ತನಗಗಳು, ಸುಜಾತಾ ರವೀಶ್

ಕಾವ್ಯ ಸಂಗಾತಿ

ಸುಜಾತಾ ರವೀಶ್

ತನಗಗಳು

೧)

ಹೊಸದು ಈ ಪ್ರಕಾರ 
ಹೇಳುತಿದೆ ಆಕರ 
ಬರೆಯಲು ಆತುರ 
ಓದುವರಿರುವಿರಾ?

(೨)

ಸಾಲಲಿ ಏಳಕ್ಷರ 
ಅಂತಹ ನಾಲ್ಕುಸಾಲು
ಕವಿಮನ ಬರೆಯೆ 
ತನಗವು ಹುಟ್ಟಲಿ

(೩)

ಹುಟ್ಟಬೇಕು ಕವಿತೆ 
ತಾನಾಗಿ ತಾನು ಮೂಡಿ 
ಪದಗಳನು ಅರಸಿ 
ಹೋಗದೆ ತಡಕಾಡಿ 

(೪)

ತನಗ ಬರೆಯಲು 
ರವೀಂದ್ರರ ಸವಾಲು 
ಬರೆದೆ ನಾಲ್ಕು ಸಾಲು 
ಓದಿ ನೀವು ತಿದ್ದಲು 

(೫)

ತೊಳೆದು ತಮ ಕೊಳೆ 
ಬೆಳಗಲೆಂದು ಇಳೆ 
ಸದಾ ವ್ಯಸ್ತ ಈ ಸೂರ್ಯ 
ನಿಲಿಸನೆಂದೂ ಕಾರ್ಯ 

(೬)
ಕತ್ತಲ ತೆರೆಯನು 
ಸರಿಸುತ ಉದಯ 
ಮೆಲ್ಲ ಬರುತಿಹನು 
ನೋಡು ಧರೆ ಗೆಳೆಯ 

(೭)
ಬದುಕು ಬಲು ಭಾರ 
ತಾಪವು ಘನಘೋರ
ತಾಪತ್ರಯ ಭರಿತ 
ನೋವ ಚೂರಿ ಇರಿತ 

(೮)
ಬದುಕೇ ಅಲೆದಾಟ 
ಬವಣೆಯ ಜಂಜಾಟ
ದಿನದಿನ ಹೋರಾಟ 
ಸುಖಕೇ ಪರದಾಟ 

(೯)
ಲಂಚದ ಕರಾಮತ್ತು 
ಎಲ್ಲೆಲ್ಲೂ ರುಷವತ್ತು 
ನೀಡದಿರೆ ಆಪತ್ತು 
ಕೊಡದವಗೆ ಕುತ್ತು 

(೧೦)

ತನ್ನಂತೆಯೇ ಪರರು 
ಎಂದು ಅರಿಯದವರು 
ತಾವು ಬಿತ್ತಿದ ಬೆಳೆ 
ಭುಜಿಸಬೆಕು ತಾವೇ 

(೧೧)

ಮನದೆ ದೇಶಭಕ್ತಿ 
ತಂದಿದೆ ನವಶಕ್ತಿ 
ರಾಷ್ಟ್ರಪ್ರೇಮದ ಜ್ಯೋತಿ 
ತುಂಬಿದೆ ಹೊಸ ಸ್ಫೂರ್ತಿ

(೧೨)

ಬಂದಿದೆ ಚುನಾವಣೆ 
ಮುಗಿಯದ ಬವಣೆ 
ಗೆದ್ದವರ ನಲಿವು 
ಸೋತವರಿಗೆ ನೋವು  

(೧೩)

ಕಂದನ ಸಿಹಿ ನಗೆ 
ಮಧುರ ಆ ಅಪ್ಪುಗೆ 
ಸಾಟಿಯಾವುದದಕೆ
ಸಗ್ಗ ಹೋಲ್ವ ಸುಖಕೆ 

(೧೪)

ಭಾವಗಳ ತನನ 
ಪದಗಳ ಜೋಡಣ 
ಓಡುತಿದೆ ಸರಾಗ 
ಮೂಡಿತಲ್ಲಿ ತನಗ 

(೧೫)

ಕರವ ಪಿಡಿದಿರೆ 
ಬಲವಾಯ್ತು ಬೆಸುಗೆ
ನಯನಗಳು ಕೂಡಿ
ಬರೆದಾಯ್ತು ಒಸಗೆ


One thought on “ತನಗಗಳು, ಸುಜಾತಾ ರವೀಶ್

  1. ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top