ಲಲಿತ ಪ್ರಬಂಧ
ಭೂತ್ ಕೀ ಬಾತ್!
ರೂಪ ಮಂಜುನಾಥ
ರಾತ್ರಿ ಸುಮಾರು 12 ಗಂಟೆ. ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿದ್ದರು. ನನಗೆ ಯಾಕೋ ನಿದ್ದೆ ಬರುತ್ತಿರಲಿಲ್ಲ. ಕಿಟಕಿಯ ಬಳಿ ಯಾರೋ ಚಲಿಸಿದಂತೆ ಅನ್ನಿಸುತ್ತಿತ್ತು. ಎದ್ದು ಹೋಗಿ ನೋಡಲು ಭಯ…………ಯಾಕೇಂತಿರೋ,ಯಾಕೆ, ಅಂದ್ರೆ, ನೆನ್ನೆ ನನಗಾದ ಅನುಭವ.ಅದಕ್ಕೇ!
ನೋಡೀ ನನಗೀಗ ಐವತ್ತೆರಡು ತುಂಬ್ತು.ಚಿಕ್ ವಯ್ಸಲ್ಲಿ ಎಂಟೊಂಭತ್ತು ಗಂಟೆ ಕುಂಭಕರ್ಣಿಯಂತೆ ಮಲಗುತ್ತಿದ್ದವಳಿಗೆ ಬರ್ತಾ ಬರ್ತಾ ನಿದ್ದೆ ಮಾಡೋ ಪ್ರಯತ್ನದಲ್ಲೇ ಅರ್ಧರಾತ್ರಿ ಕಳೆದುಹೋಗುತ್ತೆ.ಇಲ್ದೇ ಇರೊ ಪೀಡೆ ಪಿಶಾಚಿಗಳೆಲ್ಲ ತಲೆ ಒಳಗೆ ಸೇರ್ಕೊಂಡು ಸರಿರಾತ್ರಿ ತನ್ಕವೂ ನೃತ್ಯ ಮಾಡುತ್ವೆ.ಏನ್ಮಾಡೋದ್ ಹೇಳಿ, ಸಾಮಾನ್ಯ ಎಲ್ರಂತೆ ನಾನೂ ನನ್ ಮರ್ಕಟ ಮನ್ಸಿನ ಗುಲಾಮಳೇ! ನೆನ್ನೆ ರಾತ್ರಿನೂ ಹಿಂಗೇ ಆದದ್ದು.ನೆನ್ನೆ ನನಗಾದ ಅನುಭವದ ಕತೆ ಇದು.
ಇವತ್ತು ನಮ್ಮ ಮಾವನವರ ಶ್ರಾದ್ದ.ಹಾಗಾಗಿ ನೆನ್ನೆ ಸ್ವಲ್ಪ ಕೆಲಸ ಹೆಚ್ಚೇ ಇತ್ತು. ಆಶಾಢ ಮಾಸ, ಮೊನ್ನೆಯಿಂದಲೂ ಜಿಟಿಜಿಟಿಮಳೆ, ಚಳಿ, ಗಾಳಿ.ಕಾರ್ಯಕ್ಕೆ ಬೇಕಾದ್ದೆಲ್ಲ ಹೊಂದಿಸಿ, ಮನೆ ಸ್ವಚ್ಛ ಮಾಡಿ , ಬೆಳಗ್ಗೆ ಏಳಕ್ಕೇ ಪುರೋಹಿತರು ಬರುವುದರಿಂದ ಎಲ್ಲವೂ ರಾತ್ರಿಯೇ ಅಣಿಗೊಳಿಸಿ ಮಲಗೋ ಹೊತ್ತಿಗೇ ಹನ್ನೊಂದೂವರೆ ಮೇಲಾಗಿತ್ತು. ನಿದ್ದೆ ಬರುವವರೆಗೂ ಸಮಯ ಕಳೆಯೋಕೆ ಈ ಹಾಳು ಮಾಯಾಂಗನಿ,ಪೋನನ್ನ ನೋಡ್ತ ಇದ್ದೆ.ಈ ಫೋನನ್ನ ಬೈದರೂ , ಇದು ನನ್ನ ಪರಮಾಪ್ತ ಗೆಳತಿ ಕಣ್ರೀ!ಒಂಥರಾ ಶುಗರ್ ಕೋಟೆಡ್ ಪಿಲ್ ಹಾಗೆ. ತೊಂದರೆ ಗೊತ್ತಿದ್ರೂ, ಅದರ ಸಹವಾಸದಲ್ಲಿ ಏನೋ ಸುಖ. ಸೈಡ್ ಎಫೆಕ್ಟುಗಳು ಗೊತ್ತಿದ್ರೂ ಬಿಡಲಾಗದ ವ್ಯಾಮೋಹ!ಕಿಟಕಿ ಮುಚ್ಚಿದ್ರೂ ಸುಯ್ ಸುಯ್ ಎನ್ನೋ ಗಾಳಿ ಬೀಸುವ ಸದ್ದು.ಹೊರಗೆ ಹಾಲಿನಲ್ಲಿ ಕಿಟಕಿಯ ಬಿರಟೆಗಳು ಸ್ವಲ್ಪ ಸಡಿಲವಾಗಿರುವುದರಿಂದ, ಗಾಳಿಗೆ ಆಗಾಗ ದಢಾರ್ ದಢಾರ್ ಅಂತ ಹೊಡೆದುಕೊಳ್ಳುತ್ತಿತ್ತು.ಸರಿ ಮಾಡ್ಸೀ ಸರಿ ಮಾಡ್ಸೀಂತ ಇಷ್ಟೊತ್ಗೆ ಸಾವ್ರ ಸಲ ಹೇಳುದ್ರೂ, ನನಗಲ್ವೇನೋ ಅಂತ ನಿಸೂರಾಗಿ ತಮ್ ಪಾಡಿಗೆ ತಾವು ಕ್ಯಾಂಡಿಕ್ರಷ್ಷೋ,ಮತ್ತೊಂದೋ ಆಡ್ತಾ ನನ್ ಬಾತ್ಗೆ,ಬಾಯಿ ತೆಗೆಯದೆ ಮೂಕರಾಗುವ ,ಅತ್ಯಂತ ತಾಳ್ಮೆಯ ಮೂರ್ತಿವೆತ್ತಂತಿರುವ ನನ್ನ ಪತಿದೇವರಿಗೆ ಇತ್ತೀಚೆಗೆ ಆ ರಿಪೇರಿ ಸುದ್ದಿ ಹೇಳೋದೇ ಬಿಟ್ಬಿಟಿದ್ದೀನಿ.