ಇಡ್ಲಿಯಿಂದ ಅಡ್ವರ್ಟೈಸಮೆಂಟಿಗೆ, ಸವಿತಾ ಇನಾಮದಾರ್ ಅನುಭವ

ಅನುಭವ ಕಥನ

ಇಡ್ಲಿಯಿಂದ ಅಡ್ವರ್ಟೈಸಮೆಂಟಿಗೆ

ಸವಿತಾ ಇನಾಮದಾರ್

ಇಡ್ಲಿಯಿಂದ ಅಡ್ವರ್ಟೈಸಮೆಂಟಿಗೆ.

ಅಪರೂಪದ ಅವಕಾಶ ಬಾಗಿಲು ತಟ್ಟುವುದು ಮೆಲ್ಲಗೇ.

ಸಿನೇಮಾ ಥೇಟರಿನಲ್ಲಿ ಇಲ್ಲಾ ಟೀವಿಯಲ್ಲಿ ಒಳ್ಳೇ ಧಾರಾವಾಹಿಯ ಸಮಯದಲ್ಲಿ ಮಧ್ಯಮಧ್ಯ 10 ರಿಂದ 30 ಸೆಕೆಂಡುಗಳವರೆಗೆ ಬರುವ ಅನೇಕ ಜಾಹಿರಾತುಗಳನ್ನ ನೋಡಿ ಬೈತಾ ಕೂಡ್ತಿವಿ ಅಲ್ವಾ. ಆದ್ರೆ ಅದರ ಹಿಂದಿನ ಶ್ರಮ ನನ್ನ ಹಾಗೆ ಕಷ್ಟ ಪಟ್ಟವರಿಗೇ ಗೊತ್ತು.

ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿನ ‘ಆರೋಹಿ ಸಿನೆಮ್ಯಾಟಿಕ್ಸ’ ನಲ್ಲಿ ಸಹಾಯಕ ನಿರ್ದೇಶಕಿಯಾಗಿ,  ಸ್ಕ್ರಿಪ್ಟ್ ರೈಟರಾಗಿ ಮತ್ತು ನಟಿಯಾಗಿ ಅಭಿನಯಿಸುವ ಒಂದು ಅಪೂರ್ವ ಅವಕಾಶ ದೊರಕಿತ್ತು.

BSNL ನ ಮೂರು ವಿವಿಧ ಸೇವೆಗಳಿಗೋಸ್ಕರ ಎಂಟು ಭಾಷೆಗಳಲ್ಲಿ ಅಂದ್ರೆ- ಕನ್ನಡ. ಹಿಂದಿ, ತಮಿಳು, ತೆಲಗು, ಮಲಯಾಳಿ, ಬಂಗಾಳಿ, ಗುಜರಾತಿ ಮತ್ತು ಹರಿಯಾಣವಿ ಭಾಷೆಗಳಲ್ಲಿ ಜಾಹಿರಾತನ್ನು ಶೂಟ್ ಮಾಡಬೇಕಾಗಿತ್ತು. ಮೂರು ವಿವಿಧ ಜಾಹಿರಾತುಗಳಿಗಾಗಿ ಪ್ರತಿಯೊಂದು ಭಾಷೆಯಿಂದ ಆರು-ಆರು  ಮಾಡೆಲ್ಲುಗಳನ್ನ ಅಂದ್ರೆ  ಒಟ್ಟು 48 ಮಾಡೆಲ್ಲುಗಳನ್ನ ಆಯ್ಕೆ ಮಾಡುವ ಮಹಾನ್ ಕೆಲ್ಸ ನನ್ನ ಭುಜದ ಮೇಲಿತ್ತು. ಸ್ಕ್ರಿಪ್ಟ್ ಬರೆದ ಬಳಿಕ ಈ ಜಾಹಿರಾತುಗಳನ್ನ  ಅತ್ಯಂತ ಪ್ರಸಿದ್ಧ ಮಾಡೆಲ್ಲುಗಳನ್ನ ಬಳಸದೇ ಮಾಡೋಣ ಎಂದು  BSNL ನ ಜನರಲ್ ಮ್ಯಾನೇಜರ್ ವಿ.ಕೆ ಶರ್ಮಾ ಅವರೊಂದಿಗೆ 2-3 ಬಾರಿ ಮೀಟಿಂಗ್ ಮಾಡಿ ಒಪ್ಪಿಸಿದ್ವಿ.

