ಬಿ.ಟಿ.ನಾಯಕ್,ಅವರ ಕತೆ ಮಾಂಕಾಳಿ

ಕಥಾ ಸಂಗಾತಿ

ಮಾಂಕಾಳಿ

ಬಿ.ಟಿ.ನಾಯಕ್

ಅದೊಂದು ಸಣ್ಣ ಕುಟುಂಬ.  ರಂಗಣ್ಣ, ಆತನ ಅವ್ವ ಮತ್ತು ಹೆಂಡತಿ ಮಂಕಾಳಮ್ಮ ಇದ್ದರು.

ಒಂದು ದಿನ ಗಂಡ-ಹೆಂಡ್ತಿ ಒಂದೆಡೆ ಕುಳಿತಾಗ ಮತ್ತು ಅವ್ವ  ಒಳಗಿನ ಕೋಣೆಯಲ್ಲಿರುವಾಗ ಅವರ ಮಾತುಗಳ ಸಂಭಾಷಣೆ ಹೀಗಿತ್ತು ;

‘ಏನೇ ಮಾಂಕಾಳಿ ಇವತ್ತು ಯಾಕ ನಿನ್ನ ಮಕ ಊದಿಕೊಂಡೈತಲ್ಲ ?’ ರಂಗಣ್ಣ ಹೆಂಡ್ತಿಯನ್ನು ಛೇಡಿಸಿದ.

‘ಊದಿಕೊಳ್ದೆ ಏನ್ ಮಾಡ್ತದ ದಿನಕ್ಕೊಂದಿಪ್ಪತ್ತು ಸಲ ನನ್ನ ಕಾಳಜಿ ನಿಬ್ಬಿರಿಂದ ಆಗ್ತದ ಎಂದು ಮಾತಿನಿಂದ ತಿವಿದಳು.

‘ಓ, ನಾವೇನ್ ಮಾಡೇವೀ ?’ ಆತ ಮರು ಪ್ರಶ್ನೆ ಹಾಕಿದ.

‘ಮನೇಲಿ, ಕಟ್ಟಿಕೊಂಡದ್ದೊಂದು ಪ್ರಾಣಿ ಜೀವಂತ ಅದ ಅಂತ ಸ್ವಲ್ಪನಾದ್ರೂ ಅನಸ್ತದೇನು ?’

‘ಅಯ್ಯೋ, ಉಲ್ಟಾ ಹೇಳ್ತಿಯಲ್ಲೇ, ನೀನು ನನ್ನನ್ ಕಟ್ಕೊಂಡೀಯ, ನಾನು ನಿನ್ನನ್ನಲ್ಲ ‘ ಏಂದ.

‘ಓಣ್ಯಾಗಿನ ಜನಾ ಒಪ್ಪಲಿ ಯಾರು ಯಾರನ್ನ ಕಟ್ಕೊಂಡಾರಂತ’ ಮಂಕಾಳಮ್ಮಳ  ಸಿಟ್ಟು ಇನ್ನೂ

ಹೆಚ್ಚಾಯಿತು.

‘ಇರ‍್ಲಿ ಬಿಡೇ … ನಿನ್ನ ತಲಿವೊಳಗ ಏನು ತುಂಬೇದ ಹೇಳಿಬಿಡು, ಇಬ್ಬರ ಮನ್ಸು ಹಗುರಾಗ್ತದ ‘ ಏಂದ.

ಅಷ್ಟರಲ್ಲಿ ರಂಗಣ್ಣನ ಅವ್ವ ಕೆಮ್ಮುವದು ಕೇಳಿಸಿತು.

‘ಒಳಗ ಹೋಗ್ರೀ, ನಿಮ್ಮವ್ವ ಕರೀತ್ಯಾಳ’ ಎಂದು ಮೂದಲಿಸಿದಳು ಮಂಕಾಳಮ್ಮ.

‘ಪಾಪ, ಏನೋ ಅವ್ವ ಕೆಮ್ಮಿದ್ರೇ  ಕರೀತಾಳೆ ಅಂತ ಹೇಳ್ತಿಯಲ್ಲೇ ಹಾಗ ಹೇಳೋದು ಸರಿನಾ ?’

