ಶಿಕ್ಷಕ ವೃತ್ತಿ ಪಾವಿತ್ರ್ಯಕ್ಕಿರಲಿ ಈ ಗುಣಗಳು

ಶಿಕ್ಷಕ ದಿನಾಚರಣೆ ವಿಶೇಷ

 ಶಿಕ್ಷಕ ವೃತ್ತಿ ಪಾವಿತ್ರ್ಯಕ್ಕಿರಲಿ ಈ ಗುಣಗಳು

ರೋಹಿಣಿ ಯಾದವಾಡ

     ” ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ

ಗುರುಸಾಕ್ಷಾತ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”.

     ಗುರುಗಳಿಗೆ ಗೌರವ, ಪ್ರಾವಿತ್ಯತೆಯನ್ನು ಕೊಟ್ಟಂತ ದೇಶ ನಮ್ಮದು. ಇಲ್ಲಿ ಗುರುವನ್ನು ದೇವರಿಗೆ ಸಮನೆಂದು ಕಾಣುತ್ತ ಬಂದವರು.” ಪರಿವರ್ತನೆ ಜಗದ ನಿಯಮ” ಎನ್ನುವಂತೆ ಆದಿಮಾನವನಿಂದ ಹಿಡಿದು ಆಧುನಿಕತೆಯ ಬೆಳವಣಿಗೆಯ ಮಧ್ಯದ ಕಾಲಘಟ್ಟದಲ್ಲಿ ಪರಿವರ್ತನೆ, ಬದಲಾವಣೆ ಹೊಂದುತ್ತ ಬಂದಿರುವುದು ವಿಶೇಷ.

      ವೇದಕಾಲದಲ್ಲಿ  ‘ಗುರು’ ವೆಂದು ಸಂಭೋದಿಸುವುದು ಬರಬರುತ್ತ  ‘ಶಿಕ್ಷಕ’ ಎಂದು ಸಂಭೋದಿಸಲಾರಂಭಿಸಿದರು. ಅದರಂತೆ ಮೇಲಿನ ಗುರುಸ್ತುತಿಯ ಶ್ಲೋಕವು ಬದಲಾಗಿದೆ.

    ” ಗುರುವಾಟ್ಸಪ್ ಗುರು ಪ್ಲೇಸ್ಟೊರ್

ಗುರು ಟ್ವೀಟರ್ ಗುರು ಇನ್ಸ್ಟಾಗ್ರಾಮ್ ಗುರು ಪ್ಲೇ ಸ್ಟೊರ್

ಮೋಬೆಲ್ ಸಾಕ್ಷತ್ ಪರಬ್ರಹ್ಮ ತಸ್ಮೈ ಶ್ರೀ ವಾಟ್ಸಪ್ ನಮಃ” ಎಂಬಂತಾಗಿದೆ. ಕಾಲ ಹೋದಂತೆ ಬದಲಾವಣೆ ಅನಿವಾರ್ಯ ಎನ್ನುವಂತದ್ದನ್ನು ಒಪ್ಪಲೇಬೇಕು.

      ಹನ್ನೆರಡನೆ ಶತಮಾನದಲ್ಲಿ ಶರಣ ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ ” ಕೃತತುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ಧಿಯ ಕಲಿಸಿದರೆ, ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ಧಿಯ ಕಲಿಸಿದರೆ, ದ್ವಾಪರ ಯುಗದಲ್ಲಿ ಗುರು ಶಿಷ್ಯನಿಗೆ ಝೇಂಕಿಸಿ ( ಗದರಿಸಿ) ಬುದ್ಧಿಯ ಕಲಿಸಿದರೆ  ಆಗಲಿ ಮಹಾಪ್ರಸಾದವೆಂದವರು, ಕಲಿಯುಗದಲ್ಲಿ ಎಂತಹ ಪರಿಸ್ಥಿತಿ ಬರುತ್ತದೆಂದರೆ  ‘ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಬೇಕಾಗುತ್ತದೆ’ ಎಂಬುದನ್ನು ೯೦೦ ವರುಷಗಳ ಹಿಂದೆ ಅಂದೇ ಹೇಳಿದ್ದಾರೆ. ಇದನ್ನು ನೋಡಿದಾಗ ವಿಪರ್ಯಾಸ್ ಎನಿಸಿದರೂ ಸಧ್ಯ ಅಂತಹ ಪರಿಸ್ಥಿತಿ ಇರುವುದಂತೂ ಸುಳ್ಳಲ್ಲ. ಪರಿವರ್ತನೆ ಜಗದ ನಿಯಮ ಅಲ್ಲವೇ?

