ಕಾವ್ಯ ಸಂಗಾತಿ
ಶಿಕ್ಷಕ ದಿನಾಚರಣೆ ವಿಶೇಷ
ಮೇರು ಶಿಖರ
ಸುರೇಶ್ ಕಲಾಪ್ರಿಯಾ ಗರಗದಹಳ್ಳಿ
ಕಥೆಗಳನರುಹಿ ವ್ಯಥೆಗಳ ಕಳೆದು
ಬರಿದು ಮಸ್ತಕಕೆ ಅಕ್ಷರ ಸುರಿದು
ಜ್ಞಾನದ ಜ್ಯೋತಿಯ ಬೆಳಗಿದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ಲಜ್ಜೆಯನಳಿಸಿ ಹೆಜ್ಜೆಯ ಹಾಕಿಸಿ
ಗೀತೆಗಳೊಡನೆ ತಂತಿಯ ಮೀಟಿಸಿ
ರಾಗ ಲಯ ಸ್ವರಗಳ ಅರುಹಿದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ತೊದಲು ನುಡಿಗಳನ್ನು ಚೆಂದದಿ ತಿದ್ದಿ
ಕಲೆ ಎಂಬುವ ಮೂಸೆಯಲಿ ಅದ್ದಿ
ಸಂಭಾಷಣೆಗಳ ನಾಲಗೆಗಿಳಿಸಿದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ಬೆರಳಿಗೆ ನಿಮ್ಮಯ ಕೈಗಳ ಸೋಕಿಸಿ
ಕಾಂತ ಶಕ್ತಿಯ ಮನದೊಳು ಹೊಕ್ಕಿಸಿ
ಬರಹ ಲೋಕದಲ್ಲಿ ತೇಲಿಸಿದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ಮಾತಾಪಿತರನು ಎದುರಲ್ಲಿ ನಿಲ್ಲಿಸಿ
ನನ್ನಯ ಚುರುಕಿನ ಬುದ್ಧಿಯ ಅರುಹಿಸಿ
ಇಂದಿನ ಸ್ಥಾನಕ್ಕೆ ಬೆನ್ನೆಲುಬಾದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ನನ್ನದೇನಿಲ್ಲವಿಲ್ಲಿ ಎಲ್ಲವೂ ತಮ್ಮದೇ
ಪ್ರತಿ ಕಾರ್ಯದ ನಂತರ ಬೀಗುವುದೆನ್ನೆದೆ
ನನ್ನಸ್ಥಿತ್ವದ ನಿಜ ರೂವಾರಿಯಾದ ಗುರುವೇ
ನನ್ನಯ ಪಾಲಿಗೆ ನೀ ಶಿಖರ
ಸಾಂದರ್ಭಿಕ ಶಿಕ್ಷಕರ ದಿನಾಚರಣೆಯ ಅಂಗವಾಗಿ ಬರೆದ ಕವಿತೆ ಚೆನ್ನಾಗಿದೆ- ಆರ್ಥಪೂರ್ಣವಾಗಿದೆ. ಅಭಿನಂದನೆಗಳು
ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್