ಸರಿ, ಹೋಗಿ ಕಿಟಕಿಗಳ ಬಿರಟೆಗಳ್ನ್ ಬಿಗಿ ಮಾಡಿ ಬರೋಣ, ಇಲ್ದಿದ್ರೆ ರಾತ್ರಿಯೆಲ್ಲಾ ನಿದ್ರೆಗೆ ತೊಂದರೆ ಕೊಟ್ಟಾವು, ಬರೋ ನಾಕೈದ್ ಗಂಟೆ ನಿದ್ದೇನೂ ಯಡವಟ್ಟಾದೀತೂ ಅಂತ ಬೈದುಕೊಳ್ತಾ ಕಿಟಕಿ ಬಳಿ ಬಂದೆ. ಮಹಡಿಮೇಲೆ ನಾನಿದ್ದೆ. ನಮ್ಮ ಹಾಲಿನ ಕಿಟಕಿಯಿಂದ ಕೆಳಗಡೆ ಕಾಂಪೌಂಡು, ಗೇಟು ಎಲ್ಲವೂ ಕಾಣುತ್ತವೆ.ಅಲ್ಲಿ ಕಂಡ ದೃಶ್ಯ ನೋಡಿ ಥರಥರ ನಡುಗಿಹೋದೆ.ಕಾಂಪೌಂಡಿಗೆ ಆತುಕೊಂಡಂತೆ ಬಿಳಿ ಪಂಚೆಯೊಂದ ಹೊಚ್ಚಿಕೊಂಡ ಆಕೃತಿಯೊಂದು ಕೂತಂತೆ ಕಂಡಿತು.ಛಳಿಯೆಂದು ಸ್ವೆಟರ್, ಬ್ಲಾಂಕೆಟ್ ಹೊಚ್ಚಿ ಮಲಗಿದ್ದವಳಿಗೆ, ಶಿವಶಿವಾಂತ ಚಳಿ ಓಡಿ ಹೊಂಟೋಯ್‌ತು!ಬೆವರು ಸೋರಿ ತೊಪ್ಪೆಯಾಗಿಹೋದೆ.ಹೌದ್ರೀ, ಜೀವನ್ದಲ್ಲಿ ಇಂಥ ಯಾವ ಅನುಭವವೂ ಆಗಿರ್ಲಿಲ್ಲ.ಬೇಕಾದಷ್ಟು ದೆವ್ವ, ಭೂತ, ಪ್ರೇತ, ಪಿಶಾಚಿ, ಪೀಡೆಗಳ ಕತೆ ಕೇಳಿದ್ದೆ, ಓದಿದ್ದೆ,ಹಾರರ್ ಮೂವಿಗಳು, ಟಿವಿ ಶೋಗಳನ್ನೂ ನೋಡಿ ನೆಮ್ಮದಿಯಾಗಿ ಮಲಗಿದ್ದೆ.ಎಷ್ಟೋ ಸಾರಿ ಕೆಲವರ ಅನುಭವಗಳನ್ನು ಕೇಳಿ,” ಯೇ….ಈ ದೆವ್ವ ಭೂತ ಎಲ್ಲ ಏನಿಲ್ಲ ಕಣ್ರೀ, ಎಲ್ಲ ನಮ್ಮ ಅಸ್ಸಂಷನ್ ಅಷ್ಟೇ”, ಎಂದು ಧೈರ್ಯ ಹೇಳುತ್ತಿದ್ದವಳು . ಈ……ಗ ದೇವ್ರೆ! ಹೌದು, ಈಗಿನ ದೃಶ್ಯವೂ ನನ್ ಅಸಂಷನ್ನೇ ಇರ್ಬೋದೂಂತ ಹೆದರಿಕೆಯಲ್ಲಿ ಬೆವರುತ್ತಲೇ ಎರಡು ಮೂರು ಸಾರಿ ಎದ್ದುಹೋಗಿ ಕಣ್ಣುಜ್ಜಿ, ತೋಳನ್ನ ಗಿಂಟಿಕೊಂಡು
ನೋಡಿದೆ. ಡೌಟೇ ಇಲ್ಲ. ಪ್ರತಿಸಾರಿಯೂ ಆ ಆಕೃತಿ ಸ್ಪಷ್ಟವಾಗಿಯೇ ಕಾಣುತ್ತಿದೆ.ಅಲ್ಲೇ ಕೂತಿದೆ. ಎದ್ದೂ ಹೋಗಿಲ್ಲ. ಭ್ರಮೆ ಎಂದು ಸುಮ್ಮನಾಗಲು ಪ್ರತಿಸಾರಿಯೂ ಕಾಣುತ್ತಿದ್ದೇನಲ್ಲಾ!
ಯಾಕಪ್ಪಾ ದೇವ್ರೇ, ಇಷ್ಟು ವರ್ಷ ಇಲ್ದಿರೋ ಪರೀಕ್ಷೆ ಈಗ್ ಮಾಡ್ತಾ ಇದೀಯಾ? ನನ್ನಿಂದ ಏನ್ ಅಪ್ರಾದ ಆಗಿದ್ಯಪ್ಪಾ?ನನ್ಗೆ ತಿಳ್ದಂಗೆ ನಿನ್ಗೆ ಯಾವ್ ಲೋಪ ಬರ್ದಂಗೆ ಸೇವೆ ಮಾಡ್ಕೊಂತ ಬಂದಿದೀನಿ.ಅಂತ ಒಳಗೇ ಗಳಗಳ ಗೋಳಾಡಿದೆ.
ನಾಳೆ ಬೆಳಗ್ಗೆಯೇ ತಿಥಿ. ಈಗ ಕಂಡ ದೃಶ್ಯಕ್ಕೆ ನಾಳಿನ ತಿಥಿಗೆ ಏನಾದ್ರೂನೂ ಸಂಬಂಧವಿರಬಹುದೇ, ನಮ್ ಮಾವ ಏನಾದ್ರೂ ಹೆದ್ರಿಸೋಕೆ ಬಂದ್ರಾ,ಅನ್ನಿಸತೊಡಗಿತು. ಯಾಕೇಂದ್ರೆ, ಇದ್ದಕ್ಕಿದ್ದಂತೆ ಜ್ಞಾಪಕ ಬಂತು. ನಮ್ ಮಾವನವರು ಬಿಳಿಯ ಪಂಚೆ ಉಡುತ್ತಿದ್ದರಂತೆ. ನಾನೂ ಕಂಡಿಲ್ಲ. ನಾನು ಈ ಮನೇಗೆ ಎಂಟ್ರಿ ಕೊಡಕ್ ಮುಂಚೆಯೇ ಅವ್ರು ಈ ಲೋಕ್ದಿಂದ ಎಕ್ಸಿಟ್ ಆಗೋಗಿದ್ರು, ಪಾಪ!ಹಂಗಿದ್ದಾಗ, ಅವ್ರಿಗೆ ನಾನೆಂಗೆ ತೊಂದ್ರೆ ಕೊಡ್‌ಲಿ?