ಮುಖಪುಸ್ತಕ, ರೇಡಿಯೋ ಮತ್ತು ಪೇಪರುಗಳಲ್ಲೆಲ್ಲಾ  ಇದರ ಬಗ್ಗೆ ವಿವರವಾದ ಜಾಹಿರಾತನ್ನ ಕೊಟ್ಟಿದ್ವಿ. ಇದೇನು ಸುಲಭ ಕೆಲ್ಸಾ ಅಂದುಕೊಂಡ್ರಾ… ಆದ್ರೂ ಏನೋ ಒಂದು ತರಹದ ಥ್ರಿಲ್ ಮತ್ತೆ ಚಾಲೇಂಜ್ ಇತ್ತಲ್ಲ ಅದು ನನ್ನ ಮತ್ತು ಯುವ ನಿರ್ದೇಶಕ ಆದಿತ್ಯ ಜಸ್ಸಿಯನ್ನ ನಮ್ಮ ಗುರಿ ಮುಟ್ಟೋಕೆ ನೆರವಾಯ್ತು. ವಾರದೊಳಗೆ ನಮಗೆ ಭಾರೀ ಪ್ರತಿಕ್ರಿಯೆಗಳ ಜೊತೆಗೆ ಫೋಟೋಗಳೂ ಬಂದವು. ನಮಗಿದರಲ್ಲಿ ಸಾಮಾನ್ಯವಾಗಿ ಕಾಣುವ ಜನರೇ ಬೇಕಾಗಿತ್ತು. ಮೊದಲ ದಿನ 75 ಜನರ ಆಡಿಶನ್ ಮಾಡಿದ್ವಿ.  ಮೂರೂ ಸೇವೆಗಳ ಕಲಾವಿದರಿಗೆ ಬೇರೆ-ಬೇರೆ ಸಮಯ ನಿಗದಿಪಡಿಸಿದ್ವಿ. ಎಲ್ಲರಿಗೂ ಮೊದಲೇ ಸ್ಕ್ರಿಪ್ಟ್ ಕೊಟ್ಟ ಕಾರಣ ನನಗೆ ಮತ್ತೆ ಮತ್ತೆ ತಿಳಿಸಿ ಹೇಳಬೇಕಾಗಿ ಬರಲಿಲ್ಲ.  ಕೆಲವು ಕಲಾವಿದರ ಅಭಿನಯ ನೋಡಿ ಒಂದೇ ಟೇಕಿಗೆ ಅವ್ರನ್ನ ಓಕೆ ಮಾಡಿದ್ವಿ. ಆದ್ರೆ ಇನ್ನೂ ಕೆಲವ್ರು ರೇಡಿಯೋದಲ್ಲೆಲ್ಲಾ ಕೆಲ್ಸಾ ಮಾಡಿ ಅನುಭವಸ್ತರಾಗಿದ್ದರೂ ಸಹ ಕೆಮೆರಾದ ಮುಂದೆ  ಡೈಲಾಗ್ ಮರೆತು ಬೆವತು ಹೋಗಿದ್ರು. ಆದರೂ ಅವರಿಗೆ ಸ್ವಲ್ಪ ಸಮಯ ಕೊಟ್ಟು ಮತ್ತೊಂದು ಚಾನ್ಸ್ ಕೊಡ್ತೀವಿ ಅಂತ ಹೇಳಿ ಮಾರನೆ ದಿನ ಬರಲು ಹೇಳಿದೆವು. ಸಂಜೆ ಶಾರ್ಟ್ ಲಿಸ್ಟ್ ಮಾಡಿದಾಗ  ಕೇವಲ 22 ಜನರು ಮಾತ್ರ ಆಯ್ಕೆಯಾಗಿದ್ರು. ಇನ್ನೂ 2 ದಿನಗಳಿವೆಯಲ್ಲ ಎಂಬ ಭರವಸೆಯಿಂದ ಮನೆಗೆ ಬಂದೆ.