‘ಇಂಥ ಸಿಗ್ನಲ್ ನಿಮ್ಮವ್ವ ಭಾಳ್ ಸರೆ ಕೊಟ್ಟಾಳ, ಇದೇನ್ ಹೊಸದಲ್ಲ ‘ ಮತ್ತೇ  ಮಾತಿನಲ್ಲಿ ತಿವಿದಳು.

‘ಅದೇನಿಲ್ಲ ಬಾ.. ನನ್ನ ಬಗಲಾಗ ಭಾಳ್ ದಿವಸ ಆಯ್ತು’ ಆಕೆಯನ್ನು ತನ್ನೆಡೆಗೆ ಪ್ರೀತಿಯಿಂದ ಕರೆದ .

‘ಇದ್ಕೆನೂ ಕಮ್ಮಿ ಇಲ್ಲ.  ಬ್ಯಾಡ ಬಿಡ್ರೀ ನಾನು ನಿಮ್ಮ ಬಗಲಾಗ ಬಂದ್ರ  ನಿಮ್ಮವ್ವಗ ಕೆಮ್ಮು ಜಾಸ್ತಿ ಆಗಿ ಬಿಡ್ತದ, ಸ್ವಲ್ಪ ನಾವೇನಾದ್ರೂ ಸೇರಿ ಮಾತಾಡಿದ್ರೇ ಆ ಕೆಮ್ಮು ಇನ್ನೂ ಜೋರಾಗ್ತದ.’

‘ಎಂಥಾ ಕೆಟ್ಟ ವಿಚಾರ ನಿಂದು, ಹಾಗೇನೂ ಇಲ್ಲ ಮಾಂಕಾಳೀ….’ ಎಂದ. 

‘ಇಲ್ಲಾ ನೋಡ್ರಿ ..ಆ ಮ್ಯಾಲ ನಮ್ಮವ್ವ ಕೆಮ್ಮುತಾಳಂತ ಓಡಿ ಹೋಗೋದು ನಂಗ  ಪಸಂದ್ ಆಗೋದಿಲ್ಲ ಮತ್ತ’ ಕಂಡೀಶನ್ ಹಾಕಿದ್ಲು.

‘ಏನೂ ಇಲ್ಲ ಬಾರ… ಯಾಕೋ ನಿಂದು ಭಾಳಾಯ್ತು.’ ಎಂದು ಅವಳ ಕೈ ಹಿಡಿದು ಜಗ್ಗಿದ.

‘ಅಯಿತಾಯಿತು ‘ ಎಂದು ಇನ್ನೇನು ಆತನ ಹತ್ರ ಆಕೆ ಹೋಗುವಾಗ, ಅವ್ವನ ಕೆಮ್ಮು

ತೀಕ್ಷಣವಾಗಿ ಕೇಳಿಸತೊಡಗಿತು. 

ಆಗ ರಂಗಣ್ಣ ಅವ್ವನ ಖೋಲಿ ಕಡೆ ತಿರುಗಿ ನೋಡಿದ.

‘ಅಕಾ..ನಾ ಹೇಳಲಿಲ್ಲಾ ಮತ್ತ , ಹಂಗೆ ಆತು ನೋಡ್ರೀ .’ ಎಂದು ಮೂದಲಿಸಿದಳು.

‘ಅದೇನಿಲ್ಲ ಕೆಮ್ಮಂಗ ಕೆಮ್ಮ್ಯಾಳ ಅದ್ರಾಗೇನೂ ವಿಶೇಷ ಐತೇನು .. ಇಲ್ಲ .. ಇಲ್ಲ ‘ ಎಂದ ರಂಗಣ್ಣ.

‘ಹೌದss, ನೋಡ್ತೀನಿ ತಡೀರೀ’ ಅಂತ ಇನ್ನೂ ಆತನ ಹತ್ತರ ಹೋದ್ಲು, ಆಮೇಲೆ ಹಿಂದೆ ಸರಿದಳು.

ಏಕೆಂದ್ರೇ, ಈ ಬಾರಿ ವಿಪರೀತ ಕೆಮ್ಮು ಕೇಳಿಸಿತು.

ಪಾಪ ರಂಗಣ್ಣಗೆ ಆ ಕೆಮ್ಮಿನ ಧ್ವನಿ ಕೇಳಿ ಹೊಟ್ಟೆಯೊಳಗೆ ಕಸಿವಿಸಿಯಾಯಿತು. 

