ಕಾವ್ಯ ಸಂಗಾತಿ
ಗಜಲ್
ಎ. ಹೇಮಗಂಗಾ

ಕಾವಿಧಾರಿ ಕಾಮುಕನಲ್ಲವೆಂಬುದು ಹುಸಿಯಾಗಿದೆ ಈಗ
ಸರ್ವಸುಖದ ಪರಿತ್ಯಾಗಿಯೆಂಬುದು ಹುಸಿಯಾಗಿದೆ ಈಗ
ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಯಾವ ಎಗ್ಗಿಲ್ಲದೇ
ಯೋಗಿ ಅಯೋಗ್ಯನಲ್ಲವೆಂಬುದು ಹುಸಿಯಾಗಿದೆ ಈಗ
ಸಾತ್ವಿಕತೆ, ನೈತಿಕತೆಗಳ ಅರಸಬೇಕಿದೆ ಭೂತಗನ್ನಡಿಯಲ್ಲಿ
ಲೋಲುಪತೆ ತೊರೆದವನೆಂಬುದು ಹುಸಿಯಾಗಿದೆ ಈಗ
ಚಂಚಲ, ಚಪಲ ಚಿತ್ತಕೆ ವಯಸ್ಸಿನ ಮಿತಿಯಾದರೂ ಎಲ್ಲಿ?
ಗೋಮುಖದ ನಡೆ ಸತ್ಯವೆಂಬುದು ಹುಸಿಯಾಗಿದೆ ಈಗ

ಪಂಜರದಲಿ ಬಂದಿಯಾಗಿ ನಿತ್ಯ ನಲುಗುತ್ತಿವೆ ಎಳೆಜೀವಗಳು
ಇಂದ್ರಿಯ ನಿಗ್ರಹ ಸಾಧಿಸಿದವನೆಂಬುದು ಹುಸಿಯಾಗಿದೆ ಈಗ
ಮುಖವಾಡದ ಬಾಳು ಎಷ್ಟು ಕಾಲ ಸಾಗೀತು ಹೇಳು ಹೇಮ?
ಮಠಾಧೀಶನೆಂದೂ ಕರ್ಮಠನೆಂಬುದು ಹುಸಿಯಾಗಿದೆ ಈಗ