          ದೆಹಲಿಯಲ್ಲಿ ಎಲ್ಲಾ ರಾಜ್ಯದಿಂದ ಬೇಕಾಷ್ಟು ಜನರು ಬಂದು ನೆಲೆಸಿದ್ದರೂ ಪ್ರಾದೇಶಿಕ ಭಾಷೆಯಲ್ಲಿ, ನಮಗೆ ಬೇಕಾದಂತಹ ಮಾಡೆಲ್ಲುಗಳು ಸಿಕ್ಕೋದು ಕಷ್ಟಸಾಧ್ಯವೇ ಹೌದು.  ನಾನು ಮುಂದಿಟ್ಟ ಹೆಜ್ಜೆಯನ್ನ ಎಂದೂ ಹಿಂತೆಗೆಯೋದಿಲ್ಲ. ನೀರಲ್ಲಿ ಬಿದ್ದ ಬಳಿಕ ದಡ ಮುಟ್ಟಲೇ ಬೇಕಲ್ಲವೇ? ಸರಿ ಈ ಸವಾಲನ್ನೂ ಎದುರಿಸೋಕೆ ಮತ್ತೆ ತಯಾರಾದೆ.

ಎರಡನೇ ದಿನ 80 ಜನರು ಆಡಿಶನ್ನಿಗೆ ಬರುವವರಿದ್ದರು. ಬೆಳಿಗ್ಗೆ 8 ಕ್ಕೆ ನಮ್ಮ ಕೆಲ್ಸಾ ಆರಂಭಿಸಿದೆವು. ಆದ್ರೆ ಇಂದು ಕೇವಲ ನಿರಾಶೆ ನಮ್ಮ ಪಾಲಿಗೆ ಕಾಯ್ತಾ ಇತ್ತು.  ಸಂಜೆಯವರೆಗೆ ಆಡಿಶನ್ನಿಗೆ ಕೇವಲ 45 ಜನ ಮಾತ್ರ ಬಂದಿದ್ದರು. ಇವರಲ್ಲಿ ನಮಗೆ ಸಿಕ್ಕವರು ಕೇವಲ 10 ಮಾಡೆಲ್ಲುಗಳು. ಒಟ್ಟು ನಮಗೀಗ 32 ಕಲಾವಿದರು ದೊರಕಿದ್ರು. ಇನ್ನು ಉಳಿದದ್ದು ಒಂದೇ ದಿನ.  ಜನ ಸಿಗದೇ ಹೋದ್ರೆ ಹ್ಯಾಗಪ್ಪ ಮಾಡೋದು ಅಂತ ಯೋಚಿಸುತ್ತ ಎಲ್ಲರೂ ಒಬ್ಬರಿಗೊಬ್ಬರು ಸಮಾಧಾನ ಹೇಳುತ್ತ ಮನೆಗೆ ಹೋದೆವು.

ನಮ್ಮ ಮೊದಲೆನ ಜಾಹಿರಾತು- BSNL 3g network ನ ‘Free night calling service’ ಗೆ ತಾಯಿ ಮತ್ತು ಮಗಳು ಬೇಕಾಗಿದ್ರು. ಕನ್ನಡದ ಜಾಹಿರಾತಿಗೆ ನಾನೇ ಅಮ್ಮ ಆಗಿದ್ದೆ. ಮತ್ತೊಮ್ಮೆ ನನ್ನ ಮಗಳಾಗಿ Vandana Rai ಆಯ್ಕೆಆಗಿದ್ದಳು. ಇನ್ನೂ 7 ಜನ ಅಮ್ಮಂದಿರ್ರು ಬೇಕಾಗಿದ್ದರು. ಅಂತೂ ಇಂತೂ ಮೊದಲ ಎರಡು ದಿನಗಳಲ್ಲಿ ಐದು ಭಾಷೆಯ ಅಮ್ಮಂದಿರೇನೋ ಸಿಕ್ಕಿದ್ದರು. ಇನ್ನು ತಮಿಳು ಮತ್ತು ಹರಿಯಾಣವಿಯ ಅಮ್ಮಂದಿರಿನ್ನೂ ಸಿಕ್ಕಿರಲಿಲ್ಲ. 