     ಹಾಗಂತ ಶಿಕ್ಷಕರೆನಿಸಿಕೊಂಡವರಿಗೆ ಇಂದು ಗೌರವವೇ ಇಲ್ಲವೇ?  ಉತ್ತರಕ್ಕೆ ತಡಕಾಡಬೇಕಾಗುತ್ತದೆ. ಆದರೆ ಮೌಲ್ಯಗಳನ್ನು ಹೊಂದಿರುವ ಶಿಕ್ಷಕರಿಗೆ ಯಾವತ್ತೂ ಅಗೌರವ ಎಂಬುವುದಿಲ್ಲ. ಅಂಥವರು ಜನಾನುರಾಗಿಗಳಾಗಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಉಳಿಯುತ್ತಾರೆ. ಹಾಗಾದರೆ ಶಿಕ್ಷಕನಲ್ಲಿ ಯಾವ ಮೌಲ್ಯಗಳಿರಬೇಕು ಎಂದರೆ ಈ ವೃತ್ತಿಗೆ ಬಂದು ಕೆಲ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೊದಲು ಸದಾ ಹಸನ್ಮುಖಿಗಳಾಗಿ ವಿದ್ಯಾರ್ಥಿಗಳೆದುರು ನಿಂತಕೊಳ್ಳಬೇಕು. ಸಮಯಕ್ಕೆ ಪ್ರಾದ್ಯಾನ್ಯತೆ ಕೊಡಬೇಕು. ವಿಷಯ ಜ್ಞಾನಕ್ಕೆ ನಿರಂತರ ತವಕಿಸುವಂತಿರಬೇಕು. ಮೌಲ್ಯಗಳಲ್ಲಿ ಶಿಸ್ತು ಮೈಗೂಡಿಸಿಕೊಂಡಿರಬೇಕು. ಶೃದ್ಧೆಯ ಕಾಯಕ ತನ್ನದು ಎಂದರಿತಿರಬೇಕು. ಕಲಿಸುವ ವಿಷಯದ ಬಗ್ಗೆ ಆಳವಾದ ಜ್ಞಾನವಿರಬೇಕು. ಹರವಾದ ಮಾಹಿತಿ ಸಂಗ್ರಹಿಸಿಕೊಂಡು ಪಾಠ ಮಾಡಬೇಕು.

    ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಿದ್ದಂತೆ ಅಲ್ಲದೆ ಅವು ಸಂಸ್ಕೃತಿ ಯ ಅವಿಭಾಜ್ಯ ಅಂಗವಾಗಿವೆ. ಅದಕ್ಕಾಗಿ ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ, ನಿಯಮ,ಸತ್ಯ, ಶಿಸ್ತು, ಸಹನೆ, ಅನುಕಂಪ, ಸಹಕಾರ , ಸಹಿಷ್ಣತೆ,  ಬಂಧುತ್ವ,  ಸಂಸ್ಕಾರ, ಮಾನವೀಯ ಗುಣ, ಪ್ರಾಮಾಣಿಕತೆ,  ಸದಾಚಾರ, ಇವೇ ಮೊದಲಾದ  ಉತ್ತಮ ನಡುವಳಿಕೆಗಳೇ ಮೌಲ್ಯಗಳಾಗಿವೆ.