ನಮ್ ಮಾವ ಏನಾದ್ರೂ ಪ್ರೇತದ ರೂಪದಲ್ಲಿ, ಈ ರೂಪುಂಗೆ ದರ್ಶನ ಕೊಡ್ತಿದ್ದಾರಾ ಅಂತ
ಶ್ಟ್ರಾಂಗಾಗಿ ಡೌಟು ಶುರುವಾಗತೊಡಗಿತು. ನಾನು ಅವರ ಪ್ರತೀ ವರ್ಷದ ಕಾರ್ಯವಾ ತಪ್ಪದೆ ಮಾಡಿ, ಎಡೆಯಿಟ್ಟು , ನನ್ನಿಂದ ಏನು ಕರ್ತವ್ಯ ಇದೆಯೋ ಎಲ್ಲಾ ಮಾಡಿದೀನ್ರೀ ದೇವ್ರಾಣೆ. ಆದ್ರೂ ಇವರ್ಯಾಕೆ ಬಂದಿರ್ಬೋದು? ಏನಾದ್ರೂ”ರೂಪ,ಪ್ರತಿವರ್ಷ ನನ್ ಶ್ರಾದ್ದ ಮಾಡಿ, ನನ್ ಆತ್ಮಕ್ಕೆ ಶಾಂತಿ ಕೊಡ್ತಿದ್ದೀಯಾ”, ಅಂತ ಹೇಳಿ ಆಶಿರ್ವಾದ ಮಾಡಲೋ,ಇಲ್ಲ ಏನಾದ್ರೂ,”ಏನ್ ಮಗೂ ನೀನು ಎಲ್ಲಾ ಶ್ರಾದ್ದಕ್ಕೂ ಸೂಕೇನ್ ಉಂಡೆ,ವಡೆ ಪಾಯ್ಸವೇ ಮಾಡ್ತೀಯಾ.ನನಗಾದ್ರೂ ಚೇಂಜ್ ಬೇಡ್ವೇ?ಅದನ್ನೇ ತಿಂದು ಬಾಯಿ ಜಡ್ಡಿಡಿಯಲ್ವಾ?ಏ…ಹೋಗಮ್ಮಾ ನೀನು.ನೀವ್ ಹೆಂಗೆ ವೆರೈಟಿ ವೆರೈಟಿ ಮಾಡ್ಕೊಂಡ್ ತಿಂತೀರೋ ಹಾಗೇ ನಂಗು ಪ್ರತಿ ತಿಥೀಲೂ ನನ್ನ ಫೇವರೇಟು ತಿಂಡಿ ತೀರ್ಥಗಳ್ನ,ವೆರೈಟಿ ವೈರಟಿ ಎಡೆ ಮಾಡಿಡಮ್ಮಾ. ಅಲ್ಲಾ, ನನ್ಗೆ ಕಾಫಿ ಅಂದ್ರೆ ಎಷ್ಟಿಟ್ಟಾಂತ ನಿನ್ಗೂ ಗೊತ್ತಿರುತ್ತೆ. ನಿಮ್ಮತ್ತೆ ಹೇಳಿರ್ತಾಳೆ ನಂಗೊತ್ತು.ಅವ್ಳ ಲೊಡಲೊಡ ಅಂತ ನನ್ ವಿಷ್ಯ ಪ್ರತಿಯೊಂದೂ ನಿಂಗೆ ಒದ್ರೇ ಇರ್ತಾಳೆ. ಹಂಗಿದ್ದಾಗ, ನಾನು ಇಷ್ಟ್ ವರ್ಷದಿಂದಲೂ ನೋಡ್ತಾ ಇದೀನಿ. ಮೊದ್ಲೇ ಆಶಾಡ್ ಮಾಸ,ನನ್ ಸೊಸೆ ಈ ವರ್ಷ ಕಾಫಿ ಇಡ್ಬೋಡು, ಈ ತಿಥೀಲಿ ಇಡ್ಬೋದೂಂತ ಚಳೀಲಿ ಗಡಗಡಾಂತ ಕಾಯ್ತಲೇ ಕೂತಿದೀನಿ.ಛೇ, ಹೋಗಮ್ಮ ನೀನು. ನಾಳೆನಾದ್ರೂ ಫ್ರೆಶ್ಶಾಗಿ ಸ್ಟ್ರಾಂಗ್ ಡಿಕಾಕ್ಷನ್ ಹಾಕಿ, ಸರ್ಯಾಗಿ ಸಕ್ರೆ ಹಾಕಮ್ಮಾ,ಅಯ್ಯೋ,ಸಕ್ರೆ ಕಾಯ್ಲೆ ಇದ್ದಿದ್ದು, ದೇಹಕ್ಕೆ,ಆತ್ಮಕ್ಕಲ್ಲ.ಸಕ್ರೆ ಇಲ್ದೇ ವರ್ಷಾನ್ ಗಟ್‌ಲೆ ಸಪ್ಪೆ ಕಾಫಿ ಕುಡ್ದೂ ಕುಡ್ದೂ ನಾಲ್ಗೆ ಜಡ್ ಕಟ್ಟೋಗಿದೆ.
ಗಟ್ಟಿಯಾದ್ ಕೆನೆಹಾಲಾಕ್ ಒಂದ್ ದೊಡ್ ಲೋಟ ಕಾಫಿ ಬಿಸಿಬಿಸಿಯಾಗಿ ಮಾಡಿಟ್ಬಿಡಮ್ಮಾ.ಕುಡ್ದು ಶಾಂತವಾಗ್ತೀನಿ.ಹೋದ್ರೋಗ್ಲಿ,ಈ ಸರಿಗೆ ಅದೇನ್ ವಡೆ, ಪಾಯ್ಸಕ್ ಜೋಡಿಸ್ಕೊಂಡಿದ್ದೀಯೋ ಅದ್ನೇ ಮಾಡಿಡು. ಆದ್ರೆ ಸ್ವಲ್ಪ ಉಪ್ಪೂ ಖಾರ ಸರ್ಯಾಗ್ ಹಾಕಿ ಮಾಡಮ್ಮಾ. ವಡೇಗೆ ಚೆನ್ನಾಗ್ ಈರುಳ್ಳಿ,ಸಬ್ಸಿಗೆಸೊಪ್ಪೂ ಹಾಕ್ ಮಾಡುದ್ರೆ ಸೂ….ಪರಾಗಿರುತ್ತೆ.ಆದ್ರೆ, ಅದ್ನೆಲ್ಲಾ ನೀನ್ ಹಾಕಲ್ಲಾ?ಹಾಕ್ಬಾರ್ದೂಂತ ಯಾರ್ ಹೇಳ್ದೌರೋ? ಏನ್ ಕಥೆಯೋ, ಬರೀ ಬೇಳೆ ತಿಂದು ಹೊಟ್ಟೇಲಿ ಡರ್ ಡರ್ ಅಂತ ಗ್ಯಾಸ್ ಕೂಗ್ಕೊಳ್ಳುತ್ತೆ. ಹೋದ್ರೋಗ್ಲಿ, ಇನ್ ಮುಂದೆ ಬರೋ ಶ್ರಾದ್ದಗಳಲ್ಲಾದ್ದೂ ನನಗಿಷ್ಟವಾದ ಮಸಾಲೆ ದೋಸೆ,ಈರುಳ್ಳಿ ರೊಟ್ಟಿ,ಮೊಳಕೆ ಹುರುಳಿಕಾಳು ಸಾರು,ಹೆಚ್ಚು ತೆಂಗಿನ ತುರಿ ಹಾಕಿದ ಅವರೆಕಾಳು ಉಪ್ಪಿಟ್ಟು,ಬಿಳಿ ಹೋಳಿಗೆ, ಮುದ್ದೆ, ಬಸ್ಸಾರು,ಬೆಳ್ಳುಳ್ಳಿ ಖಾರದ್ ಚರ್ಮುರಿ,ಗೊಜ್ಜವಲಕ್ಕಿ,ಎಳ್ಳುಂಡೆ,ಬೆಣ್ಣೆ ಮುಚ್ಚೋರೆ,ಅವಲಕ್ಕಿ ಚೂಡ,ದಂರೋಟು,ಮೈಸೂರು ಪಾಕು,ಬೆಣ್ಣೆ ಉಂಡೆ,ಬೇಸನ್ ಉಂಡೆ……ಹೀಗೆ ಯಾವ್ದಾದ್ರೂ ನನ್ ಫೇವರೇಟ್ಟುಗಳನ್ನ ಮಾಡಿ ಎಡೆ ಇಡಮ್ಮಾ.