ನನ್ನ ಅಸಿಸ್ಟೆಂಟ್ ದಿವ್ಯಾ – ‘ಮ್ಯಾಡಮ್ ಎರಡು ದಿನದಿಂದ ಒಬ್ಬ ತಮಿಳು ಹುಡುಗಿ ತನ್ನ ತಾಯ ಜೊತೆಗೆ ಬರ್ತಾ ಇದ್ದಾಳೆ. ಆದ್ರೆ ಆಕೆ ಇನ್ನೂಅರೆಗೂ ಆಡಿಶನ್ ರೂಮಿಗೆ ಕಾಲಿಟ್ಟಿಲ್ಲ. ಕೇವಲ ತನ್ನ ಹೆಸರನ್ನ ಇಲ್ಲಿ ನೊಂದಾಯಿಸಿ ಹೊರಗಡೆ ಕೂತಿರ್ತಾಳೆ. ಛೇ..ಎಂಥಾ ಜನಾನೋ’ ಅಂದ್ಲು. ಅದಕ್ಕೆ ನಾನೂ ಹೆಚ್ಚಿಗೆ ಮುತುವರ್ಜಿ ವಹಿಸದೇ

‘ಓ ಹೌದಾ.. ಸರಿ ಬಿಡು..ಆಕೆಗೆ ಯಾವಾಗ ಬರಬೇಕೆನಿಸುತ್ತೋ ಆವಾಗ ಬರಲಿ’ ಅಂತ ಹೇಳಿ ಮುಂದಿನ ಮಾಡೆಲ್ಲಿನ ಮುಖ ನೋಡಿದೆ. ಹರಿಯಾಣವಿಯ ಅಮ್ಮನ ಪಾತ್ರಕ್ಕಾಗಿ ಸುಂದರವಾದ ಮಹಿಳೆಯೊಬ್ಬರು  ಕ್ಯಾಮೆರಾ ಮುಂದೆ ನಿಂತಿದ್ದರು. ಒಂದೆರಡು ಬಾರಿ  ಸ್ಕ್ರಿಪ್ಟ್ ನೋಡಿ ಬೆವರೊರಿಸಿಕೊಂಡ್ರು. ನಾನವರ ಬಳಿ ಹೋಗಿ- ‘ಆಪಕಾ ದುಪ್ಪಟ್ಟಾ ಬಹುತ್ ಸುಂದರ್ ಹೈ’ ಅಂತಾ ಹೇಳಿ ಮತ್ತೆ ಮತ್ತೆ ನನ್ನ ಜಾಗಕ್ಕೆ ಬಂದು ಕುಳಿತೆ. ಆಕ್ಷನ್ ಅಂತ ಹೇಳುತ್ತಲೇ ಆಕೆ ಬಡಾಬಡಾಂತ ಎಲ್ಲಾ ಡೈಲಾಗ್ ಹೇಳಿ ನನ್ನ ನೋಡಿ ನಸುನಕ್ಕಳು. ಅಬ್ಬಾ.. ಅಂತೂ ಮುಗೀತಲ್ಲಾ ಅನ್ನೋಹಾಗಿತ್ತು ಆಕೆಯ ಮುಖಭಾವ. ನನಗೂ ಖುಶಿಯಾಯ್ತು ‘ಪರವಾಗಿಲ್ಲಾ..ಚೆನ್ನಾಗಿ ಡೈಲಾಗ್ ಹೇಳಿದ್ರಿ’ ಅಂತ ನಾನೂ ಹೆಬ್ಬೆಟ್ಟು ತೋರಿಸಿದಾಗ ಆಕೆ ಬಂದು ನನ್ನ ಕೈಗೆ ಮುತ್ತು ಕೊಟ್ಟಳು. ಕೇವಲ ಒಂದು ಪ್ರೋತ್ಸಾಹದ ಮಾತು ಮತ್ತು ನಗೆಯಲ್ಲಿ ಎಂಥಾ ಶಕ್ತಿ  ಇರುತ್ತೆ ಅಂದ್ರೆ ಇಂದು ನಾವಿಬ್ರೂ ತುಂಬಾ ಆತ್ಮೀಯ ಸ್ನೇಹ್ಜಿತೆಯರಾಗಿದ್ದೀವಿ.

