ಗಝಲ್
ದಾಕ್ಷಾಯಣಿ ವೀ ಹುಡೇದ.
ಗಜಲ್
ಕರಗಿ ನೀರಾದ ನೆನಪುಗಳಲಿ ಚಂದ್ರನ ಹುಡುಕುವುದನು ನಿಲ್ಲಿಸು ಸಖಿ
ನಿರ್ಜೀವ ದಿಂಬಿನೊಡನೆ ಮಾತಾಡಿ ನೋವ ಕಳೆಯುವುದನು ನಿಲ್ಲಿಸು ಸಖಿ
ಜಗಕೆ ತಿಳಿದೀತೆಂದು ಕದವಿಕ್ಕಿ ಸದ್ದಿಲ್ಲದೇ ಅತ್ತ ಘಳಿಗೆಗಳ ಲೆಕ್ಕವಿಟ್ಟಿಲ್ಲ ಯಾರೂ
ಕುದಿವ ಮನಸಿಗೆ ಕದ್ದು ಅಳುವ ರೂಢಿಯನು ನಿಲ್ಲಿಸು ಸಖಿ
ಅತ್ತು ಹಗುರಾಗು,ಬಚ್ಚಿಟ್ಟ ಸತ್ಯಗಳು ಬೆತ್ತಲಾಗಲಿ
ಅವನ ವಂಚನೆಗಳಿಗೆ ಪರದೆ ಹಾಕುವುದನು ನಿಲ್ಲಿಸು ಸಖಿ
ಸಖನ ಲೋಕದಲಿ ಜಾಗ ಹುಡುಕುವ ಪ್ರಯತ್ನ ಮೂರ್ಖತನದ್ದು
ರಮಿಸಲಿ ಎಂದು ಬೆನ್ನು ಬಿದ್ದು ಕಾಡುವುದನು ನಿಲ್ಲಿಸು ಸಖಿ.
ಸಖನ ಕಣ್ಣುಗಳಲ್ಲಿ ಹದ್ದೊಂದು ಹಾರುವುದ ಕಂಡೆಯಾ
ಅವನಿಲ್ಲದಾಗ ದಿಕ್ಕೆಟ್ಟು ಮನಸಿಗೆ ಪಾತಕ ಅಂಟಿಸಿಕೊಳ್ಳುವುದನು ನಿಲ್ಲಿಸು ಸಖಿ
ಹೆರಲಾಗದ ಹೊರಲಾಗದ ಪುರುಷನ ಹೆಗಲ ಮೇಲೆ ಜವಾಬ್ದಾರಿ
ಅವಸರದ ಸಡಗರಕೆ ಸಬೂಬಿನ ಮಾತಿಗೆ ಮರುಳಾಗುವುದನು ನಿಲ್ಲಿಸು ಸಖಿ
ಮಧುವಂತಿ ದಾಚಿಯ ಸಂಘರ್ಷದ ಪಯಣಕೆ ಜೊತೆಯಾಗು ನೀನು ಸಖಿ
ಇನ್ನಾದರೂ ಈ ಸಂಚಿಗೆ ಬಲಿಯಾಗುವುದನು ನಿಲ್ಲಿಸು ಸಖಿ
***********