ಇನ್ನು ತಾಳಲಾರದೆ, ಅವ್ವಗೇ  ನೀರಾದ್ರೂ ಕೊಡ್ತೀನಿ ಎಂದು ರಂಗಣ್ಣ ಏದ್ದು ಒಳಗೆ ಹೋದ. 

ಇತ್ತ ಮಾಂಕಾಳಿ  ‘ಇದೆ ಆಯಿತು ನನ್ನ ಹಣೆ ಬರಹ, ಲಗ್ನಾಗೀ ಎರಡು ವರ‍್ಷ ಆದ್ರೂ ನಾವ್ ಚೆಂದಾಗಿ

ಕೂತಿಲ್ಲ, ಮಾತಾಡಿಲ್ಲ ನನ್ ಕರ‍್ಮ’ ಎಂದು ಗೊಣಗುಟ್ಟಿದಳು.

ಅತ್ತ ರಂಗಣ್ಣ ಅವ್ವನ ಹತ್ರ ಹೋಗಿ ;

‘ಏನಾತವ್ವ, ಭಾಳ ಕೆಮ್ಮಾಕತ್ತಿಯಲ್ಲ, ಕುಡಿಲಾಕ್ಕ ನೀರು ಬೇಕೇನು ?’

‘ಇರ‍್ಲಿ ಬಿಡಪ್ಪ ಈ ಕೆಮ್ಮು ಸಾಯಾತಂಕ ಇರೋದ, ಅದ್ಕೇನು ಸಾವಿಲ್ಲ, ನಂಗೂ ಸಾವಿಲ್ಲ’

‘ಹಂಗ್ಯಾಕ ಹೇಳ್ತಿ ಜಡ್ಡು ಅಂದ್ರ ಮನಷ್ಯರಿಗೆ ಬರೋದೇ..ಹೌದಲ್ಲ, ಇನ್ನೇನು ಪ್ರಾಣಿಗಳಿಗೆ ಬರ‍್ತಾವೇನು?’

‘ಅಯ್ಯೋ,ಯಪ್ಪಾ ಮನ್ಷಗೂ, ಪ್ರಾಣಿಗೂ ಬರೋದೇ. ಆದ್ರೇ ಮನಷರಿಗೆ ಕಾಳಜಿ ಮಾಡ್ಲಿಕ್ಕೆ ನಿನ್ನಂತ ಮಕ್ಳು ಇರ‍್ತಾರ, ಪ್ರಾಣಿಗಳಿಗೆ ಇರೋದಿಲ್ಲ’ ಎಂದಳು.

‘ಇರ‍್ಲಿ ಬಿಡು, ಅದು ಕಥಿ ತೊಗೊಂಡು ಏನ್ ಮಾಡ್ತಿಯಾ.  ಕೆಮ್ ಕಡಿಮ್ಯಾಗದಿದ್ರ ದವಾಖಾನಿಗೆ ಹೋಗೋಣ ತಯಾರಾಗು ‘ ಎಂದ.

‘ಅಪ್ಪ.. ಮಗನೇ  ದವಾಖಾನಿಗೇನೂ ಬ್ಯಾಡ, ಸ್ವಲ್ಪ ಬಿಸ್ನೀರಿಗೆ ಅರಿಶಿನಪುಡಿ ಹಾಕಿ ಕೊಡು, ಬಾಯಿ

ಮುಕ್ಕಳಸ್ತೀನಿ ಕಡಿಮಿ ಆಗತೈತೆ’ ಎಂದಳು ಅವ್ವ.

‘ಆಯಿತು ತರ‍್ತೇನೆ ತಡೀ’ ಎಂದು ಎದ್ದು ಅಡಿಗೆ ಮನೆ ಕಡೆಗೆ ಹೋದ.

ಆದ್ರ, ಆತನಿಗೆ ಅರಿಶಿನ ಪುಡಿ ಸಿಗಲಿಲ್ಲ. ಮತ್ತೇ ತನ್ನ ಹೆಂಡ್ತಿ ಹತ್ರ ಹೋಗಿ;

‘ಅದೇನು ಅರಿಶಿನ ಪುಡಿ ಸಿಗವಲ್ತು, ಎಲ್ಲಿಟ್ಟೆ ಮಾಂಕಾಳೀ ?’  ಏಂದು ಕೇಳಿದ್ದುದಕ್ಕೆ ಅವಳು;

‘ನನ್ನ ಟೊಂಕದಾಗ ಇಟ್ಕೊಂಡಿನೀ ‘ ಎಂದಳು.

