ಖರೆ ಹೇಳು. ನಿಂಗಮ್ಮ ಭಾವಿಕಟ್ಟಿ

ಕಾವ್ಯ ಸಂಗಾತಿ

ಖರೆ ಹೇಳು

ನಿಂಗಮ್ಮ ಭಾವಿಕಟ್ಟಿ

ಮನೆಗೆ ಬಂದಾಗ ಕಾಣ್ಲಿಲ್ಲಂದ್ರ
ಓಣಿ ತುಂಬಾ ಈಕಿ ಬಂದಾಳೇನ್ರೀ ಬಂದಾಳೇನ್ರಿ
ಅಂತ ಕೇಳಿದ್ರಾ ಅವ್ರು ನಗುದಿಲ್ಲೇನು?

ಮನ್ಯಾಗ ಹಂಗಾತು ಹಿಂಗಾತು ಅಂತೀರಿ
ಹೊರಗ ಉಣ್ಣುವಾಗ ‘ನೀನೆ ಬೆಸ್ಟ್’ ಅನ್ನೋ ಹಂಗ ನೋಡೀದ್ರ ನಂಗ ಗೊತ್ತಾಗುವುದಿಲ್ಲೇನು?
ಹಂಗ ಆಗ್ಬೇಕು ನಿಮಗ

ಮನಸ್ಸಿನ್ಯಾಗ ಅಷ್ಟು ಪ್ರೀತಿ ಕಾಳ್ಜಿ ಇಟ್ಕೊಂಡು
ಯಾವಾಗ್ಲೂ ಯಾಕ ಉಮ್ಮಂತ ಇರೋದು

ಐದು ಸಾವ್ರ ಹಾಕಂದ್ರ ಹತ್ತಾಕ್ತಿಯಲ್ಲ
ಮಕ್ಕಳು ಮಕ ಮಕ ನೋಡ್ಕೊಂಡು ನಗ್ತಾರ

ಹೊರಗೆ ಹೋಗಂಗ ಅನ್ನಸವಲ್ದು
ಏನರ ಮಾಟ ಮಾಡಿಯೇನು ಅಂತ
ಕಣ್ಣು ಮಿಟುಕುಸ್ತಿಯಲ್ಲ
ನೀನ ಮಾಟಗಾರ ಅನ್ನೋದು ನಂಗ ಗೊತ್ತಿಲ್ಲೇನು?

ಅರ್ಧ ಶತಮಾನಾದರೂ ಹೊರಗ್ ಹೋದ್ರಾ ಹುಷಾರು
ಅಂತೀಯಲ್ಲಾ ಕಾಳಜಿನಾ ಭಯನಾ ಮೊದ್ಲು ಹೇಳು

ಎಲ್ಲಿ ಹೋದ್ರೂ ಅವಸ್ರ ನಡಿ ನಡಿ
ನೀನು ಆರ ತಿಂಗಳಾಗ ಹುಟ್ಟಿ ಏನು ಖರೆ ಹೇಳು

ಆಸೆ ಇರದ ಬುದ್ಧ
ಕೆಲ್ಸನ ದೇವ್ರು ಅನ್ನೋ ಬಸವ
ಸಮಾನತೆ ಶಿಲ್ಪಿ ಅಂಬೇಡ್ಕರ ಎಲ್ಲಾ ನೀನೆ

ಆಳಾಗಿ ದುಡಿದು ಅರಸಾಗಿ ಉಣ್ಣೋ ಜಾಣರಸ

ಈ ಜನ್ಮಂತು ಸಾರ್ಥಕಾತು
ಮುಂದನು ನೀನ ಸಿಕ್ತಿಯಲ್ಲ ಹಿರಿಯಾ
ಅದಕ್ಕ ಏನರ ವ್ರತ ಇದ್ರ ಹೇಳು ಈಗ
ಅಯ್ಯೋ ಸೊಸೆ ಕೇಳಿಸ್ಕೊಂಡು ನಗ್ತಿದ್ದಾಳೆ ನಡಿ ಒಳಗ.


ನಿಂಗಮ್ಮ ಭಾವಿಕಟ್ಟಿ

Leave a Reply

Back To Top