ಕಾವ್ಯ ಸಂಗಾತಿ
ಕಾಯುವದು ಕಾಯಕವಲ್ಲ
ತೆರೆದಿಡು ಹೃದಯ
ಎಳೆಯ ರವಿಯಾಗಿ
ವಸಂತದಿಂಚರವಾಗಿ
ಇಹದ ಪರಿವೆ ಮರೆಸಿ,
ಮುಗ್ಧ ಮುಗುವಾಗಿ ಬಿಡುವೆ
ನಿನ್ನ ನಗುವಿಗೆ ದೀವಿಗೆಯಾಗಿಡುವೆ
ಕಾಯುವದು ಕಾಯಕವೇನಲ್ಲ
ಬರದ ಎದೆಯ ಮೇಲೆ
ನೇಗಿಲು ಹಿಡಿದು,
ತಿಳಿ ಮೋಡದ ಮುಗಿಲಲಿ ಮಳೆ ತರಿಸಿ,
ಕಳೆಯ ನಿಲ್ಲಿಸಿ ಬಿಡುವೆ
ಅಂಗಾಂಗಗಳ ಚೆಲುವಿಕೆಗಲ್ಲ
ಒಡಲ ತುಂಬ ಕಡಲವಿರಿಸಿ,
ಪ್ರೀತಿ ದೋಣಿ ಹರಿಸಿ,
ಕಡಲಾಳದ ಬಸಿರ ತಂದು
ಮಡಿಲಗರ್ಪಿಸಿ,
ಜೋಗುಳ ಹಾಡಿ ಬಿಡುವೆ
ಕವಿತೆಗೆ ಸವಿಯಾಗು
ಮನವ ಶೋಧಿಸಿ ಬಿಡುವೆ
ಸಡಗರದಿ ಬಂದು,
ಅನುರಾಗ ತೊಡಿಸಿ,
ಮನದ ಕಾರ್ಮೋಡದ ಮೇಲೆ ಬೆಳಕ ಹಾಯಿಸಿ ಬಿಡುವೆ.
ಶರಣಪ್ಪ ತಳ್ಳಿ ಕುಪ್ಪಿಗುಡ್ಡ