ಕಾವ್ಯ ಸಂಗಾತಿ
ನಾನವಳಲ್ಲ
ರೋಹಿಣಿ ಯಾದವಾಡ
ಅಗಸನ ಮಾತು ಕೇಳಿ
ಅಗ್ನಿ ಹಾಯಿಸಿ ಕಾಡಿಗಟ್ಟಿದ
ರಾಮನ ಹೆಂಡತಿ ಸೀತೆಯಂತವಳಲ್ಲ ನಾ
ಜೂಜಾಡಿ ಸೋತಾಗ
ಸೆರಗಿಡಿದು ಎಳೆವಾಗ
ದುಷ್ಟರ ನಾಶಕ್ಕೆ ನಾಂದಿ ಹಾಡಲು
ಮುಡಿಬಿಚ್ಚಿ ಶಪತಗೈದ
ಮಹಾಭಾರತದ ದ್ರೌಪದಿಯಂತೆ ತಿಳಿ..
ಹೊತ್ತು ಹೆತ್ತು ತುತ್ತು ನೀಡಿ
ಸಾಕಿ ಸಲುಹುವ ತಾಯಿಯಷ್ಟೇ ಅಲ್ಲ
ಭ್ರಷ್ಟ ಕಪಟಿಗಳ ಸದ್ದಡಗಿಸುವ
ಬಂಧೂಕದಾರಿ ಪೊಲೀಸ್ ಅಧಿಕಾರಿ
ಕಿರಣ ಬೇಡಿಯಂತೆಯೂ ತಿಳಿ…
ಮನೆಯೊಳಗಿನ ಅಡುಗೆಯೂ ಗೊತ್ತು
ಮನೆಯಂಗಳದ ಕೆಲಸವು ಬಲ್ಲೆ
ಮಂಗಳ ಗೃಹದಂಗಳದಲಿ
ಅಡಿಯೂ ಇಡಲು ಬಲ್ಲೆ
ಗೃಹಕೃತ್ಯಕ್ಕೆ ಮಾತ್ರ ಮೀಸಲೂ ನಾನಲ್ಲ
ಗೃಹಖಾತೆ ನಿಭಾಯಿಸಿ ಪ್ರಧಾನಿಯಾಗಿ
ದೇಶವನಾಳಲು ಬಲ್ಲೆ ತಿಳಿ…
ಕುಟುಂಬ ನಿರ್ವಹಿಸಿ ಬೆಳೆಸುವ
ಕಲೆಗಾರತಿಯಷ್ಟೇ ಅಲ್ಲ ನಾ
ಸೇನಾಪಡೆಯ ಮುಖ್ಯಸ್ಥಳಾಗಿ
ದೇಶದ ರಕ್ಷಣೆ ಹೊಣೆ ಹೊತ್ತವಳು ನಾನೀಗ ತಿಳಿ…
ಕಣ್ಣಿರು ಹಾಕುವೆನೆಂದರೆ
ಅಳುಮುಂಜಿ ಅಸಹಾಯಕಳಲ್ಲ
ಅಳುವವರ ಕಣ್ಣೋರಸಿ
ಬದುಕು ಕಟ್ಟಿಕೊಳ್ಳುವ
ಅವಕಾಶ ನೀಡುವ ಉದ್ಯಮಿ ಸುಧಾಮೂರ್ತಿಯಂತೆಯೂ ತಿಳಿ….
ಸಂಪ್ರದಾಯಕ್ಕೆ ಜೊತು ಬಿದ್ದವಳಲ್ಲ
ವಿಜ್ಞಾನ ವೈಚಾರಿಕ ಅರಿವಿನಲಿ
ಮೂಢನಂಬಿಕೆ ಗೊಡ್ಡುಸಂಪ್ರದಾಯಕೆ
ಇತಿಶ್ರೀ ಹಾಡುವ ವಿಚಾರವಂತೆಯೂ ತಿಳಿ…
ಅಬಲೆ ಶೋಷಿತೆ ಅಮಾಯಕಿ ಅಸಮರ್ಥಳಲ್ಲ
ಸಬಲೆ ದಿಟ್ಟೆ ಆಶಾವಾದಿ ಸಮರ್ಥಳು ತಿಳಿ
ಎಲ್ಲದಕೂ ತಲೆಯಲ್ಲಾಡಿಸಿ
ಮೌನವೇ ಒಪ್ಪಿಗೆ ಎನ್ನುವವಳಲ್ಲ
ನನ್ನಿರಿವಿನ ಅಸ್ಮಿತೆ ತೋರುವ
೨೧ ನೇ ಶತಮಾನದ ನಾರಿಚೇತನ ತಿಳಿ..
ನಿಮ್ಮ ಶೋಷಣೆಗೆ ಬಲಿಯಾಗುವವಳು ನಾನಲ್ಲ
ತುಳಿದಷ್ಟು ಚಿಗುರುವ ಗರಿಕೆಯಂತೆ ನಾ
ನಾನವಳಲ್ಲ ನಾನು ನಾನೇ.
ವಾವ್ ಸೂಪರ್ ಆಗಿದೆ ಕವಿತೆ ಮೇಡಂ
ಚೆನ್ನಾಗಿದೆ