‘ಹೌದಾ, ಮತ್ತ ಕೊಡು, ನಮ್ಮ ಅವ್ವಗ ಬೇಕು’ ಎಂದ.

‘ನೀವಾ ಹುಡುಕ್ಕೊಳ್ರಿ ‘ ಎಂದಳು.

‘ಅದೇನು ಹುಡುಗಾಟಿಗಿ, ಟೊಂಕದಾಗ ಐತಿ ಅಂತೀ, ಹುಡುಕು ಅಂತೀ ಯಾವದು ಖರೇ ?’

‘ನಾ ಹೇಳ್ದೇ ನೀವ್ ಕೇಳಿದ್ರೀ, ಯಾರಾದ್ರೂ ಅದನ್ನ ಟೊಂಕದಾಗ ಇಟ್ಕೊಂಡಿರ‍್ತಾರೇನು ?’

‘ಥೂ ! ನಿನ್ನ ‘ ಅಂದು ಮತ್ತೇ ಅಡಿಗೆ ಮನೆ ಕಡೆ ಹೋದ.

ಅಲ್ಲಿ ಇಲ್ಲಿ ನೋಡ್ತಾ ನೋಡ್ತಾ ದೇವ್ರ ಖೋಲಿಗೆ ಹೋದ , ಅಲ್ಲಿ ಅರಿಶಿನ, ಕುಂಕುಮ ಎರಡೂ ಇದ್ದವು. ಅರಿಶಿನಪುಡಿ ತೊಗೊಂಡು ಅವ್ವನ ಹತ್ರ ಹೋದ.

‘ಅವ್ವ, ತಗೋ ಬಿಸಿ ನೀರಿನ್ಯಾಗ ಅರಿಶಿನ ಪುಡಿ ಹಾಕೀನಿ, ಕುಡಿತಿದ್ರ ಕುಡಿ, ಇಲ್ಲಾ ಬಾಯಿ ಮುಕ್ಕುಳುಸು. ಏನ್ ಮಾಡ್ತಿ ನೋಡು ? ‘ ಎಂದು ಆಕೆಗೆ ಕೊಟ್ಟ.

ಅವ್ವ ಬಾಯಿ ಮುಕ್ಕಳಿಸಲಿಲ್ಲ, ಗಟ ಗಟಾಂತ ಕುಡುದು ಗ್ಲಾಸನ್ನು ಡಬ್ ಹಾಕಿ, ಆಮೇಲೆ ಹೇಳಿದ್ಲು;

‘ಯಪ್ಪಾ, ದಣಕಂಡೀದಿ ಹೋಗಿ ಮಲ್ಕೋ.. ನಾನೂ ಮಲ್ಕೊತೀನಿ ‘ ಎಂದಳು.

‘ಇನ್ನೂ ಸ್ವಲ್ಪ ಹೊತ್ತು ಇಲ್ಲಿ ಇದ್ದು ಆಮೇಲೆ ಹೋಗ್ತೀನಿ.’ ಎಂದ.

‘ಬ್ಯಾಡಪ್ಪ, ಪಾಪ ನಿನ್ನೆಂಡ್ತೀ ದಣಕಂಡಿರುತದ ಹೋಗಪ್ಪ ‘ ಎಂದು ಎಬ್ಬಿಸಿಯೇ ಬಿಟ್ಟಳು.