ನಾಳೆ ಮಾತ್ರ ಸಕ್ಕರೆ ಹಾಕಿದ್ ಕಾಫಿ ಇಡೋದ್ ಮರೀಬೇಡಾ”, ಅಂತ ಹೇಳೋಕೇನಾದ್ರೂ ಬಂದಿದಾರಾ? ಇಲ್ಲಾ,”ಅದೇನಮ್ಮಾ ಈಗ್ನವ್ರು ನೀವ್ಗುಳೆಲ್ಲಾ ತಿನ್ನೋ ಪಾನೀಪೂರಿ, ಮಸಾಲಪೂರಿ, ಭೇಲ್ ಪೂರಿ, ಇತ್ತೀಚೆಗ್ ನಮ್ಮೂರಿಗೂ ಬಂದಿರ ಪಿಜ್ಜಾ,ಬರ್ಗರ್,ನೂಡಲ್ಸೂಂತ ಆ ನೂಕೋ ಗಾಡಿಗುಳ್ ಮುಂದೆ ಗುಂಪ್ ಕಟ್ಕೊಂಡ್ ತಿಂತಿರ್ತೀರಲ್ಲಾ, ಅದೆಲ್ಲಾ ನಮ್ಗೆ ಅಟ್ಲೀಸ್ಟ್ ಒಂದು ಸರಿಯಾದ್ರೂ ರುಚಿ ತೋರುಸ್ಬಾರ್ದಾ?ನೋಡು ಇನ್ಮೇಲೆ ಪ್ರತಿವರ್ಷ ಎಡೆ ಇಡ್ವಾಗ, ಇಲೆಲ್ಲ ಲಿಸ್ಟುಗೆ ಸೇರುಸ್ಕೊಂಡು ಒಂದೆರೆಡೆರ್ಡು ಐಟಮ್ ಆದ್ರೂ ಮಾಡಿಡಮ್ಮಾ! ನೀವ್ಗುಳೆಲ್ಲಾ ತಿನ್ನೋದ್ ನೋಡುದ್ರೆ ನಮ್ಗೂ ಬಾಯಲ್ಲಿ ನೀರೂರ್ತದೆ!”ಅಂತ ಹೇಳೋಕೋ?ಯಾಕೇಂದ್ರೆ ನಮ್ ಮಾವನವರಿಗೂ ಹೊಸಹೊಸ ಅಡಿಗೆ ಟ್ರೈ ಮಾಡೋ ಚಪಲ ಜಾಸ್ತಿ ಇತ್ತೂಂತ ಕೇಳಿದ್ದೆ. ನಮ್ ಮಾವ್ನೋರ್ ಒಬ್ಬೇ ಅಲ್ರೀ, ಒಟ್ನಲ್ಲಿ ನಮ್ ರಾಯಲ್ ಫ್ಯಾಮಿಯವರಿಗೆಲ್ಲಾ ಫುಡ್ ವಿಚಾರದಲ್ಲಿ ಚಪಲ ಜಾಸ್ತಿ. ಅಲ್ಲಿ ಇಲ್ಲೀಂತ ಎಲ್ಲೋ ಅಪ್ರೂಪುಕ್ಕೊಂಬ್ರೂ ಈ ಫ್ಯಾಮಿಲಿ ಚಪಲಕ್ಕೆ ಹೊರ್ತಾಗಿ ಹುಟ್ಕೊಂಡಿರ್ಬೋದು. ಅಷ್ಟೇ! ಇಲ್ಲಾ,
”ಅಲ್ಲಾ ಕಣಮ್ಮ ರೂಪ,ನಾವೇನೋ ನಮ್ ಮಗನ್ಗೆ ಬುದ್ದಿ ಹೇಳಿ ಬದ್ಲಾಯ್ಸೋಕ್ ಆಗ್ಲಿಲ್ಲಾ. ನೀನಾದ್ರೂ ಅವ್ನ ರಿಪೇರಿ ಮಾಡ್ತೀಯಾಂತ ಈ…ಷ್ಟ್ ವರ್ಷದಿಂದ್ ಕಾಯ್ತಾನೇ ಇದೀನಿ. ನೀನೂ ವೇಸ್ಟೇ ಕಣ್ ಮಗ.ಅಲ್ಲಾ ಅವ್ನಿಗೊಂದು ಸ್ವಲ್ಪ ಚುರುಕ್ ಮೆಣ್ಸಿನ್ಕಾಯಿ ತಿನ್ಸಿ ಚುರುಕ್ ಮಾಡ್ಬಾರ್ದಾ ನೀನೂ?ಮೂರೊತ್ತೂ ಅದೆಂತದೋ ಈಗ್ ಬಂದಿರ ಈಟಗ್ಲ ಹಲ್ಗೆ ಕೈನಲ್ಲಿಟ್ಕೊಂಡ್ ಏನೋ ಪಟ್ಕೂ ಪಟ್ಕೂ ಅಂತ
ಒತ್ಕೊಂತಾನೇ ಕೂತಿರ್ತಾನೆ.ಒಂದ್ ಮೊಗ್ಚ ಕೈ ಹಾಕಿ, ಕೆರ್ದು ಅವ್ನ ಮೇಲೆಬ್ಸು.ಸ್ವಲ್ಪ ವಾಕೂಗೀಕೂ ಮಾಡ್ಕೊಂಡು ಫಿಟ್ಟಾಗಿರ್ಲಿ. ಇಲ್ದೋದ್ರೆ ನನ್ ತರಾನೇ ಅವ್ನು ಮದ್ಯ ದಾರೀಲೇ ನಿಗ್ರುಕೊಂತಾನೆ.ಈಗಾಗ್ಲೇ ಈ ನನ್ ಮಗಾನೂ ಸಕ್ರೆ ಫ್ಯಾಕ್ಟ್ರೀ ಓನರ್ರಾಗೌನೆ….”ಅಂತ ನನಗೆ ಮಗ್ನಿಗೆ ಬುದ್ದಿ ಕಲ್ಸು ಅಂತ ಬುದ್ದಿ ಹೇಳೋಕೆ ಬಂದಿರಬಹುದೇ??????ಭಯದಲ್ಲೇ ನಡುಗ್ತಲೇ ಇದ್ರೂ ನೂರಾರ್ ಆಲೋಚನೆಗಳು.ಕೆಟ್ಟ ಕೆಟ್ಟ ಯೋಚನೆಗಳು.ಅಲ್ಲ ಬಂದಿರೋದು ನಮ್ ಮಾವ್ನೋರೋ, ಬೇರೆಯೋರೋ ಅಂತ ಕನ್ಫರ್ಮ್ ಬೇರೆ ಆಗಿಲ್ವಲ್ಲಾ!ಅವ್ರೇ ಆಗಿದ್ರೆ ಯೋಚ್ನೆ ಇಲ್ಲ.ಪ್ರೇತ ಆದ್ರೂ ನಮ್ಮೋರೇ, ಏನೂ ತೊಂದ್ರೆ ಕೊಡದಿಲ್ಲ. ಆದ್ರೆ………
ಒಂದ್ಕಡೆ ಭಯ, ಇನ್ನೊಂದ್ ಕಡೆ ಯೋಚ್ನೆ. ಹೋಗ್ಲಿ, ನಮ್ ಮನೆಯವ್ರನ್ನ ಎಬ್ಬಿಸೋಣ, ಸೇಫರ್ ಸೈಡಿಗೆ ಯಾರಾದ್ರೂ ಜೊತೆಗಿದ್ರಾಗುತ್ತೆ,ಸಲ್ಪ ಧೈರ್ಯ ಬರುತ್ತೇಂತ ಅಂದ್ಕೊಂಡೆ.ಆದ್ರೆ…..
