ಎಲ್ಲ ಬಟ್ಟೆಗಳನ್ನು ಒಯ್ದರಲ್ಲ’

‘ಹಾಗಾದ್ರೆ ಈಗ ಏನು ಇಲ್ವಾ ?’  ರಾಜು ಕೇಳಿದ.

‘ಇಲ್ಲಾಂತ ಅನ್ನಿಸುತ್ತೆ ‘ ಎಂದಳು ರೆಹನಾ.

ಈ ಚರ್ಚೆ ಮಹೇಶ ಸಾಹೇಬ್ರ ಕಿವಿಗೆ ಬಿತ್ತು.  ಅವರು ಇಬ್ಬರಿಗೂ ತಮ್ಮ ರೂಮಿಗೆ ಬರಲು ಹೇಳಿದರು.

‘ಏನು ವಿಷಯ ?’ ಎಂದು ಕೇಳಿದರು ಸಾಹೇಬ್ರು.

ಆಗ ರೆಹನಾ ‘ ಸಾಬ್, ನಿನ್ನೆ ಮೇಡಂ ನಿಮ್ಮ  ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟಿದ್ದಾರೆ ‘ ಎಂದಳು.

ಅನುಮಾನ ಬಂದು, ಕೂಡಲೇ ತಮ್ಮ ರೂಮಿಗೆ ಹೋದರು.  ಅಲ್ಲಿ ನೋಡುತ್ತಾರೆ ಯುನಿಫಾರ‍್ಮ ಬಿಟ್ರೇ ಬೇರೆ ಬಟ್ಟೆಗಳೇ

ಇಲ್ಲ !  ಮೊದಲೇ ಅವರಿಗೆ ಕೋಪ ಮೂಗಿನಮೇಲೆ. ಅದನ್ನು ನೋಡಿ ಅವರು ಮೇಡಂ ರೂಮಿಗೆ ಹೋಗಿ ಇದ್ದ

ಬಿದ್ದ ಎಲ್ಲ ಚೂಡಿದಾರ್, ಕಮೀಜ್ ಮತ್ತು ಹತ್ತು ಹದಿನೈದು ಸೀರೆಗಳನ್ನೂ

ತೆಗೆದುಕೊಂಡು ಬಂದು ಲಾಂಡ್ರಿ ರಾಜುಗೆ ಕೊಟ್ಟು ಬಿಟ್ಟರು !

‘ಸಾಹೇಬ್ರೇ ಇವು ಚೆನ್ನಾಗಿವೆ ಅಲ್ಲವೇ..ಅಮ್ಮವರನ್ನು ಒಂದು ಮಾತು ಕೇಳಿ ಕೊಟ್ರೆ ಚೆನ್ನಾಗಿತ್ತು.’ ಎಂದ ರಾಜು.

‘ ಯು ಶಟ್ ಅಪ್ ಐಸೇ, ಏನ್ ಅನ್ಕೊಂಡಿಯಾ, ನನ್ನನ್ನು… ಆವಳನ್ನು ಕೇಳು ಅಂತೀಯಾ. ಎಷ್ಟು ಧೈರ‍್ಯ ನಿನಗೆ… ಲೋಫರ್, ಮಾತನಾಡದೇ ಎಲ್ಲಾ

ತೆಗೆದುಕೊಂಡು ಇಲ್ಲಿಂದ ಜಾಗ ಖಾಲಿ ಮಾಡು’ ಎಂದು ಸರ‍್ರನೇ ಅಲ್ಲಿಂದ ಹೊರಟರು.