ಅನಿವಾರ್ಯವಾಗಿ ಆತ ಎದ್ದು ಅಲ್ಲಿಂದ ನಡೆದ.                 ಅಲ್ಲಿಗೆ ಹೋಗುವಷ್ಟರಲ್ಲಿ  ಮಂಕಾಳಮ್ಮನ ಗೊರಕೆ ಶುರು ಆಗಿತ್ತು. ಇನ್ನೇನು ಒಂದು ಬಾರಿ ‘ಮಂಕಾಳಿ ‘ ಎಂದ.  ಆಕೆ ಏಳಲಿಲ್ಲ. ಇನ್ನೊಂದು ಸಾರಿ ಅಲುಗಾಡಿಸಿದ. ಆಗಲೂ ಏಳಲಿಲ್ಲ. ಇರಲಿ ಬಿಡು ಎಂದು ಅಲ್ಲೇ ಆಕೆಯ ಪಕ್ಕದಲ್ಲಿ ಮಲಗಿದ. ಆದ್ರೇ, ಆತನ ಲಕ್ಷ್ಯ ಅವ್ವನ ಕಡೆಗೆಯೇ ಇತ್ತು. ಇನ್ನು ಇಲ್ಲಿ ಮಲಗಿದ್ರೆ ಏನೂ ಪ್ರಯೋಜನ ಇಲ್ಲ ಅಂತ ಅಂದ್ಕೊಂಡು ಮತ್ತೇ ಅವ್ವನ ಖೋಲಿಗೆ ಹೋದ.               ಆಗ ನಿಜವಾಗಿಯೂ ಮಾಂಕಾಳಿಗೆ ನಿದ್ದೆ ಬಂದಿರಲಿಲ್ಲ, ಸುಮ್ಮನೆ ಮಲಗಿದಂತೆ ನಟಿಸಿದ್ದಳು. ಆದರೇ, ರಂಗಣ್ಣ ಆಕೆಯನ್ನು ನಂಬಿದ್ದ.  ಆತ ಹೋದ ಕೂಡಲೇ ಮಂಕಾಳಿ ಎದ್ದು ಕುಳಿತುಕೊಂಡಳು. ಮೆಲ್ಲಗೆ, ಅವ್ವನ ಖೋಲಿ ಕಡೆಗೆ ಹೋಗಿ ಅಲ್ಲಿ ಬಾಗಿಲಲ್ಲಿಯೇ ಮರೆಯಾಗಿ ನಿಂತು ಅವರಿಬ್ಬರು ತನ್ನ ಬಗ್ಗೆ ಏನಾದ್ರೂ ಮಾತಾಡಬಹುದೆಂದು ಅನುಮಾನಿಸಿ, ಕೇಳಿಸಿಕೊಳ್ಳಲು ನಿಂತು, ಅವರಾಡುವ ಮಾತಿನ

ಕಡೆಗೆ ಲಕ್ಷ್ಯಕೊಟ್ಟಳು. ಅವ್ವಗ ಇನ್ನೂ ನಿದ್ದಿ ಹತ್ತಿದ್ದಿಲ್ಲ. ಆದ್ರ ಕೆಮ್ಮು ಸ್ವಲ್ಪ ಕಡಿಮೆ ಆಯಿತು. ರಂಗಣ್ಣಗೆ ಈಗ

ಸ್ವಲ್ಪ ನೆಮ್ಮದಿ ಆಯಿತು.  ಆಗ ಅವ್ವ ರಂಗಣ್ಣನನ್ನು ಕರದಂಗಾಯಿತು ;

‘ಅಪ್ಪ… ನನ್ನಪ್ಪ.. ‘

‘ಏನು ಅವ್ವಾ … ಏನು ಬೇಕಾಗಿತ್ತು. ?’ ಕೇಳಿದ.

‘ನಿನ್ನ ತ್ರಾಸು ಕಡಿಮೆ ಆಗಬೇಕು…. ನಿನ್ನ ಹೆಂಡ್ತಿ ಆರಾಮಾಗಿ ಇರ‍್ಬೇಕು.. ನಿಮ್ಮಿಬ್ಬರಿಗೆ ಒಬ್ಬ ಮಗ

ಬರ‍್ಬೇಕು.. ‘ ಎಂದು ಬಡಬಡಿಸುತ್ತಿದ್ದಳು.

‘ಅವ್ವ, ಹೀಂಗ ನೀ ಈ ರಾತ್ರಿಯೊಳ್ಗ ಹೇಳಿದ್ರ ಅವೇನು ಉದ್ರೇ ಬಿಡ್ತಾವೆನು. ? ಹಂಗ್ಯಾಕ ಮಾತಾಡ್ತೀ ..  ದಣಕಬ್ಯಾಡ.. ನಿದ್ದಿ ಮಾಡು. ನಿನಗ ನಿದ್ದೀ ಹತ್ತಿದ್ರ ನಂಗೂ ನಿದ್ದೀ ಬರತೈತಿ. ನೀ ಬಡ ಬಡಿಸಿದ್ರ ನಾನು ಕೇಳ್ಕೊಂತಾ ಕುಂಡ್ರಬೇಕಾಗ್ತದ. ‘ ಎಂದ.

