ಕಾವ್ಯ ಸಂಗಾತಿ
ಬಾರೋ ಗೆಳೆಯ
ಅನುರಾಧಾ ಶಿವಪ್ರಕಾಶ್
ಹೋಗಬೇಡ ನಿಲ್ಲು ಅಲ್ಲೆ
ನನ್ನ ಬಾಳ ಗೆಳೆಯನೆ
ಕೂಗುತಿರುವೆ ಮರಳಿ ಬಾರೋ
ಮುರುಟಿತೆನ್ನ ಭಾವನೆ
ಮನದಿ ಮಾತು ತುಳುಕುತಿಹುದು
ಕೇಳು ಇನಿಯ ಈಗಲೇ
ಹೃದಯ ಸೋತು ದಣಿಯುತಿಹುದು
ಕರೆದು ಒಯ್ಯೊ ಜೊತೆಯಲೇ
ಸುಮದ ರಾಶಿ ಮಂದ ಘಮಲು
ಎದೆಯ ದಾಹ ತಣಿಸದು
ನಿನ್ನ ಉಸಿರು ಮೈಯ ಸೋಕೆ
ಒಂಟಿ ಎಂದು ಅನಿಸದು
ವನದ ಸುತ್ತ ನನ್ನ ಗೋಳು
ಮೂಕ ಶೋಕದಂತಿದೆ
ದುಃಖ ಮರೆಸೊ ಮಡಿಲು ಬೇಕು
ಭಾವ ಉಕ್ಕಿ ಹರಿದಿದೆ
ಅರಿತು ನಡೆವ ಬಾಳ ಪಥದಿ
ಮುನಿಸು ಮರೆಗೆ ಸರಿಯಲಿ
ಅಪ್ಪುಗೆಯಲಿ ಒಲವು ಹರಿದು
ಪ್ರೀತಿ ಚಿಗುರಿ ಹಬ್ಬಲಿ