ಏ ಸುಮ್ನಿರ್ರೀ, ಆ ಮನ್ಶ ಟಿವಿಲಿ ದೆವ್ವಾನ ನೋಡಕ್ಕೇ ಹೆದರ್ಕೊಳ್ಳೋ ಪ್ರಾಣಿ, ಶುಗರ್ ಪೇಶೆಂಟು, ಸುಮ್ನೆ ಆವಯ್ಯನ ಜೀವಕ್ ಯಾಕೆ ಆಪತ್ತು ತರೋದೂಂತ!ಜೊತ್ಗೆ ನನ್ಗೆ ಧೈರ್ಯ ಏಳೋದಿರ್ಲಿ,ಇಲ್ಲದ್ ಸಲ್ಲದ್ ಊಹೆ ಮಾಡ್ಕೊಂಡ್ ಸ್ವಲ್ಪ ಹೆದ್ರಿರೋ ನನ್ಗೆ ಪೂರ್ತಿ ಜಾಪಾಳ್ ಮಾತ್ರೆ ಕೊಟ್ ಮಲ್ಗಿಸೇ ಬಿಡೋ ಜಾಯಮಾನದ್ ಜೀವ ಈ ನನ್ ಗಂಡ ಅನ್ನ ಪ್ರಾಣಿ! ಈಗ್ ಏನಪ್ಪಾ ಮಾಡ್ಲಿ,
ಏನಪ್ಪಾ ಮಾಡ್ಲೀ……ಅಂತ ಯೋಚಿಸ್ತಿದ್ದೆ. ಇದ್ಕಿದ್ದಂಗೆ ನಂ ಮನೆ ದೇವ್ರು ಜೈ ಬಜರಂಗಬಲಿ ಮಾರುತಿರಾಯರು ಮನಸಿಗೆ ಬಂದ್ರು.ಹನುಮಾನ್ ಚಾಲೀಸ ಹೇಳಿಕೊಂಡ್ರೆ ಎಂಥಾ ಭೂತ ಪ್ರೇತ ಪಿಶಾಚಿ ಪೀಡೇಯೂ ಹತ್ರ ಸುಳಿಯಲ್ಲ,ಅಂತ ನಮ್ ದೇವಸ್ಥಾನ್ದಲ್ಲಿ ಪುರೋಹಿತರು ಹೇಳಿದ್ ಛಕ್ ಅಂತ ಜ್ಞಾಪಕಕ್ ಬಂತು. ತಕ್ಷಣ
ಹನುಮಾನ್ ಚಾಲೀಸ ಹೇಳಿಕೊಳ್ಳೋಕೆ ಶುರು ಮಾಡ್ದೆ.ಏನ್ ಗ್ರಾಚಾರವೋ, ಸಲೀಸಾಗಿ ಬರ್ತಿದ್ದ ಚಾಲೀಸ, ದದದದದ ಸದ್ ಮಾಡ್ತಾ ಮರ್ತೇಹೋಗೋದೇ!ಆಪತ್ ಭಾಂದವ ಯು ಟೂಬ್ ಹಾಕ್ಕೊಂಡು ಅದನ್ನೇ ತಿರುಗ್ಸೀ ಮುರುಗ್ಸೀ ಜೊತೇಲೆ ಹೇಳ್ಕೊಂಡು ರಾತ್ರಿ ಪೂರಾ ಶ್ರೀರಾಮದೂತಾ ಕಾಪಾಡಪ್ಪಾ ಅಂತ ಕಾಲ ಕಳ್ದೆ.
ಒಂದ್ಕಡೆ, ಯಾಕೋ ಸಣ್ದಾಗಿ ಇನ್ನೊಂದ್ ಥಾಟ್ ಬರೋಕ್ ಶುರುವಾಯ್ತು.”ಸ್ವಲ್ಪ ಅವ್ಳ್ನ ಸತಾಯ್ಸಿ” ಅಂತ ನಮ್ಮತ್ತೆ ಏನಾದ್ರೂ ಗಂಡುನ್ನ ಪುಸಲಾಯಿಸಿ ಕಳಿಸಿದ್ದಾರ್ಯೇ ಅಂತ ಡೌಟು ಬಂತು.ಯಾಕಂತೀರೋ, ನಾನು ನಮ್ಮತೆ ಜತ್ಗೆ ಸುಮಾರು ಅದ್ನೆಂಟ್ ವರ್ಸ ಜೊತೆಗೇ ಇದ್ದೆ. ಅಯ್ಯೋ …….ಸಂಸಾರ ಅಂದ್ಮಾಕೇ ಒಂದ್ ಮಾತ್ ಬತ್ತದೆ ಒಂದ್ ಮಾತ್ ಓಯ್ತದೆ.ನಿಜ ಹೇಳ್ಬೇಕೂಂದ್ರೆ, ಆದ್ರೆ, ಛೇ, ಪಾಪ, ನಮ್ಮತ್ತೆ ತುಂಬಾ ಒಳ್ಳೇಯೋರಿದ್ರು ಕಣ್ರೀ.ಯಾವಾಗ್ಲೂ ನಗ್ನಗ್ತಾ ಇರೋರು. ನಾನೇನೇ ಅಡ್ಗೆ ತಿಂಡಿ ಮಾಡುದ್ರೂ ಮೆಚ್ಕೊಳೋರು. ಪ್ರೀತಿಯಿಂದ್ಲೇ ಕಾಣ್ತಿದ್ರು. ಟಿಪಿಕಲ್ ಅತ್ತೆ ತರ ಯಾವತ್ತೂ ನೆಡ್ಕೊಂಡೇ ಇರ್ಲಿಲ್ಲ ಬಿಡ್ರೀ. ಬದುಕ್ದಾಗ್ಲೇ ಕಾಟ ಕೊಡ್ಲಿಲ್ಲ, ಇನ್ ಸತ್ತಾಗ್ ಯಾಕೆ ಕೊಟ್ಟಾರು¿ಇಲ್ಲ ಬಿಡ್ರೀ, ಛಾನ್ಸೇ ಇಲ್ಲ!