‘ನನ್ನಪ್ಪ.. ನಿಂಗ ನನ್ಮೇಲ ಎಷ್ಟು ಕಾಳಜಿ.  ನನ್ನ ಜೀವ ಸಣ್ಣಾಗೇದ.  ಅದ್ರ ಜಲ್ದೀ  ಹೋಗೋವಲ್ತು. 

ಆ ದೇವ್ರು ಯಾವಾಗ್ ನನ್ನ ಕರ‍್ಕೊಂತಾನೋ ಏನೋ ?’ ಎಂದಳು.

‘ಏ .. ಬಿಡು ಅವ್ವ.. ಹಾಂಗ ಮಾತಾಡಬ್ಯಾಡ.  ಯಾಕ ನಾನು ನಿನ್ನಾ ಸರಿಯಾಗಿ ನೋಡ್ಕೊಳದಿಲ್ಲ ಏನು ? ನನ್ನೆಂಡ್ತಿ ಸುಮ್ನ ಒದರ‍್ಯಾಡ್ತದ ಅದರ ಹತ್ತರಾನೂ ನಿನ್ಬಗ್ಗೆ ಕಕಲಾತಿ ಅದ ‘ ಎಂದ.

‘ಹೌದಪ್ಪ, ಅದ್ರ ನಿಮ್ಮ ಕೆಲಸ ಬಿಟ್ಟು ಅದೆಷ್ಟು ದಿನ ನನ್ನ ಮುಂದೇನ ಇರ‍್ತೀರಿ. ನಾನ್ ಜಲ್ದಿ

ಹೋಗೋದು ಚೆಲೋ ‘ ಎಂದಳು ಅವ್ವ.

‘ಬಿಡು ಅವ್ವ, ಹಂಗ್ಯಾಕೆ  ಮಾತಾಡ್ತೀ  … ಈಗ ಮಲ್ಕೋ , ನಾಳೆ ಮಾತಾಡೋಣ ‘ ಎಂದು ಹೇಳಿ

‘ಇನ್ನೂ ಸ್ವಲ್ಪ ನೀರು ಬೇಕೇನು ?’ ಎಂದು ಮಾತು ಮರೆಸಿದ. ಆದರೇ ಅವ್ವ ಬಿಡಲಿಲ್ಲ;

‘ನಾಳೆ ನಾನು ಇರ‍್ತೀನೋ ಇಲ್ಲೋ ಯಪ್ಪಾ .. ಇವತ್ತು ನಂಗೊಂದು ಮಾತು ಕೊಡು’ ಎಂದಳು.

‘ಅದೇನು ?’ ಎಂದ ರಂಗಣ್ಣ. 

‘ಅಪ್ಪ … ಮಾಂಕಾಳಿ  ಭಾಳ ಒಳ್ಳೆ ಹುಡುಗಿ.. ನಿನ್ನ ನಂಬಿ ಪ್ರಪಂಚ ಮಾಡಕ್ಕ  ಬಂದಾಳ. ಅದಕ್ಕೂ ಹೆಣ್ಣು ಕನಸು ಅಂತ ಇರ‍್ತದ. ಅದನ್ನ ಗೋಳಾಡಿಸಬ್ಯಾಡ. ಅದರ ಮಾತು ಕೇಳು. ಸರಿಯಾಗಿ ಸಂಸಾರ ಮಾಡು. ಅವಳ ಕಣ್ಣಾಗ ನೀರು ಬರ‍್ಸಬ್ಯಾಡ.  ನಾಳೆ ನಿನ್ ಮಕ್ಳಿಗೆ ಅವಳು ತಾಯಿಯಾಗೋಳು. ಅವಳದೂ ಅಂತ ಒಂದು ಪ್ರಪಂಚ ಅವಳಿಗೆ ಬೇಕು. ಅದ್ಕ ಅವಳನ್ನ ಅಲಕ್ಷ್ಯ ಮಾಡಬ್ಯಾಡ. ಸರಿಯಾಗಿ ನೋಡ್ಕೋ ನನ್ನಪ್ಪ’ ಎಂದಳು.  

