ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಮಂಕುತಿಮ್ಮನ ಗುರುವಲ್ಲ ನಾನು ನಿನ್ನ ವರ್ಣಿಸೆ ಶೋಡಷಿ
ಶಿಲ್ಪ ಕಲೆಗಾರನಲ್ಲ ಅಂಗರಚನೆಯ ಚರ್ಚಿಸೆ ಶೋಡಷಿ
ಸಾಮಾನ್ಯ ಗೃಹಸ್ಥನಲ್ಲ ಪರಿವ್ರಾಜಕ ನಾ ನಿನ್ನ ಅಂದಕೆ ಮರುಳಾಗೆ
ಆಗಿರಬಹುದು ಇನ್ನಾರಿಗಾದರೂ ನೀನು ಊರ್ವಸೆ ಶೋಡಷಿ
ಚಿರು ಯೌವ್ವನಿಗನೂ ಅಲ್ಲ
ಸಹಜವಾಗಿ ತರುಣಿ ನಿನ್ನ ಬಯಸಲು
ತೊರೆಯನು ನಾ ಸಂಯಮವ ನೀನೆಷ್ಟೇ ಪ್ರಜ್ವಲಿಸೆ ಶೋಡಷಿ
ನಿನ್ನ ತಪ್ಪಿಸಲು ವಿನೋದಕೂ ಲಕ್ಷ್ಮಣನ ಕಡೆಗೆ ನಿರ್ದೇಶಿಸೆ ರಾಮನಂತೆ
ಭಸ್ಮಾಸುರನಲ್ಲ ನಾನು ನಿನ್ನ ನಾಟ್ಯಕೆ ನರ್ತಿಸೆ ಶೋಡಷಿ
ಮೇನಕೆಯಂತೆ ಸಂಚು ಮಾಡದಿರು ನಿನ್ನಯತ್ನ ಫಲಿಸೆ
ಶರಣು ಮಂತ್ರವ ಬಿಟ್ಟು ಇನ್ನಾವುದಕೆ ತಲೆ ಬಾಗಿಸೆ ಎಲೈ ಶೋಡಷಿ
ಕೃಷ್ಣಾ! ಜ್ಞಾನಿಗಳ ಮೀರಿದ ಮಹಾಜ್ಞಾನಿ ಆಗಬಲ್ಲೆ ನಿನ್ನ ಅರಿವನು ಮರ್ಧಿಸೆ
ಎಲ್ಲಾ ಪ್ರಕೃತಿ ಲೀಲೆಯೇ ಅನುಭಾವದಲಿ ಶೋಧಿಸೆ ಶೋಡಷಿ