ರೆಹನಾ ಸನ್ನೆ ಮಾಡಿ ಅವೆಲ್ಲವನ್ನು ತೆಗೆದುಕೊಂಡು ಹೋಗಲು ಹೇಳಿದಳು. ರಾಜುಗೆ ಯಾಕೋ ಐರನ್ ಮಾಡಿದ ಸಾರೀಗಳನ್ನು ಒಯ್ಯಲು ಮನಸಾಗಲೇ ಇಲ್ಲ ! ಸಾಹೇಬರ ಕೋಪ ಅವನ್ನೆಲ್ಲ ಒಯ್ಯುವಂತೆ ಮಾಡಿತು.  ಆತ ಅವೆಲ್ಲವನ್ನು ತೆಗೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ. ಸಾಹೇಬ್ರು ತಣ್ಣಗಾಗೀ ಹಗುರವಾದ ನಿದ್ದೆಗೆ ಜಾರಿದರು !

                                         ರಾತ್ರಿ ಸುಮಾರು ಹತ್ತು ಗಂಟೆಯಾಗಿತ್ತು, ಶಾಂಭವಿ ಮೇಡಂ ತಮ್ಮ ಡ್ಯೂಟಿ ಮುಗಿಸಿ ಕಾರಿನಲ್ಲಿ ಮನೆಗೆ ಬಂದರು.  ಬಂದವರೇ ರೆಹನಾಳನ್ನು ಕರೆದು;

‘ರೆಹನಾ….ಸಾಹೇಬ್ರು ಇದ್ದಾರೆಯೇ ?’

‘ಮೇಡಂ, ಅವರು ಇವತ್ತು ಆಫೀಸಿಗೆ ಹೋಗಿಲ್ಲ, ತಮಗೆ  ಅರೋಗ್ಯ ಸರಿ ಇಲ್ಲ ಎಂದು ಹೇಳಿದರು.

‘ಸರಿ,  ಮುತ್ತು  ರಾತ್ರಿಯ ಅಡುಗೆ ಏನು ಮಾಡಿದ್ದಾನೆ ಕೇಳು ? ‘

‘ಮೇಡಂ ಮುತ್ತು ಈಗಿಲ್ಲ, ಬದಲಿಗೆ ಮಧು ಸಿಂಗ್ ಎನ್ನೋನು ಹೊಸಬ  ಬಂದಿದ್ದಾನೆ.  ಸಾಹೇಬ್ರು        ಹೇಳಿದ ಮೆನು ಮಧ್ಯಾನ್ಹ ಮಾಡಿದ್ದಾನೆ. ರಾತ್ರಿಯದು ವಿಚಾರಿಸುತ್ತೇನೆ’  ಎಂದ್ಹೇಳಿ  ಒಳಗೆ ಹೋದಳು

ಸ್ವಲ್ಪ ಹೊತ್ತಿನಲ್ಲೇ ಬಂದು ;

‘ಮೇಡಂ, ಅವನು ರಾತ್ರಿಯ ಅಡಿಗೆ ಮಾಡಿಲ್ಲ ಬದಲಿಗೆ ಹೋಟೆಲ್ ನಿಂದ ನಿಮಗಾಗಿ ಊಟ ತರಿಸಿಟ್ಟಿದ್ದಾನೆ. ಅವನು ಒಂದು ಚೀಟಿ ಬರೆದು ಇಟ್ಟು ತನ್ನ ಹೆಂಡತಿಗೆ ಅರೋಗ್ಯ ಸರಿ ಇಲ್ಲ

ಎಂದು ಮನೆಗೆ ಹೋಗಿದ್ದಾನೆ. ‘ ಎಂದು ರೆಹನಾ ವರದಿ ಒಪ್ಪಿಸಿದಳು.

‘ಆಯಿತು ರೆಹನಾ, ತಂದ ಊಟ ಡೈನಿಂಗ್ ನಲ್ಲಿ ಇಟ್ಟು ಬಿಡು, ನಾನು ಒಂದೈದು ನಿಮಿಷದಲ್ಲಿ ಫ್ರೆಶ್ ಆಗಿ ಬರುತ್ತೇನೆ.’ ಎಂದುಹೇಳಿಹೋದರು.