ಈ ಮಾತುಗಳನ್ನು ಅವಿತುಕೊಂಡು ಕೇಳುತ್ತಿದ್ದ ಮಾಂಕಾಳಮ್ಮಗೆ ಕಣ್ಣಲ್ಲಿ ನೀರು ಬಂದವು. ತನ್ನ ಅತ್ತೆಯ ಬಗ್ಗೆ ಆಕೆಯ ಕಾಳಜಿ ಅಷ್ಟಕಷ್ಟೇ ಇತ್ತು.  ಆದರೇ ಅತ್ತೆಯ ಮನಸ್ಸು ಈಗ ತಿಳಿಯಿತು. ಆಕೆ ಅತ್ತೆಯಲ್ಲ ತನ್ನ

ತಾಯೀ ಎಂದುಕೊಂಡಳು.  

‘ಅಪ್ಪ… ಇನ್ನೂ ಸ್ವಲ್ಪ ನೀರು ಕುಡಿಸು.. ನನಗ ಬಾಯಾರಿಕೆ ಆಗ್ಯಾದ ‘  ಎಂದಳು ಅವ್ವ. 

ರಂಗಣ್ಣ ಎದ್ದು ಹೋಗಬೇಕೆಂದ. ಅಷ್ಟರಲ್ಲೇ, ಮಾಂಕಾಳಿ  ಅಲ್ಲಿಂದ ಅಡುಗೆ ಮನೆ ಕಡೆಗೆ ಓಡಿ ಹೋದಳು.ಒಂದು ತಂಬಿಗೆಯಲ್ಲಿ  ನೀರು ತುಂಬಿಕೊಂಡು ಲೋಟದೊಂದಿಗೆ ಬಂದಳು. ಅದನ್ನು ನೋಡಿದ ಅತ್ತೆ

ತನ್ನ ಕಣ್ಣು ತುಂಬಿಕೊಂಡಳು. ತನಗೆ ನೀರು ಕುಡಿಸಲು ಸನ್ನೆ ಮಾಡಿದಳು.  ಮಾಂಕಾಳಿ ಅತ್ತೆಯನ್ನು

ಎತ್ತಿ ಆಕೆಯ ತಲೆಯನ್ನು ನೇವರಿಸುತ್ತಾ ತನ್ನ ತೊಡೆಯ ಮೇಲೆ ಇಟ್ಟುಕೊಂಡು,  ಲೋಟದಿಂದ ನೀರು ಕುಡಿಸಲು ಹೋದಾಗ, ಆಕೆಯ ಗಂಡ ;

‘ನನಗೆ ಕೊಡು ನಾನು ಕುಡಿಸುತ್ತೇನೆ ‘ ಎಂದ. ಆದರೇ ಮಾಂಕಾಳಿ ಸರ‍್ರನೇ ಆತನ ಕೈಯನ್ನು ಸರಿಸಿ, ಕಣ್ಣೀರು ಸುರಿಸುತ್ತಾ ತನ್ನತ್ತೆಗೆ ತಾನೇ ನೀರು ಕುಡಿಸತೊಡಗಿದಳು. ಸ್ವಲ್ಪವೇ ಕುಡಿದ ಅತ್ತೆ ಸಾಕು ಎಂದು ಸನ್ನೆ ಮಾಡಿದಳು. ತನ್ನ ಸೊಸೆಯ ತಲೆಯನ್ನು ನೇವರಿಸಿದಳು. ಆಮೇಲೆ ತನ್ನ ಮಗನ ಕೆನ್ನೆಯನ್ನು

ಸವರಿದಳು. ಅವಳು ನಿದ್ದೆ ಹೋದಂತೆ ಅವರಿಗೆ ಅನಿಸಿತು. ಪಾಪ ಮಲಗಲಿ ಎಂದು, ಅವಳಿಗೆ ಮೈ

ತುಂಬಾ ಹೊದಿಸಿ ಗಂಡ ಹೆಂಡತಿ ಇಬ್ಬರೂ ಅಲ್ಲಿಂದ ಹೊರಗೆ ಹೋದರು.

