ಗಜಲ್

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ಮಸ್ತಕದೊಳಗೆ ಥಟ್ಟನೆ ಹೊಳೆಯದೆ ತಲೆಗೆಡುಸುವೆ ನೀ
ಶಿರದೊಳಗೆ ಫಳ್ಳನೆ ಬೆಳಗದೆ ಹಲವು ತರದಿ ಸತಾಯಿಸುವೆ ನೀ

ಒಮೊಮ್ಮೆ ಮಿಣುಕುಹುಳ ಎಂಬಂತೆ ಸಣ್ಣಗೆ ಮಿನುಗುವೆ ನೀ
ಮೈಯೊಳಗೆ ಚಳ್ಳನೆ ವಿಧ್ಯುತ್ ಹರಿದಂತೆ ಬೆರಗುಗೊಳಿಸುವೆ ನೀ

ಹಿಂದೊಮ್ಮೆ ಮಲೆ ನಾಡಿನಲಿ ಬಿಡದ ಜಡಿಮಳೆಯಂತಿದ್ದೆ ನೀ
ಮಡಿಲೊಳಗೆ ಅಂಗನೆ ಈ ಕ್ಷಣವಿದ್ದಂತೆ ಚಿಕಿತಗೊಳಿಸುವೆ ನೀ

ಹಲವೊಮ್ಮೆ ಜೋಗದ ಧಾರೆಯಂತೆ ಕಾಗದಕೆ ಇಳಿವೆ ನೀ
ಬೆರಳೊಳಗೆ ತಟಕ್ಕನೆ ಹರಿದು ಕೀಲುಮಣೆ ಮೇಲೆ ಕುಣಿದಾಡಿಸುವೆ ನೀ

ಕೃಷ್ಣಾ! ನಿನ್ನ ರಚಿಸದಿರೆ ಭೊಕಂಪ ಘಟಿಸದು ಇಲ್ಲಿ ಅರಿತಿರು ನೀ
ಚಿತ್ತದೊಳಗೆ ದಟ್ಟನೆ ಹೊಗೆಯಂತಾವರಿಸಿ ಕವಿತೆಯ ಕಪಿತ್ವವಾಗಿಸುವೆ ನೀ.


Leave a Reply

Back To Top