ಅಂತ ನಾನೇ ಸಮಾದಾನ ಮಾಡ್ಕೊಂಡೆ.ಆದ್ರೂ, ರಾತ್ರಿಯೆಲ್ಲ ಈ ಆಕೃತಿ ಬಗ್ಗೆ ಎಷ್ಟ್ ಚಿಂತೆ ಮಾಡುದ್ರೂ ಟೂಬ್ಲೈಟ್ ಹತ್ಕೊಳ್ಳಲೇ ಇಲ್ಲ.ಬೆವರು ನಿಲ್ಲಲೇಇಲ್ಲ. ಸದ್ಯ ಬೆಳ್ಕರ್ದು, ಅಲ್ಲಾ ಹು ಅಕ್ಬರ್ ಅಂತ ಮಸೀದಿಲಿ ಅಲ್ಲಾನ ಭಕ್ತರು, ಅಲ್ಲಾನ ಕರೆದ್ರೆ ಸಾಕು, ನಾನು ಎದ್ ಕೆಳಗೋಡಿಬಿಡೋಣ ಅಂತ ಕಾಯ್ತಾ ಇದ್ದೆ. ಯಾಕೇಂದ್ರೆ, ದೆವ್ವಗಳು ಟೈಮಿಂಗ್ಸ್ ರಾತ್ರಿ ಹನ್ನೆರಡರಿಂದ ಬೆಳಗಿನ ಝಾವ ನಾಕು ನಾಕೂವರೆ, ಅದ್ಕಿಂತ ಜಾಸ್ತಿ ಅವು ಡ್ಯೂಟಿ ಮಾಡಲ್ಲಾಂತ ಕೇಳಿದ್ದು, ಓದಿದ್ದು. ರಾತ್ರಿ ಮೂರ್ನಾಕು ಗಂಟೇಲೇ ಬೆವರೀಬೆವರೀ, ಮೂರ್ ತಿಂಗ್ಳಲ್ಲಿ ವರ್ಕೌಟ್ ಮಾಡಿದ್ ಫಲ ಸಿಕ್ಬಿಡ್ತು.
ಮಸೀದಿಯೋರು, ಅಲ್ಲಾನ ಕರೆದಿದ್ದೇ ತಡ, ದುಡುದುಡೂಂತ ಕೆಳಗೋಡಿಬಂದೆ. ಜೋರಾಗಿ ವಿಷ್ಣು ಸಹಸ್ರನಾಮ, ವೇಂಕಟೇಶ್ವರ ಸುಪ್ರಭಾತ, ಲಲಿತಾ ಸಹಸ್ರನಾಮ ಒಂದಾದ್ ನಂತ್ರ ಒಂದು ಕಂಟಿನಿಯಸ್ ಆಗಿ ಹಾಕಿಕೊಂಡು ಮನಸ್ಸನ್ನ ಬೇರೆಡೆ ಹರಿಸಲು ಪ್ರಯತ್ನಿಸಿದೆ. ಆದರೆ, ಕಿಟಕಿ ಕಡೆ ಮಾತ್ರ ಅಪ್ಪಿ ತಪ್ಪಿಯೂ ದೃಷ್ಟಿ ಹಾಯಿಸಲಿಲ್ಲ. ಮುಕ್ಕೋಟಿ ದೇವರುಗಳಲ್ಲಿ ಯಾರ್ಯಾರು ನೆನಪಿಗೆ ಬರ್ತಾರೋ ಎಲ್ಲಾ ದೇವರುಗಳ ನೆನೆಯುತ್ತ, ಆ ಸಮಯಕ್ಕೆ ಟೆಂಪೊರರಿಯಾಗಿ ಪರಮ ಭಕ್ತೆಯಾಗಿಬಿಟ್ಟೆ!ಸಂಕಟ ಬಂದಾಗ ವೇಂಕಟರಮಣ ಅನ್ನೋ ಗಾದೇನ ಪ್ರೂವ್ ಮಾಡಿಬಿಟ್ಟೆ!ಆರು ಗಂಟೆ ಹೊತ್ತಿಗೆ ಪತಿದೇವರು ಕೆಳಗಿಳಿದು ಬಂದರು. ಅವರೆಷ್ಟೇ ಪುಕ್ಕಲಾದರೂ, ಪಕ್ಕದಲ್ಲಿ ಏನೋ ಒಂದು ಜೀವ ಇದ್ರೆ ಏನೋ ಸಮಾಧಾನ.ಅಷ್ಟೊತ್ತಿಗೆ ನಮ್ ರವಿ ಮಾಮಾನೂ ಸ್ವಲ್ಪ ಸ್ವಲ್ಪ ಟಾರ್ಚು ಬಿಡೋಕೆ ಶುರುಮಾಡಿದ್ದ. ಬೆಳ್ಳಿ ಬೆಳಕು ಕಾಣಿಸಿದ ಮೇಲೆ, ಮೆಲ್ಲಗೆ ತಲೆಬಾಗಿಲು ತೆಗೆದು, ಒಳಗಿಂದಲೇ ತಲೆ ಆಚೆಗಿಟ್ಟು ನೋಡಿದೆ. ಮಾವ ಇದ್ದಾರೋ¿ ಹೊರಟ್ರೋ ಅಂತ.ಅಲ್ಲಿ ದೃಶ್ಯ ನೋಡಿ, ಪಕಪಕಾಂತ ಒಂದೇ ಸಮ್ನೆ ನಗಕ್ ಶುರುಮಾಡ್ದೆ. ನನ್ ಗಂಡ, “ ಏನಾಯ್ತೇ, ಒಳ್ಳೆ ಬೆಳ್ಬೆಳಗ್ಗೆ ದೆವ್ವ ಮೆಟ್‌ಕೊಂಡಂಗೆ ನಗ್ತಿದ್ದೀಯಾ¿ ಬೇಜಾನ್ ಕೆಲ್ಸ ಇದೆ, ಮೊದ್ಲು ಸ್ನಾನ ಮಾಡ್ಕೊಂಡು ಬಾ. ಸಲ್ಪಾನೂ ಸೀರಿಯಸ್‌ನೆಸ್ ಇಲ್ಲಾ.ಏಳ್ ಗಂಟೆಗೆಲ್ಲಾ ಸ್ವಾಮಿಗುಳ್ ಬರ್ತಾರೇ ಗೊತ್ತಲ್ವಾ”, ಅಂತ ಬೆಳ್ಗೇನೇ ಇವತ್ತಿರೋ ತಿಥಿ ಕೆಲ್ಸಗಳ್ನ ನೆನಪ್ಸಿ,ರೇಗ್ಕೊಂಡು,ಲೈಟಾಗಿ ನನ್ಗೆ ತಿಥಿ ಮಾಡುದ್ರು.
