ಬದುಕಿನ ಬಾಳ್ವೆ ನಯನ. ಜಿ. ಎಸ್.

ಕಾವ್ಯ ಸಂಗಾತಿ

ಬದುಕಿನ ಬಾಳ್ವೆ

ನಯನ. ಜಿ. ಎಸ್.

ಎಲುಬಿನ ಹಂದರದಲಿ ಹೆಣೆದ ನಾಜೂಕು ಬದುಕು
ಉಸಿರು ತಾಕಲಾಡುವ ಪರಿಗೆ ಶೂನ್ಯವಷ್ಟೇ ಕ್ಷಣವು
ಇಡುವ ಹೆಜ್ಜೆಗಳಲಿ ಸೂಕ್ಷ್ಮದಿ ನೆಮ್ಮದಿಯ ಹುಡುಕು
ಜತನ, ಮೇರೆ ಮೀರಿದ ಬಯಕೆಗೆ ಸಿದ್ಧವಿದೆ ನೋವು.

ಇಂದು ನಾಳೆಗಳ ಅಂತರಾರ್ಥವನು ಅರಿತವರಿಲ್ಲವಿಲ್ಲಿ
ದಿಟವರಿತರೂ ತೇಲುವುದು ತರವೇ ಮೋಹದಿ ಕೊಳೆತು
ಸಮರಸ ತೊರೆದರೂ ಸಹ್ಯವಾಗಬೇಕಿದೆ ಅನಂತತೆಯಲಿ
ನಿತ್ಯ ಸತ್ಯದಲೂ ಬೊಬ್ಬಿಡುವೆ ಏಕೆ ಮಾನವತೆ ಮರೆತು ?

ಕ್ಷಣ ಬಾಗಿ ತುಸು ನಿಂದು ಅವಲೋಕಿಸು ಅಲ್ಲಿಹುದು ತೃಪ್ತಿ
ಹೊಳೆಯುತಿಹ ಕಣಕಣಕೆ ಭ್ರಾಂತವಾಗಲು ರಾಡಿ ಮನವು
ಕೊನರುತಿಹ ಭವ್ಯಭಾವವ ಅರಿಯಲು ಸಾರ್ಥಕ್ಯದ ಪ್ರಾಪ್ತಿ
ನಿಷ್ಠೆಯಿರಲು ಬೆವರ ಹನಿಗಳಲಿ ದೂರವಿಲ್ಲ ನಿಶ್ಚಿತ ಗೆಲುವು.

ಅರಳಿ ಮಾಗಿ ಮಾಸುತಿಹ ಉಸಿರಿಗೇಕೆ ಅವರಿವರ ಚಿಂತೆ
ಹೈರಾಣವಾಗಲು ಪರರ ದೃಷ್ಟಿಗೆ ಜಯದ ನಗು ಮರೀಚಿಕೆ
ಈ ಪರಿ ದೂಷಿಸುವ ಕಸುಬಿಗೆ ನಿಲುಕದೆಂದೂ ಸಾರ್ಥಕ್ಯತೆ
ತಾ ನಗುತ ಇತರರಲೂ ನಗುವ ನಲಿಸಿದಾಗಲೇ ತೃಪ್ತಿ ಆತ್ಮಕೆ


One thought on “ಬದುಕಿನ ಬಾಳ್ವೆ ನಯನ. ಜಿ. ಎಸ್.

Leave a Reply

Back To Top