ಗಝಲ್

ಕಾವ್ಯ ಸಂಗಾತಿ

ಗಝಲ್

ಉಷಾಜ್ಯೋತಿ ಮಾನ್ವಿ

ಬೆಚ್ಚಗೆ ಮನದಲ್ಲಿ ಮುಚ್ಚಿಟ್ಟು ನೆನೆಸಿದೆ ನಿನ್ನನು ಗೆಳೆಯಾ
ಮೆಚ್ಚಿಗೆ ನುಡಿಗಳ ಬಚ್ಚಿಟ್ಟು ಧ್ಯಾನಿಸಿದೆ ನಿನ್ನನು ಗೆಳೆಯಾ

ಭಾವನೆಗಳ ರೆಕ್ಕೆ ಪುಕ್ಕ ಹರಡಿ ಸ್ವಚ್ಛಂದದಲಿ ಹಾರೋಣವೇ
ಕಟ್ಟುಪಾಡುಗಳ ಎಲ್ಲೆ ಮೀರಿ ಪ್ರೀತಿಸಿದೆ ನಿನ್ನನು ಗೆಳೆಯಾ

ತನುವೆರಡು ಜೀವ ಒಂದಾಗಿ ವಿಹರಿಸಲಿಲ್ಲವೇ ಹೇಳು
ವಿರಹದುರಿಯಲಿ ಬೆಂದರೂ ವರಿಸಿದೆ ನಿನ್ನನು ಗೆಳೆಯಾ

ಹೃದಯಗಳು ಬೆಸೆಯಲು ಅನುರಾಗ ಸೇತುವೆ ಕಟ್ಟಿದೆವು
ಬಾನು ಬುವಿಗಳ ಮಿಲನಕೆ ಸ್ವಾಗತಿಸಿದೆ ನಿನ್ನನು ಗೆಳೆಯಾ

ಉಷೆಯ ಹಿತವನು ಬಯಸುತಲಿ ಸಲಹುತಿರು ಸದಾ
ಕನಸು ನನಸಾಗಲಿ ಎಂದು ಹಾರೈಸಿದೆ ನಿನ್ನನು ಗೆಳೆಯಾ


3 thoughts on “ಗಝಲ್

Leave a Reply

Back To Top