ಆಲ್ಲಿ ನಡೆದಿದ್ದು ಇಷ್ಟೇ ಕಣ್ರೀ. ನಮ್ ಕೆಲಸದ ರೇಣುಕ ತಿಥಿಗೇಂತ ಮಡಿ ಬಟ್ಟೆ , ಛಳಿಗೆ ಬೇಗ ಒಣಗೊಲ್ಲಾಂತ ಮಹಡಿ ಮೇಲೆ ಬಾಲ್ಕನಿಯಲ್ಲಿ ಹಾಕಿದ್ಲಾ¡ಕ್ಲಿಪ್ ಸಡಿಲ ಆಗಿ ನಮ್ ಮನೇವ್ರು ತಿಥಿಗೆ ಉಟ್‌ಕೊಳ ಪಂಚೆ ಗಾಳಿಗೆ ಹಾರಿ ಕಾಂಪೌಂಡ್ ಕಂಬದ್ ಮೇಲೆ ಹರಡ್ಕೊಂಡ್, ಕವಚಿಕೊಂಡು ಕೂತಿದೆ. ನನ್ ಗ್ರಹಚಾರಕ್ಕೆ, ಆ ಪಂಚೆ ಮೇಲೆ,
ಪಕ್ಕದ ಮನೆ ತಾತನ ಕರಿಟೋಪಿ, ಒಣಹಾಕಿದ್ರೇನೋ ತಿಳೀದು, ಗಾಳೀಗೆ ಕಾಕತಾಳೀಯವಾಗಿ ಬಂದು ಆ ಪಂಚೆ ಮೇಲೆ ಪಿಕ್ಸ್ ಆಗ್ಬಿಟ್ಟು, ನೋಡಕ್ಕೆ ಒಳ್ಳೆ ಬಿಳಿಪಂಚೆ ಹೊಚ್ಚಿರೊ ಯಾರೋ ಮನ್ಶ ಟೋಪಿ ಹಾಕೊಂಡಂಗೇ ಕಾಣ್ತಿದೆ. ನಂಗ್ ನಮ್ ಮಾವನ ವಿಷಯದಲ್ಲಿ ಭಾಳ ಸ್ಟಾಂಗಾಗಿ ಅನುಮಾನ ಬಂದಿದ್ ಯಾಕೇಂದ್ರೆ. ಅವರುವೇ ತಲೆಗೆ ಕರಿ ಟೋಪಿ ಹಾಕ್‌ತಿದ್ರಂತೆ!
ಕೆಲವು ಸರಿ ಜೀವನದಲ್ಲಿ ಕೆಲಸಕ್ಕೆ ಬಾರದ ಕತೆಗಳು ಇಂಥ ದೃಶ್ಯಗಳಿಂದ ಸೃಷ್ಟಿಯಾಗುತ್ತೆ ನೋಡ್ರೀ. ಈ ಮನ್ಸು ಅನ್ನೋದು ಇನ್‌ಬಿಲ್‌ಟ್ ಎನಿಮಿ ಕಣ್ರೀ. ಏನಕ್ಕೆ ಏನೋ ತಾಳೆ ಹಾಕಿ ನಮ್ ತಲೇನ ಗಬ್ಬೆಬ್ಬಿಸಿ ಕೆಡಿಸುತ್ತೆ. ಅದೂ ಸರಿ ರಾತ್ರಿ ಹೊತ್ತಿಲ್ದ್ ಹೊತ್ತಲ್ಲಿ ,
ನಿದ್ದೆ ಬರದ ಸಮಯದಲ್ಲಿ, ಈ ಮನ್ಸಿಗೆ ಏನಾದ್ರೂ ವಿಷ್ಯ ಕೊಟ್‌ಬಿಟ್ರೆ, ಲಂಗೂಲಗಾಮಿಲ್ಲದ ಕುದುರೆ ತರ ಓಡುತ್ತೆ.ಇದಕ್ಕೆ ಯಾರನ್ನ ದೂರೋಣ, ಹೇಳಿ?ಒಟ್‌ನಲ್ಲಿ, ಯಾವ್ದೂ ತೊಂದ್ರೆಯಿಲ್ದೇ ಪಾಪ ನಮ್ ಮಾವ , ನನ್ ಕಲ್ಪನೆಯಿಂದ ದೂರವಾಗಿ, ನಾನು ಮಾಡಿದ ಎಡೆ ಸವಿದು ತೃಪ್ತಿಯಿಂದ ಆಶೀರ್ವಾದ ಮಾಡಿ, ಅವರ ಲೋಕ ಸೇರ್ಕೊಂಡ್ರು ಕಣ್ರೀ.ಆದ್ರೂ ಕಾಫಿ ಅಂದ್ರೆ ಪಂಚಪ್ರಾಣ ಇಟ್ಕೊಂಡಿದ್ದ ಮಾವನ್ಗೆ ಒಂದು ಲೋಟ ಸ್ಟ್ರಾಂಗ್ ಕಾಫಿ ಇಟ್ಟೇಬಿಡೋಣಾಂತ ಅನ್ನಿಸಿದ್ರೂ, ಸ್ಪೆಷಲ್ ಆಗಿ ಏನಾದ್ರೂ ಇಂಥ ಕೆಲ್ಸ ಮಾಡುದ್ರೆ,ತಿಥಿ ಮಾಡ್ಸಕ್ ಬಂದ ಸ್ಮಾವಿಗಳು ಒಪ್‌ಬೇಕಲ್ಲಾ,”ಏನ್ ತಾಯಿ, ಏನೇ ಮಾಡೋಕೂ ಒಂದು ಶಾಸ್ತ್ರ ಇದೆ, ಪದ್ದತಿ ಇದೆ. ಅದ್ ಬಿಟ್ಟು ಏನೇನೋ ಮಾಡಿದ್ರೆ ಅಪಚಾರವಾಗುತ್ತೆ. ಅದೆಲ್ಲ ಸಲ್ಲದು.ಆದ್ರೂ ಇತ್ತೀಚಿನವರಿಗೆ ಈ ಶಾಸ್ತ್ರಗಳೂಂದ್ರೆ,ಏನೋ ತಾತ್ಸಾರ! ಎಲ್ಲಾ ವಿಚಾರದ್ ಹಿಂದೆಯೂ ವಿಜ್ಞಾನ ಇದೆ ಅನ್ನೋದ್ ತಿಳ್ಕೊಳ್ದೇ ಇರೋ ಮುಂಡೇವಕ್ಕೆ ಏನೂಂತ ಹೇಳೋದೂ?ನಿಮ್ಗೆ,ಕೇಳೋಕಾದ್ರೂ ಬುದ್ದಿ ಬೇಡ್ವೇ. ಇತ್ತೀಚೆಗಂತೂ ನಮ್ ಸಂಸ್ರಾರಾನಾ, ಶಾಸ್ತ್ರಾನಾ, ಪದ್ದತಿಗುಳ್ನ ಗಾಳಿಗ್ ತೂರ್ಬಿಟಿದೀರಾ! ಶುದ್ದ ಅವಿವೇಕಿಗಳು………”, ಅದೂ ಇದೂಂತ ಪುರೋಹಿತರ ಹತ್ರ ಶುದ್ದ ಕನ್ನಡದ ಬೈಗುಳ ಪುರಾಣ ಕೇಳಬೇಕಾದೀತೂಂತ ತೆಪ್ಗಾದೆ.