ಇದಾದ ಮೇಲೆ ಮಾಂಕಾಳಿ ಕಣ್ಣೀರು ಸುರಿಸುವದು ಬಿಡಲಿಲ್ಲ. ತಾನು ತಪ್ಪು ಮಾಡಿದ್ದೆನೆ  ಎಂಬ ಪಾಪ ಪ್ರಜ್ಞೆ ಅವಳಿಗೆ ಕಾಡಿತು. ಆಗ, ರಂಗಣ್ಣ ಆಕೆಯನ್ನು ಸಮಾಧಾನಿಸಿದ.

ಆಗಲೇ, ಅವ್ವ ಜೋರಾಗಿ ಕೂಗಿಕೊಂಡ ಹಾಗೆ ಕೇಳಿಸಿತು.  ಇಬ್ಬರೂ ಆಕೆಯ ಬಳಿ ಓಡಿ ಹೋದಾಗ, ಆಕೆ

ಹೊದಿಕೆಯನ್ನು ಕಿತ್ತು ಎಸೆದು ಬಿಸಾಡಿದ್ದಳು.  ಹಾಸಿಗೆಯನ್ನು ಬಿಟ್ಟು ಹಾಸು ಬಂಡೆಯ ಮೇಲೆ ಬೋರಲು ಬಿದ್ದಿದ್ದಳು. ಆಕೆಯನ್ನು ನೋಡಿದ ಮಗ ದಂಗಾದ ! ಆಕೆಯನ್ನು ಅಂಗಾತ ಮಲಗಿಸಿದ. ನೋಡುತ್ತಾನೆ ಬಾಯಲ್ಲಿ ರಕ್ತ ಬಂದಿದೆ.  ಆತ ಗಾಬರಿಯಾದ !

‘ಅವ್ವ… ಅವ್ವ.. ಎದ್ದೇಳವ್ವ ..ನನ್ನವ್ವ .’ ಎಂದು ಅಳುತ್ತಲೇ ಅಲುಗಾಡಿಸಿದ . ಅವ್ವನ ಮೈಯೆಲ್ಲಾ

ತಣ್ಣಗಾಗಿ, ಸಡಿಲಾಗಿತ್ತು.  ಅವಳನ್ನು ತನ್ನ ತೊಡೆಯ ಮೇಲೆ ಹಾಕಿಕೊಳ್ಳಲು ಪ್ರಯತ್ನಿಸಿದ. ಅವ್ವನ ಕೈ, ಕಾಲುಗಳೆಲ್ಲವೂ ಜೋತು ಬಿದ್ದವು, ಅಲ್ಲದೇ ಆಕೆಯ ಕತ್ತು ಕೂಡ ಹೊರಳಿತ್ತು.  ಅವ್ವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು !.

ಇಬ್ಬರೂ ಗೊಳೋ ಎಂದು ಅಳತೊಡಗಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಒಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡೆ ಎಂದು ರಂಗಣ್ಣ ಚಿಂತಾಕ್ರಾಂತನಾದ. ಹಾಗೆಯೇ, ಮಂಕಾಳಮ್ಮ ತನ್ನ ತಾಯಿಯನ್ನು ನಿಜವಾಗಿಯೂ ಇಂದು ಕಳೆದುಕೊಂಡೆ ಎಂದಾಕೆಗೆ ಭ್ರಮೆಯಾಯಿತು !.


ಬಿ.ಟಿ.ನಾಯಕ್,

11 thoughts on “ಬಿ.ಟಿ.ನಾಯಕ್,ಅವರ ಕತೆ ಮಾಂಕಾಳಿ

  1. ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಸಂಭಂದಗಳ ಬೆಸೆಯುವಿಕೆಯಲ್ಲಿ ಹೊಸ ಭಾಶ್ಯ ಬರೆದಂತಿದೆ.

  2. ಮನ ಕಲಕುವ ಕಥೆ. ಹೃದಯ ಹೃದಯಗಳನ್ನು ಬೆಸೆಯುತ್ತದೆ. ಗ್ರಾಮ್ಯಭಾಷೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.

    1. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.

  3. ಕಥೆ ಬಹಳ ಚೆನ್ನಾಗಿದೆ ಎಲ್ಲರ ಮನ ಕಲಕುವಂತಿದೆ .
    ತುಂಬಾ ಚೆನ್ನಾಗಿದೆ

    1. ನಮಸ್ಕಾರ ಮೇಡಮ್. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Leave a Reply

Back To Top