ಚೆ ಗುವೆರಾನ ಮುಖ ಇದ್ದ ಮನುಷ್ಯ
ಮೂಲ:ವಾಷಿಂಗ್ಟನ್ ಕುಕುರ್ಟೋ
ಕನ್ನಡಕ್ಕೆ:ಕಮಲಾಕರ ಕಡವೆ
ಚೆ ಗುವೆರಾನ ಮುಖ ಇದ್ದ ಮನುಷ್ಯ
ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದ
ಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲ
ಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲ
ಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ
“ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”
ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರು
ಹಾಕಿಸ್ಕೊತಾರಲ್ಲ ಹಾಂಗೆ”.
“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,
ದೊಡ್ಡದೊಂದು ಜೈಲು ಅಲ್ದಿದ್ರೆ?”
ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇ
ಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದ
ಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.
ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲು
ನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.
ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದ
ನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತು
ಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ
“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”
ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದ
ಅವನು ಅವಳಿಗೆ ವಾಪಸಾಗಿದ್ದ
“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”
ಅಪ್ಪ ನನ್ನ ಅಣ್ಣ ಅಂತ ಕರೆಯೋದು
“ಅಪ್ಪಾ, ನಾಳೆ ಕ್ರಿಸ್ಮಸ್”.
“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.
ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.
ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!
“ನನ್ನ ತೋಳಿನ ಮೇಲೆ ಚೆಗೆ
ನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನು
ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದ
ನನ್ನಪ್ಪ ಅವನ ತೋಳಿನ ಮೇಲೆ ಒರಗಿದ
“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.
ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ.
**************************