ಆಮೇಲೆ,  ಶಾಂಭವಿ ಮೇಡಂ ಊಟ ಮುಗಿಸಿ, ಜೊತೆಗೆ ಕೆಲವು ಫೈಲುಗಳನ್ನು ತಮ್ಮ ರೂಮಿಗೆ ಕೊಂಡೋಯ್ದು ಮಧ್ಯ ರಾತ್ರಿವರೆಗೆ ಕೆಲಸ ಮಾಡಿ ಆಮೇಲೆ ನಿದ್ರೆಗೆ ಹೋದರು.

ಮುಂಜಾನೆ ಏಳು ಗಂಟೆಗೆ ಮಹೇಶ್ ಮತ್ತು ಶಾಂಭವಿ ಇಬ್ಬರೂ ಕಾಫಿ ಟೇಬಲಗೆ ಬಂದರು. ಪರಸ್ಪರ ‘ಗುಡ್ ಮಾರ‍್ನಿಂಗ್ ‘ ವಿಶ್ ಗಳಾದವು .

ಆಮೇಲೆ ಶಾಂಭವಿ ಮಹೇಶ್ ಅವರಿಗೆ ಕೇಳಿದಳು.

‘ಏನು ಸಾಹೇಬ್ರೇ ನಿನ್ನೆ ತಾವು ಡ್ಯೂಟಿಗೆ ಹೋಗಲಿಲ್ವಂತೆ, ಯಾಕೆ ಆರೋಗ್ಯ ಸರಿಯಾಗಿದ್ದಿಲ್ವಾ ?’

‘ಹೌದು. ಅನಾರೋಗ್ಯ ಅಂತಾ ತಾವು ಅನ್ಕೋಬಹುದು.’

‘ಏನು ಅದರ ಅರ‍್ಥ ? ಅರೋಗ್ಯ ಸರಿಯಾಗಿಲ್ಲ ಎಂದ್ರೇ ನನಗೆ ತಿಳಿಸಬಹುದಿತ್ತಲ್ವಾ  . ?’

‘ನನ್ನನ್ನು ನಾನೇ ನೋಡಿಕೊಳ್ಳಲು ಇನ್ನೂ ಶಕ್ತಿ ಇದೆ, ತಮ್ಮ ಅವಶ್ಯಕತೆ ಇಲ್ಲ ‘

‘ಹೋಗ್ಲಿ ಬಿಡಿ ಈಗ ಓಕೆನಾ ?’ ಮೇಡಂ ಕೇಳಿದ್ರು.

‘ಓಕೆ ಆಗ್ಲೇಬೇಕಲ್ಲ’ ಸಾಹೇಬ್ರು ಉತ್ತರ ಕೊಟ್ರು.

‘ಸರಿ ಬಿಡಿ, ನಾನು ಬೇಗ ರೆಡಿ ಆಗಬೇಕು.’ ಎಂದು ರೆಹನಾಳನ್ನು ಕೂಗಿದರು. ಅವಳು ಬಂದು ಬಿಟ್ಟಳು.    

‘ರೆಹನಾ, ಇಂದು ನಮ್ಮಲ್ಲಿ ಸ್ಪೆಷಲ್ ಮೀಟಿಂಗ್ ಇದೆ, ನಾನು ಬಾತ್ ರೂಮ್ ನಿಂದ ಬರೋದ್ರದಲ್ಲಿ ವೈಟ್ ಕಲರ್ ಗ್ರೀನ್ ಶೇಡೆಡ್ ಸಾರಿ ಮತ್ತು ಮ್ಯಾಚಿಂಗ್ ಬ್ಲೌಸನ್ನು ತೆಗೆದಿಡು’ ಎಂದರು.         

‘ಮೇಡಂ, ಆ ಸೀರೆ ಲಾಂಡ್ರಿಗೆ ಹೋಗಿದೆ.’ ಎಂದಳು ರೆಹನಾ.