ಆದ್ರೂ ಕಾಫಿಯಿಟ್ಟಿಲ್ಲವೆಂದು ಮಾವ ಮುಖ ಊದಿಸಿಕೊಂಡು ನನ್ನನ್ನ ನೋಡಿದಂತೆ, ಅವರ ಫೋಟೋ ನೋಡಿದಾಗ ಯಾಕೋ ಹಾಗನ್ನಿಸ್ತು.ಕಾರ್ಯ ಮುಗಿದ್ ಸ್ವಾಮಿಗುಳ್ ಆಚೆಗ್ ಹೊರ್ಟ ಕೂಡ್ಲೇ ಒಂದ್ ಲೋಟ ಬಿಸಿಬಿಸಿ ಕಾಫಿ ತಂದು ಅವ್ರ ಪಿಂಡದ ಮುಂದಿಟ್ಟೆ. ನಮ್ಮನೆಯವ್ರು ಸ್ವಾಮಿಗಳ್ನ ಬಿಟ್ಟು ಬರೋಕೆ ಗೇಟಿಗೆ ಹೋದವರು, ಅಲ್ಲೇ ಲೋಕಾಭಿರಾಮವಾಗಿ ಮಾತಾಡ್ತಾ ನಿಂತಿದ್ರು. ಹಾಗಾಗಿ ತುಂಬಾ ಒಳ್ಳೇದಾಯ್ತು.ಈ……..ಗ್ ನೋಡ್ರಪ್ಪಾ,
ನನ್ ಮನ್‌ಸಿಗೆ ನೆಮ್ಮದಿ ಸಿಕ್‌ತು,ಮಾವನೋವ್ರ ಆತ್ಮಕ್ಕೂ ಶಾಂತಿ ಸಿಗ್ತು. ಓಹೋಹೋಹೋ……ಇದೆಲ್ಲಾ ನಿಂಗೆಂಗ್ ಗೊತ್ತಾಯ್ತೂಂತ ಕೇಳ್ತೀರೇನೋ? ಹೌದ್ರೀ, ಫೋಟೋಲಿರೋ ನಮ್ ಮಾವ ತೃಪ್ತಿಯಾಗಿ ನಕ್ದಂಗೆ, ಆಶೀರ್ವಾದ ಮಾಡ್ದಂಗೆ, ಭಾಸವಾಯ್ತು!
ಅಲ್ಲಾ, ನಾನ್ ಮಾಡಿದ್ರಲ್ಲಾದ್ರೂ ಏನಾದ್ರೂ ತಪ್ ಇದ್ಯಾ ಹೇಳ್ರಪ್ಪಾ! ಇದ್ದೋರ್ಗಾದ್ರೂ ಸರಿ, ಸತ್ತೋರ್ಗಾದ್ರೂ ಸರಿ, ಅವ್ರಿಗೆ ಇಷ್ಟ ಇರೋದು ಮಾಡಿ ಕೊಡೋದು ಧರ್ಮ! ಅವರಿಗಿಷ್ಟವೋ ಅನಿಷ್ಟವೋ, ಅಪ್ರೂಪಕ್ಕೆ ವರ್ಷುಕ್ಕೆ ಒಂದ್ ಸರಿ ಬರೋ ಪ್ರತೀ ತಿಥೀಗೂ ವಡೆ, ಪಾಯ್ಸಾ, ಸೂಕೇನ್ ಉಂಡೇನೇ ತಿನ್ಬೇಕೂಂತ ಅನ್ನೋದು ಯಾವ್ ಆತ್ಮಗಳ್ ಕರ್ಮ?ಯಾರ್ ಲಾಜಿಕ್ಕು ಸರೀಂತ ದೊಡ್ಡೋರು ಈ ಮರ್ಮವನ್ನ ಸ್ವಲ್ಪ ನನ್ ಎಳೆ ಮಂಡೇಗೇ ಅರ್ಥ ಆಗೋ ಹಂಗೆ ಬಿಡ್ಸಿ ಹೇಳಿ ಪ್ಲೀ…..ಸ್!
ನನ್ ಮನ್ಸಲ್ ಕುಣೀತಿರೋ ಈ ಗೊಂದಲದ ಭೂತದ ಸಮಸ್ಯೆಗೆ ಪರಿಹಾರ ಹೇಳಿ ಪುಣ್ಯ ಕಟ್ಕೊಳೀ !ಎಲ್ರುಗೂ ನಮಸ್ಕಾರ!
ರೂಪ ಮಂಜುನಾಥ
ಭೂತದ ಭ್ರಾಂತು, ತಂದ ಫಜೀತಿ, ಹೊರಗಿನ ವಿಷಯಕ್ಕೆ ಮನಸ್ಸಿನ ಬ್ರಾಂತು ತಾಳೆ ಹಾಕಿ ಸೃಷ್ಟಿಸುವ ಕಲ್ಪನಾ ಲೋಕದ ಹಾಸ್ಯಮಯ ನಿರೂಪಣೆ, ಜೀವನದ ಕಟು ವಾಸ್ತವ ಕ್ಕೆ ಹಿಡಿದ ಕೈಗನ್ನಡಿ, ನವಿರಾಗಿ ಸಾಮಾನ್ಯ ಮನುಷ್ಯನ ಚಿಂತನಾಲಹರಿಯನ್ನು ನೈಜವಾಗಿ ಬಿಂಬಿಸಿದ ನಿಮಗೆ ಧನ್ಯವಾದಗಳು.
ಧನ್ಯವಾದಗಳು ಹೇಮಾನಿಮ್ಮ ಸ್ಪೂರ್ತಿದಾಯಕ ನುಡಿಗಳೇ ಬರಹಕ್ಕೆ ಶಕ್ತಿ.
ಸೂಪರ್. . . . ರೂಪಾ. . . . ನಿಮ್ಮ ಮಾವನವರು ಖಂಡಿತ ಒಳ್ಳೆ ಆಶೀರ್ವಾದ ಮಾಡ್ತಾರೆ. ಕಾಫಿ ಕೊಟ್ಟು ತೃಪ್ತಿ ಪಡ್ಸಿದ್ದೀರಾ.
ಅನಂತ ವಂದನೆಗಳು ಅಕ್ಕನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.
ಲಲಿತ ಪ್ರಬಂಧ, ಹಾಸ್ಯವಾಗಿಯೂ ಮತ್ತು ರಸವತ್ತಾಗಿಯೂ ಚೆನ್ನಾಗಿ ಮೂಡಿಬಂದಿದೆ
ಧನ್ಯವಾದಗಳು