ಇದಾದ ಬಳಿಕ ಮದ್ಯಾಹ್ನದವರೆಗೆ ಯಾವುದೇ ಶುಭಶಕುನ ಸಿಗಲಿಲ್ಲ. ಇನ್ನೂ 30 ಜನರು ಹೊರಗೆ ಕಾಯ್ತಾ ಇದ್ರು. ಯಾಕೋ ಆಡಿಶನ್ ರೂಮಲ್ಲಿ ಕೂತೂ ಸಾಕಾಗಿ ಹೋಗಿತ್ತು. ಸತತವಾಗಿ ಮೂರು ದಿನ. ನಾನು ಸ್ವಲ್ಪ ಬ್ರೇಕ್ ತೊಗೋಬೇಕೂಂತ ಹೊರಗೆ ಬಂದೆ.  ಎರಡು ದಿನದಿಂದ ಆಫೀಸಿನ ಹೊರಗೆ ಏನೆಲ್ಲಾ ನಡೀತಿದೆ ಅಂತ ಗಮನಿಸೋಕೂ ಪುರಸೊತ್ತಿರಲಿಲ್ಲ. ಕ್ಯಾಮೆರಾ ಮೆನ್ ಪುರು ಹೊರಗೆ ಹೋಗಿದ್ರು. ಸರಿ ನಾನೂ ಹೊರಗೆ ಬಂದೆ. ಅದೆಷ್ಟೋ ಜನರು ತಮ್ಮ ಕಾಲ್ ಗಾಗಿ ಕಾಯ್ತಾ ಕೂತಿದ್ರು. ಇನ್ನು ಕೆಲವ್ರು ತಮ್ಮೊಂದಿಗೆ ಬಂದವರ ಜೊತೆಗೆ ಡೈಲಾಗ್ ಹೇಳೊದ್ರಲ್ಲಿ ಮಗ್ನರಾಗಿದ್ದರು. ನನಗೆ ಎಲ್ಲೂ ಕುಳಿತುಕೊಳ್ಳೋದಕ್ಕೆ ಜಾಗಾನೇ ಇರಲಿಲ್ಲ. ಬಿಸಿಲ ತಾಪ ಬೇರೆ. ಅದಕ್ಕೇ ಆಫೀಸಿನ ಹಿಂಬದಿಗೆ ಹೋದೆ. ಸ್ವಲ್ಪ ಜನರಿದ್ದ ಕಾರಣ ಬೇವಿನ ಮರದಡಿಯಲ್ಲಿ ಕುಳಿತೆ.