‘ಅದು ಹೇಗೆ ಸಾಧ್ಯ, ಮೊನ್ನೆ ತಾನೇ ಲಾಂಡ್ರಿಯಿಂದ ಬಂದದ್ದು ?’

‘ಅದು ಸಾಹೇಬ್ರು …..ನಿನ್ನೆ ಲಾಂಡ್ರಿಗೆ ನಿಮ್ಮ ಎಲ್ಲ ಸೀರೆಗಳನ್ನು ಮತ್ತು ಚೂಡಿಗಳನ್ನು ಕೊಟ್ಟು ಬಿಟ್ಟರು.’

‘ವಾಟ್ ! ನನ್ನ ಕೇಳದೆಯೇ ಅವು ಹೇಗೆ ಕೊಟ್ಟರು. ?’

‘ನಂಗೊತ್ತಿಲ್ಲ ಮೇಡಂ’ ಅಷ್ಟು ಮಾತಾಡುವದರಲ್ಲಿ ಸಾಹೇಬ್ರು ಜಾರಿಕೊಂಡು ತಮ್ಮ ರೂಮ್ ಸೇರಿದ್ದರು. ಶಾಂಭವಿಗೆ ಮೇಡಂಗೆ ಬಹಳೇ ಕೋಪವಾಯಿತು.  ಸಾಹೇಬ್ರನ್ನು ಹುಡುಕುತ್ತ ಹೋದರು. ಸಾಹೇಬ್ರು ದೈನಿಕ ಪತ್ರಿಕೆಯನ್ನು ಮುಖಕ್ಕೆ ಹಿಡಿದುಕೊಂಡು ಮುಸಿ ಮುಸಿ ನಗುತ್ತಿದ್ದರು.’

ಬಿರುಗಾಳಿಯಂತೆ ಶಾಂಭವಿ ಅವರ ರೂಮಿನೊಳಗೆ ನುಗ್ಗಿ ಕೈಯಲ್ಲಿ ಇದ್ದ ಪೇಪರನ್ನು ಕಸಿದು ಬಿಸಾಕಿದರು. ಅವರನ್ನು ನೋಡಿ ಹೀಗೆ ಕೇಳಿದರು;

‘ಯಾಕೆ ಹೀಗೆ ಮಾಡಿದ್ರೀ…. ವಾಟ್ ಡು ಯು ಥಿಂಕ್ ಆಫ್ ಮೀ ?’ ಕಣ್ಣು ಕೆಂಪಗೆ ಆಗಿತ್ತು !

‘ಯಾಕೆ ಎಂದ್ರೆ, ನನ್ನವೆಲ್ಲಾ ಬಟ್ಟೆಗಳನ್ನೆಲ್ಲ ಲಾಂಡ್ರಿಗೆ ಕೊಡಲು ಎಷ್ಟು ಧೈರ‍್ಯ ನಿಮಗೆ ?’  ಸಾಹೇಬ್ರ ಉತ್ತರ ತಕ್ಷಣ ಬಂತು.

‘ಅದೇನು ಕೊಳೆ ಎನಿಸಿತು ಅದ್ಕೆ ಕೊಟ್ಟಿದ್ದೆ.  ಅದಕ್ಕೆ ಹೀಗ್ ಮಾಡೋದ ?’ ಮೇಡಂ ಕೇಳಿದ್ರು.

‘ನೋಡಿ ನಿನ್ನೆ ನನಗೊಂದು   ಟೆನ್ಷನ್ ಇತ್ತು, ಅದರ ಮೇಲೆ ಬರೆ ಎಳೆದ ಹಾಗೆ ನೀವು ನನ್ನ ಎಲ್ಲ ಬಟ್ಟೆಗಳನ್ನು  ಸಾಗಿಸಿಬಿಟ್ಟಿದ್ದಿರೀ. ನನಗೆ ಮತ್ತಷ್ಟು ಕೋಪ ಬಂದು ಹೀಗೆ ಮಾಡಿದೆ ‘

‘ಮತ್ತಷ್ಟು ಕೋಪ ಎಂದ್ರೇ ಏನರ್ಥ?’