     ಮೌಲ್ಯಗಳನ್ನು ಹೇಳುವುದು ಮುಖ್ಯವಲ್ಲ, ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎಂಬುವುದು ಮುಖ್ಯ. ಅವುಗಳ ಅಳವಡಿಕೆಯಿಂದ ನಮ್ಮ ವೃತ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ. ಮೌಲ್ಯಗಳು ನಮ್ಮ ಬದುಕನ್ನು ಸಹ ಸುಂದರಗೊಳಿಸುತ್ತವೆ. ಜೊತಗೆ ನಮ್ಮ ಗೌರವ , ಘನತೆಯನ್ನು ವೃದ್ಧಿಸಿ ಚಿನ್ನದಂತೆ ಪರಿಶುದ್ಧಗೊಳ್ಳುವುದು.

       ಡಾ.ರಾಧಾಕೃಷ್ಣನ್ ರೇ ಹೇಳುವಂತೆ ” ಮಾನವ ಹಕ್ಕಿಯಂತೆ ಹಾರಬಲ್ಲ, ಮಿನಿನಂತೆ ಈಜಬಲ್ಲ, ಅದರೆ ಮೌಲ್ಯಗಳನ್ನು ಆಲವಡಿಸಿಕೊಂಡು ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ ಎನ್ನುವುದು  ಸರಿಯಲ್ಲವೇ.

      ಈ ನಾಡಿನಲ್ಲಿ ಅನೇಕ ಆದರ್ಶ ಮಹನೀಯರಿದ್ದಾರೆ. ಇಂದಿಗೂ ಅನುಕರಣೀಯವೆನಿಸುವ ಸರಳ ವ್ಯಕ್ತಿತ್ವದ ಎ.ಪಿ.ಜೆ ಅಬ್ದುಲ್ ಕಲಾಂ, ಮದರ ಥೆರೆಸಾ ಮೊದಲಾದವರು.

    ಮಕ್ಕಳು ಅನುಕರಣಾ ಜೀವಿಗಳು.‌ ನಮ್ಮನ್ನು ಅನುಸರಿಸುವ ಮಕ್ಕಳಲ್ಲಿ ಪ್ರೀತಿ, ವಿಶ್ವಾಸ, ತೋರಿದರೆ, ಮಕ್ಕಳು ನೈತಿಕ ಮೌಲ್ಯಗಳನ್ನು ತಂತಾನೇ ಕಲಿರು ಒಳ್ಳೇಯ ನಾಗರಿಕರಾಗುತ್ತಾರೆ. ತಪ್ಪು ಮಾಡುವ ಮಕ್ಕಳನ್ನು ಪ್ರೀತಿಯಿಂದ ತಿದ್ದಬೇಕು. ಅವರಿಗೆ ಅರಿವುಂಟಾಗುವಂತೆ ಮಾಡಬೇಕು. ಸರಿ-ತಪ್ಪುಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸುವಂತೆ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ಶಿಸ್ತಿನ ಮೌಲ್ಯಗಳು ಚಿಕ್ಕಂದಿನಿಂದಲೇ  ಕರಗತವಾಗಬೇಕು.

    ” ತಂದೆ- ತಾಯಿ ಜೀವನ ಕೊಡತಾರೆ, ಶಿಕ್ಷಕರು ಜೀವನ ಸಾಗಿಸುವ ದಾರಿಯನ್ನು ತೋರಿಸುವ ಮಾರ್ಗದರ್ಶಕರಾಗಬೇಕಾಗುತ್ತದೆ. ”  ನಾವೇನು ಬಡ ಶಿಕ್ಷಕರೆಂದು ಶಿಕ್ಷಕರಾದವರು ಹಣದಿಂದ ತಮ್ಮನ್ನು ಅಳೆದುಕೊಳ್ಳಬಾರದು. ಶಿಕ್ಷಕರಿಗೆ ತಮ್ಮ ಶಕ್ತಿ ತಮಗೆ ಗೋತ್ತಿಲ್ಲ. ನಾವು ಕಡಿಮೆ ಅಂತೂ ಅಂದಕೊಬೇಡಿ ಯಾಕೆಂದರೆ ಮುಂದೊಂದು ದಿನ ನಾವು ನಡಿತಾ ಹೊರಟಾಗ, ಪಕ್ಕದಲ್ಲಿ ಒಂದು ಕೆಂಪು ಗೂಟದ ಕಾರು ಬಂದು ನಿಂತು, ಅದರಲ್ಲಿಯ ಒಬ್ಬ ವ್ಯಕ್ತಿ ಇಳಿದು ಬಂದು , ತನ್ನ ಪರಿಚಯ ಮಾಡಿಕೊಳ್ಳುತ್ತ ” ನಾ ನಿಮ್ಮ ವಿದ್ಯಾರ್ಥಿರೀ, ಈಗ ನಾ ಡಿಸಿ ಅಥವಾ ಮಂತ್ರಿ,ಉದ್ಯಮಿ” ಅಂತ ಹೇಳಿದಾಗ,  ಎಷ್ಟ ಹೆಮ್ಮೆ ಆಗತದೆ. ಎಪಿಜೆ ಅಬ್ದುಲ್ ಕಲಾಂ, ಎಂ ವಿಶ್ವೇರಯ್ಯ, ಅಂಬಾನಿ, ಸುಧಾಮೂರ್ತಿ ಇಂತವರನ್ನೆಲ್ಲ ರೂಪಿಸಿದ ಹೆಮ್ಮೆ ಶಿಕ್ಷಕ ವೃತ್ತಿಯ ಶಿಕ್ಷಕರಿಗಿರಲಿ.

