ಕಾವ್ಯಸಂಗಾತಿ
ಗೆದ್ದು ಬಾ ಮಗಳೇ
ಡಾ ದಾನಮ್ಮ ಝಳಕಿ
ಲಿಂಗಬೇಧದ ಜಗದಲಿ
ಅಸ್ವಾಸ್ಥ್ಯ ಉರಿಯಲಿ
ಕಿರುಕುಳದ ಕಿಸೆಯಲಿ
ದಿಟ್ಟ ಹೆಜ್ಜೆಯನಿಡುತಾ
ಗೆದ್ದು ಬಾ ಮಗಳೇ
ಭ್ರೂಣದಲಿ ಹಿಸುಕುವ
ಶಿಶು ಹತ್ಯೆ ಮಾಡುವ
ನರ ಕೀಚಕರ ಮಧ್ಯ
ಹೆದರಿಸುವ ಬಲೆಯಿಂದ
ಗೆದ್ದು ಬಾ ಮಗಳೇ
ವರದಕ್ಷಿಣೆಯ ನೆಪದಲಿ
ನರಹತ್ಯೆ ಭಕ್ಷಕರಲಿ
ದಿನನಿತ್ಯದ ಬೆಂಕಿಯಲಿ
ತಕ್ಕ ಪಾಠ ಕಲಿಸುತಾ
ಗೆದ್ದು ಬಾ ಮಗಳೇ
ಮೇಲು ಕೀಳು ಮಾಡುತಾ
ಹೆಣ್ಣೆಂದು ದೂರುತಾ
ದಬ್ಬುವರು ಕೂಪಕೆ
ಕಿರುಕುಳದ ಬಲೆಯಿಂದ
ಗೆದ್ದು ಬಾ ಮಗಳೇ
ಧರಿಸಿಹರು ಕಾವಿಯನು
ಧರಿಸಿಹರು ಖಾದಿಯನು
ಬೋಧಿಸುವರು ನೀತಿಯನು
ಕಾಮದಾಹಿಗಳ ಮಧ್ಯ
ಗೆದ್ದು ಬಾ ಮಗಳೇ
ನಾರಿ ಮುನಿದರೆ ಮಾರಿ
ನಾರಿ ಶಕ್ತಿಯ ದಾರಿ
ಸರಿ ದಾರಿ ಸಾರಿ
ಬದ್ಧತೆಯ ತೋರಿ
ಗೆದ್ದು ಬಾ ಮಗಳೇ
ಚೆನ್ನಮ್ಮ, ಓಬವ್ವ
ರಾಣಿ ಲಕ್ಷ್ಮೀಬಾಯಿ
ವನಿತೆಯರ ಮರು ಹುಟ್ಟು
ನಿನ್ನ ನಡೆಯಲಿ ತೋರಿ
ಗೆದ್ದು ಬಾ ಮಗಳೇ
ದೇಶದ ರಕ್ಷಕಳಾಗಿ
ನೈತಿಕತೆಯ ಹರಿಕಾರಳಾಗಿ
ಪುಂಡರಿಗೆ ಪಾಠ ಕಲಿಸಲು
ಪ್ರಜ್ವಲಿಸುವ ದೀಪವಾಗಿ
ಗೆದ್ದು ಬಾ ಮಗಳೇ
ಮನೆಯ ದೀಪವಾಗಿ
ದೇಶದ ಕಿರಣವಾಗಿ
ಕಾಯಕದ ಯೋಗಿಯಾಗಿ
ಶರಣ ತತ್ವದ ಬೀಜವಾಗಿ
ಗೆದ್ದು ಬಾ ಮಗಳೇ
ಡಾ ದಾನಮ್ಮ ಝಳಕಿ
Mind blowing