ಕಾವ್ಯ ಸಂಗಾತಿ
ಕೊನೆಯಿರದ ಯಾತ್ರೆ….!
ಶಂಕರಾನಂದ ಹೆಬ್ಬಾಳ ಕವಿತೆ
ಮೈಲಿದೂರ ನಡೆದ
ನನ್ನ ಯಾತ್ರೆಗೆ ಕೊನೆಯಿಲ್ಲ….?
ಒಲವಿನ ಪಥವ
ನೇಪಥ್ಯಕ್ಕೆ ಸರಿಸಿದೆ,
ತಹಿಕಾರನ ಜಿಂದಗಿಯ
ಬರಿದು ಮಾಡಿದೆ…!
ಹರಿವ ಹಾವಿನಂತೆ,
ಉರಿವ ಕೊಳ್ಳಿಯಂತೆ,
ಕಾಳ ಕತ್ತಲೆಯ ಕೂಪದಿ
ಒತ್ತಂಬದಿ ತಳ್ಳಿದೆ..!
ಅಪಧಮನಿ ಅಭಿದಮನಿ
ನರನಾಡಿಯಲ್ಲಿ ತುಂಬಿ,
ನಗುತಿರುವೆ ಮೇನೆಯೇರಿ…!
ನಿನ್ನ ಹುಡುಕುವ ಇರಾದೆ,
ಸಿಗದ ಮರಿಚೀಕೆ,ಹೊರಟೆ
ಕಾನನದ ಗಿರಿಯನೇರಿ….!
ಷಟ್ಪದದಂತೆ ತಿರುಗಿರುವೆ,
ಪತಂಗದಂತೆ ಹಾರುತಿರುವೆ,
ಗುರಿಯಿರದ ಬಾಳು,
ಜೇಡ ಕಟ್ಟಿದ ಮೂಲೆ….!
ಹೆಜ್ಜೆ ಸಪ್ಪಳದಿ ಕದಲಿದೆ
ಹಾದಿಗುಂಟ ನಡೆದೆ,
ದಿಕ್ಸೂಚಿಯಿರದ ಚಾಲಕನಂತೆ
ಸಿಗಲೊಲ್ಲಳು ಬಾಲೆ…!
ಸೋತುಹೋದ ಕಾಲು
ಮುಗಿಯದ ಪಥ
ದುಃಖದ ಅಳಲು ಕೇಳುವರಿಲ್ಲ…!
ಕುದಿವ ಬಾಣಲೆಯಲ್ಲಿ
ಹುರಿದಂತಾಗಿದೆ ಜೀವ,
ಆದರೂ ಈ ಯಾತ್ರೆಗೆ ಕೊನೆಯಿಲ್ಲ…!