‘ಅದು ಬಿಡಿ ಈಗ ಏನು ಮಾಡೋದು , ನನಗೂ ಬಟ್ಟೆ ಇಲ್ಲ ಮತ್ತು ನಿಮಗೂ ಇಲ್ಲ’ ಸಾಹೇಬ್ರು ಹೇಳಿದ್ರು.

‘ನನಗದೆಲ್ಲ ಗೊತ್ತಿಲ್ಲ, ನನಗೆ ಇನ್ನೊಂದು ಗಂಟೆಯಲ್ಲಿ ಸಾರಿ ಬೇಕೇ ಬೇಕು… ನೀವೇನು ಮಾಡ್ತೀರೋ ನಂಗೊತ್ತಿಲ್ಲ.’ ಎಂದು ಶಾಂಭವಿ ಹಠ ಹಿಡಿದರು.

‘ಸಾರಿ.. ನಾನೇನು ಮಾಡೋಕಾಗೋದಿಲ್ಲ ‘ ಎಂದು ಸಾಹೇಬ್ರು ಕೈ ತೊಳೆದುಕೊಂಡರು.

‘ಇರೀ ಬರ‍್ತೇನೆ ‘ ಎಂದು ಮೇಡಂ ಎದ್ದು ಹೋಗಿ ಫೋನ್ ಕಾಲ್ ಮಾಡಿದರು.  ಬಹುಷಃ ಲಾಂಡ್ರಿ

ಅವರಿಗೆ ಕಾಲ್ ಮಾಡಿರಬೇಕೆಂದು ಅಂದುಕೊಂಡರು ಸಾಹೇಬ್ರು.

ಆದರೇ, ಅವರ ಕರೆಗೆ ಸ್ವತಃ ಮಹೇಶ್  ಸಾಹೇಬ್ರ ಡ್ರೈವರ್ ಕಾರ್  ಜೊತೆಗೆ ಬಂದಿಳಿದ . ಬಂದವನೇ ಅಮ್ಮಾವ್ರಿಗೊಂದು ಸಲ್ಯೂಟ್ ಹೊಡೆದು, ಸಾಹೇಬ್ರನ್ನು ಹುಡುಕಲು ಪ್ರಾರಂಭಿಸಿದ. ಅವರು ಅದೇ ವಾಷ್  ರೂಮ್ನಿಂದ ಹೊರ ಬಂದಿದ್ದರು. ಅವರಿಗೂ ಸಲ್ಯೂಟ್ ಹೊಡೆದು;

‘ ಸರ್, ರೆಡಿ ‘ ಎಂದ.

‘ ಯಾಕೋ ಏನಾಗಿದೆ ನಿನಗೆ, ನಾನು ಕರೆದರೆ ಮಾತ್ರ ಬರಬೇಕಷ್ಟೇ , ಅದು ಹೇಗೆ ಬಂದೆ ?’

ಕೋಪದಿಂದಲೇ ಹೇಳಿದ್ರು.

‘ಸರ್, ಕಾಲ್ ಮಾಡಿದ್ದು ಮೇಡಂ ‘ ಎಂದ.

‘ಅಲ್ವೋ..ನೀನು ಡ್ಯೂಟಿ ಮಾಡೋದು ನನ್ನ ಕೈ ಕೆಳಗೋ ಅಥವಾ ಅವರ ಕೈಯಲ್ಲೋ ?’

ಅವನು ಏನೋ ಹೇಳಬೇಕೆನ್ನುವಷ್ಟರಲ್ಲಿ ಮಧ್ಯದಲ್ಲಿ ಮೇಡಂ ಹೇಳಿದರು;

‘ಸಾಹೇಬ್ರೇ ನೀವು ರೆಡಿ ಅಗ್ರೀ ಒಂದು ಕಡೆ ಹೋಗಬೇಕಾಗಿದೆ. ಬಂದು ಸ್ನಾನ ಮಾಡೋಣವಂತೆ.’