ಅಲ್ಲಿ  ಒಬ್ಬ ಮಹಿಳೆ ಡೈಲಾಗನ್ನ ಹ್ಯಾಗೆ ಹೇಳಬೇಕೂಂತ ಇನ್ನೊಬ್ಬ ಹುಡುಗಿಗೆ ಕಲಿಸಿಕೊಡ್ತಾ ಇದ್ಲು. ಅರೇ ವಾಹ್, ಇದೇನಪ್ಪಾ ಯಾವ ಭಾಷೆಯ ಟ್ರೇನಿಂಗ್ ನಡೀತಿದೆ ಇಲ್ಲಿ ಅಂತ ನೋಡುವ ಕುತೂಹಲದಿಂದ ನಾನೂ ಅವರಿದ್ದಲ್ಲಿಗೆ ಹೋದರೂ ಮತ್ತೊಂದೆಡೆಗೆ ನೋಡುತ್ತಾ ಕುಳಿತೆ. ಆಕೆ ನಾನು ಬಂದು ಕುಳಿತದ್ದ ನೋಡಿದ್ರೂ ತನ್ನ ಕೆಲಸ ನಿಲ್ಲಿಸಲಿಲ್ಲ.  ಸ್ವಲ್ಪ ಸಮಯ ಬಳಿಕ ಆಕೆಯ ಹಾವಭಾವವನ್ನು ನೋಡಿ ಅವರತ್ತ ತಿರುಗಿದೆ. ಆಗ ಆಕೆ- ‘ಮ್ಯಾಡಮ್ ಜಿ , ಆಪ್ ಭೀ ಆಡೀಶನ್ ಕೆಲಿಯೆ ಆಯೆ ಹೋ? ಅಂತ ಕೇಳಿದಳು. ಅದಕ್ಕೆ ನಾನು ಸುಮ್ಮನೇ- ಜೀ ಹಾಂ..ಆಅಯೀ ತೋ ಹೂಂ, ಪರ್ ಪತಾ ನಹೀ ಮೈಂ ಕರ್ ಪಾವೂಂಗಿ ಯಾ ನಹೀ’ ( ಹೌದು..ನಾನೂ ಬಂದಿದ್ದೀನಿ, ಆದ್ರೆ ನನ್ನಿಂದ ಈ ಡೈಲಾಗನ್ನೆಲ್ಲಾ ಹೇಳೋಕೆ ಆಗುತ್ತೋ ಇಲ್ಲೋಂತ ಗೊತ್ತಿಲ್ಲ’) ಅಂದೆ. ಆಕೆ ನಗುತ್ತ- ‘ಅಯ್ಯೋ ಮೇಡಮ್..ಗಬರಾನಾ ನಹೀ ಜೀ.. ಆಪಕಾ ಹೋ ಜಾಯೇಗಾ..ಪಕ್ಕಾ’ ಅಂತ ಪ್ರೋತ್ಸಾಹಿಸಿದ್ಲು. ನಾನದಕ್ಕೆ- ಅಚ್ಛಾ.. ಥ್ಯಾಂಕ್ಯೂ.. ನೀವೂ ಸಹ ಆಡೀಶನ್ನಿಗೋಸ್ಕರ ಬಂದಿದ್ದೀರಾ? ನಿಮ್ಮ ಹೆಸರೇನು’ ಅಂತ ಕೇಳಿದೆ. ಅದಕ್ಕವಳು ನಾಚುತ್ತ- ಅಯ್ಯೋ ನಹೀ ಮೇಡಮ್ ಜಿ.. ನಾನು ಆಡೀಶನ್ನಿಗೋಸ್ಕರ ಬಂದಿಲ್ಲ. ನನ್ನ ಹೆಸ್ರು ಕಮಲಾ ವಿಜಯ್ ಅಂತ. ನಾನು ಇಡ್ಲೀ ಮಾಡಿ ಮಾರ್ತೀನಿ,  ಮತ್ತೆ ಇಡ್ಲಿಯ ಆರ್ಡನ್ನೂ ಕೊಟ್ರೆ ಅದನ್ನೂ ತರ್ತೀನಿ. ನೀವೂ ಸೌಥ್ ಇಂಡಿಯಾದವ್ರಾ ? ನಿಮ್ಮ ಫಂಕ್ಷನ್ನಿನಲ್ಲಿ ಮಲ್ಲಿಗೆ ಹೂವಿನ ಮಾಲೆ ಬೇಕೂಂದ್ರೆ ಹೇಳಿ, ನಾನು ನೀವ ಹೆಳಿದಲ್ಲಿಗೆ ತಂದು ಕೊಡ್ತೀನಿ.’ ಅಂತ ಹೇಳಿದಳು.  ನಿರ್ಮಲ ಮನಸಿನ, ಮುಗ್ಧ ಮುಖದ ಕಮಲಾಳನ್ನು  ನೋಡಿ ನನಗೆ ಖುಶಿಯಾಯ್ತು. ‘ಓ ಹೌದಾ.. ನನಗಂತೂ ಮಲ್ಲಿಗೆ ಅಂದ್ರೆ ಪ್ರಾಣ. ನಾನು ನಿಮಗೆ ಬೇಕಾದಾಗ ಖಂಡಿತಾ ಹೇಳ್ತೀನಿ’ ಅಂತ ಹೇಳಿದೆ.  ಅವಳೊಂದಿಗೆ ಮಾತನಾಡುತ್ತಾ ಮಲ್ಲಿಗೆಯ ಚಪ್ಪರದಲ್ಲಿ ತಿರುಗಾಡುತ್ತ  ಸ್ವಲ್ಪ ಹೊತ್ತು ನನ್ನ ಕೆಲಸವನ್ನೇ ಮರೆತಿದ್ದೆ. ಪಕ್ಕದಲ್ಲಿದ್ದ ಹುಡುಗಿಯನ್ನು ನೋಡಿ-‘ ಸರಿ ಸರಿ.. ಮತ್ತೆ ಇವ್ರು?  ಅಂತ ಕೇಳಿದೆ. ‘ ಮ್ಯಾಡಮ್ ಜಿ.. ಇವಳು ನನ್ನ ಗೆಳತಿಯ ಮಗಳು.. ಫೇಸ್ ಬುಕ್ಕಿನಲ್ಲಿ ಈ ಜಾಹಿರಾತಿನ ಬಗ್ಗೆ ನೋಡಿ ನನಗೆ ಹೇಳಿದ್ಲು. ನನಗೆ ತಮಿಳು ಮಾತಾಡೋಕೆ ಚೆನ್ನಾಗಿ ಬರುತ್ತೆ ನೋಡಿ. ಆದ್ರೆ ಬರೆಯೋದಕ್ಕೆ ಬರೋದಿಲ್ಲ. ಅದಕ್ಕೇ ಆಕೆ ನನ್ನ ಕರೆದುಕೊಂಡು ಬಂದಿದ್ದಾಳೆ.  ನನಂತೂ ಅವಳಿಗೆ ತಮಿಳಿನಲ್ಲಿ ಮಾತಾಡೋಕೆ ಚೆನ್ನಾಗಿ ಕಲಿಸಿದ್ದೀನಿ.ಆದ್ರೆ ನೋಡಿ ಪಾಪ…ಒಳಗಡೆ ಹೋಗೋಕೆ ಭಯಪಡ್ತಾ ಇದ್ದಾಳೆ. ನಾನಾದ್ರೆ ಡೆಲ್ಲಿಯಲ್ಲೇ ಹುಟ್ಟಿ ಬೆಳೆದವಳು.. ನನಗೆ ಭಯಾನೇ ಆಗೋಲ್ಲ.’ ಅಂದ್ಲು.