     ಕಾಲದ ಜೊತೆ ನಾವು ಹೆಜ್ಜೆ ಹಾಕಬೇಕು, ಇಂದಿನ ದಿನಮಾನಕ್ಕೆ ತಕ್ಕಂತೆ ನಮ್ಮನ ನಾವು ಅಪಡೆಟ್ ಆಗದಿದ್ದರ ನಾವು ಔಟ ಆದಂತೆ ತಿಳಿರಿ.

      ಮನಶಾಸ್ತ್ರಜ್ಞ ಥಾರ್ನೆಡೈಕ ರು ಶಿಕ್ಷಕರು ವಿದ್ಯಾರ್ಥಿಗಳು ಹೇಗೆ ಇರುತ್ತಾರೆ ಎಂಬುದನ್ನು ತುಂಬ ಚನ್ನಾಗಿ ಈ ರೀತಿ ಹೇಳಿದ್ದಾರೆ. ”  ಶಿಕ್ಷಕರು ಓದುತ್ತಿದ್ದರೆ ಅವರ ವಿದ್ಯಾರ್ಥಿಗಳು ನಡೆಯುತ್ತಾರೆ, ಶಿಕ್ಷಕರು ನಡೆಯುತ್ತಿದ್ದರೆ ವಿದ್ಯಾರ್ಥಿಗಳು ನಿಲ್ಲುತ್ತಾರೆ, ಶಿಕ್ಷಕರು ನಿಂತಿದ್ದರೆ ಅವರ ವಿದ್ಯಾರ್ಥಿಗಳು ಮಲಗುತ್ತಾರೆ, ಶಿಕ್ಷಕರು ಮಲಗಿದ್ದರೆ ವಿದ್ಯಾರ್ಥಿಗಳು ನಿದ್ರಿಸುತ್ತಾರೆ. ನಿಮ್ಮ ವಿದ್ಯಾರ್ಥಿಗಳು ತರಗತಿಯಲ್ಲಿ ನಿದ್ರಿಸುತಿದ್ದರೆ ಅವರು ಸತ್ತಂತೆ ಸರಿ” ಎಂದಿರುವುದನ್ನು ನೋಡಿದರೆ, ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ವಿದ್ಯಾರ್ಥಿಗಳಲ್ಲಿ ಚೈತನ್ಯದ ಚಿಲುಮೆಯನ್ನು ಬೆಳಗಿಸೋಣ.

ಶಿಕ್ಷಕ ವೃತ್ತಿಯ ಎಲ್ಲರಿಗೂ ನಾನೊಬ್ಬ ಶಿಕ್ಷಕಿಯಾಗಿ ಶುಭಾಶಯಗಳನ್ನು ಕೋರುತ್ತೇನೆ.

—————————

        ರೋಹಿಣಿ ಯಾದವಾಡ

Leave a Reply

Back To Top