ಮೇಡಂ ಹೇಳಿದಾಗ ;

‘ಎಲ್ಲಿಗೆ ?’ ಎಂದು ಸಾಹೇಬ್ರು ಕೇಳಿದ್ರು.

‘ನಾನೆಲ್ಲಿಗೆ ಹೋಗುತ್ತೇನೆಯೋ ಅಲ್ಲಿಗೆ ‘ ಎಂದು ಖಡಕ್ಕಾಗಿಯೇ ಹೇಳಿದರು.

‘ನನಗೆ ಹೊರ ಹೋಗಲು ಬಟ್ಟೆಗಳಿಲ್ಲ, ನಾನು ಬರೋಲ್ಲ ‘ ಎಂದರು ಸಾಹೇಬ್ರು.

‘ನಾನು ಇದ್ದ ಬಟ್ಟೆಯಲ್ಲಿ ಹೋಗಬೇಕಿದೆ, ತಾವೂ ಹಾಗೆಯೇ  ಬರಬೇಕು ಅಷ್ಟೇ ದೂಸರಾ ಮಾತಿಲ್ಲ ‘

‘ ನೋ …. ನೋ…… ‘ ಸಾಹೇಬ್ರು ಪ್ರತಿಭಟಿಸಿದರು.

‘ಅವೆಲ್ಲ ಆಟ ಬೇಕಿಲ್ಲ… ಬರಬೇಕಷ್ಟೇ ‘ ಮೇಡಂ ಬಿಡಲಿಲ್ಲ ಅವರನ್ನು ಮುಂದು ಮಾಡಿಕೊಂಡು ಕಾರ್

ಹತ್ತಿದರು.

ಆ ಕಾರು  ಗಲ್ಲಿ ಗಲ್ಲಿಯೊಳಗೆ ತಿರುಗಿ ತಿರುಗಿ ಲಾಂಡ್ರಿಯ ಮುಂದೆ ನಿಂತಿತು.  ಇಬ್ಬರು ಕೆಳಗಿಳಿದು 

ರಾಜುನನ್ನು ಕರೆದರು.  ಪಾಪ ರಾಜು ಪೆಚ್ಚಾಗಿ ಅವರಿಬ್ಬರ ಮುಂದೆ ನಿಂತ.  ಎರಡು ಕೈ ಜೋಡಿಸಿ

ಇಬ್ಬರಿಗೂ ನಮಸ್ಕಾರ ಎಂದ.

‘ಏಯ್ ರಾಜು….ಅವರು ಕೊಟ್ಟರು ಅಂತ ಅದ್ಹೇಗೋ ನೀನು ತಂದಿದಿಯಾ  ನಿಂಗೆ ಬುದ್ಧಿ ಬೇಡ್ವಾ ? ‘ ಶಾಂಭವಿ

ಕೆಟ್ಟ ಕೋಪದಿಂದ.

‘ಮೇಡಂ ನೀವು ನನ್ನ ಕೆನ್ನೆಗೆ ಹೊಡಿರೀ ನನಗೆ ಬೇಸರವಿಲ್ಲ. ಆದರೆ ನಿನ್ನೆ ಸಾಹೇಬ್ರು ಬಹಳೇ

ಕೋಪದಿಂದ ನನಗೆ ಬಟ್ಟೆಗಳನ್ನು ತರುವ ಹಾಗೆ  ಮಾಡಿದರು. ಬೇಕಾದ್ರೇ  ರೆಹನಾ ಅಕ್ಕನನ್ನು ಕೇಳಿ’

‘ಆಯಿತು ….ಈಗ ನನ್ನ ಸಾರೀಗಳು ಎಲ್ಲಿವೆ ?’ ಎಂದು ಮೇಡಂ ಕೇಳಿದ್ರು. ಆಗ ಸಾಹೇಬ್ರು ಕೂಡ ಧ್ವನಿ  ಸೇರಿಸಿದರು;   ‘ ನನ್ನವು ಎಲ್ಲಿ ?’

‘ ಮೇಡಂ ಜನ ನೋಡ್ತಾ ಇದ್ದಾರೆ.. ತಾವು ಇಲ್ಲಿಂದ ಹೋಗಿ ಬಿಡಿ ನಾನು ತಂದು ಕೊಡ್ತೀನಿ’ ಎಂದ ರಾಜು. ಅದಕ್ಕವರಿಬ್ಬರು ಜಗ್ಗಲಿಲ್ಲ. ಅಲ್ಲಿಯೇ ನಿಂತರು !

ರಾಜು ಒಳಗೆ ಹೋಗಿ ಅವರ ಬಟ್ಟೆಗಳನ್ನೆಲ್ಲ ತಂದು ಕಾರಿನಲ್ಲಿ ಇಟ್ಟ. ಅವರಿಬ್ಬರೂ ಕಾರಿನಲ್ಲಿ ಕುಳಿತುಕೊಂಡರು. ಮೇಡಂ ರಾಜುನನ್ನು ಕರೆದು ಹೀಗೆ ಕೇಳಿದರು;

‘ಏನ್ ರಾಜು, ಸೀರೆ ಮತ್ತು ಬಟ್ಟೆಗಳನ್ನು ಇಷ್ಟು ಬೇಗ ಹೇಗೆ ರೆಡಿ ಮಾಡಿದೆ ?’  ಅದಕ್ಕವನು;

‘ನಿನ್ನೆ ನಾನು ಬರುವಾಗ ರೆಹನಕ್ಕ ಆದಷ್ಟು ಬೇಗ ರೆಡಿ ಮಾಡಲಿಕ್ಕೆ ಹೇಳಿದ್ಲು . ಅದಕ್ಕೆ ಬರಿ ಐರನ್

ಮಾಡಿ ಇಟ್ಟಿದ್ದೆನೆ.’  ಮೇಡಂ ಮುಗುಳ್ನಕ್ಕರು ಆದರೇ  ಸಾಹೇಬ್ರು ಇವನ ಕಡೆ  ನೋಡಲೂ ಇಲ್ಲ !


ಬಿ.ಟಿ.ನಾಯಕ್

.

6 thoughts on “ಬಿ.ಟಿ.ನಾಯಕ್ ಕಥೆ- ಸಮಾನತೆಯ ಅವಹೇಳನ 

  1. ಪೊಲೀಸ್ ಆರ್ಡರ್ಲಿಗಳ ಬವಣೆ ಮತ್ತು ಐ ಪಿ ಎಸ್ ಅಧಿಕಾರಿಗಳು ಅವರ ಕೈಗೆಳನಿವರನ್ನು ಹೇಗೆ ಶೋಷಿಸುತ್ತಾರೆ ಎಂದು ಚೆನ್ನಾಗಿ ಚಿತ್ರಿಸಿದ್ದೀರಿ. ಕಥೆ ಚೆನ್ನಾಗಿದೆ.ಅಭಿನಂದನೆಗಳು ಸಾರ್

    1. ತಮ್ಮ ಅನಿಸಿಕೆ ನನಗೆ ಪ್ರೇರಕವಾಗಿದೆ. ಧನ್ಯವಾದಗಳು M.R.

    2. ಹೈಫೈಗಳ ಜಟಾಪಟಿಯನ್ನು ಸೊಗಸಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.

  2. ದೊಡ್ಡವರ ಸಣ್ಣತನ ಚೆನ್ನಾಗಿ ಚಿತ್ರಿಸಿದ್ದೀರಿ. Ego never accept the truth

Leave a Reply

Back To Top