“ ಓ ಹೌದಾ.. ಸರಿ ಸರಿ.. ನೀವು ಮುಂದುವರೆಸಿ’  ಅಂತ ಹೇಳಿ ನಾನು ಆಕೆ ಯಾವ ರೀತಿಯಲ್ಲಿ ಕಲಿಸ್ತಾ ಇದ್ದಾಳೆ ಅಂತ ನೋಡ್ತಾ ಕುಳಿತೆ. ಆಕೆ ಆ ಹುಡುಗಿಗೆ-‘ಅರೇ..ಡರೋ ಮತ್.. ಅಲ್ಲಿ ಯಾರೂ ನಿನ್ನ ತಿನ್ನೋದಿಲ್ಲ.. ಧೈರ್ಯವಾಗಿ ಮಾತಾಡು.. ನನ್ಗೇನಾದ್ರೂ ಈ ರೀತಿ ಚಾನ್ಸ್ ಸಿಕ್ಕಿದ್ರೆ ಆಹಾ.. ನಾನೆಲ್ಲಿ ಇರ್ತಿದ್ನೋ ಏನೋ’ ಅಂತ ಆಕೆ ಹೇಳೋದನ್ನ ಕೇಳ್ತಾ ಇದ್ದವಳಿಗೆ ಭಾರೀ ಖುಶಿಯಾಯ್ತು.

ಇನ್ನೂ ವರೆಗೆ ನಮಗೆ ತಮಿಳಿನ ಅಮ್ಮ ಸಿಕ್ಕಿರಲಿಲ್ಲ. ನನ್ನ ಮನದಲ್ಲಿ ಈ ಇಡ್ಲೀ ಕವಿತಾ ಕುಣಿಯತೊಡಗಿದಳು. ತನ್ನ ಗೆಳತಿಯ ಮಗಳಿಗೆ ಅದೆಷ್ಟು ಚೆನ್ನಾಗಿ ಮಾತನಾಡೊದಕ್ಕೆ ಕಲಿಸ್ತಾ ಇದ್ಲೂಂದ್ರೆ ಇವಳನ್ನೇ ಯಾಕೆ ನಾವು ಆಯ್ಕೆ ಮಾಡಬಾರದು ಅಂತ ಅನಿಸದೇ ಇರಲಿಲ್ಲ. ಅವಳ ಕಲಿಸುವಿಕೆಯನ್ನೇ ನೋಡ್ತಾ ಕುಳಿತೆ.

ಆಗ ಕ್ಯಾಮೆರಾ ಮೆನ್ ಪುರುಷೋತ್ತಮ ಅಲ್ಲಿಗೆ ಬಂದು- ‘ ಓಫೋ ಮ್ಯಾಡಮ್ ಜಿ.. ನೀವಿಲ್ಲಿ ಕೂತಿದ್ದೀರಾ.. ನಿಮ್ಮ ಫೋನ್ ಸಹ ಒಳಗೇ ಬಿಟ್ಟು ಬಂದಿದ್ದೀರಿ ..ತೊಗೊಳ್ಳೀ. ಎಲ್ಲರೂ ನಿಮ್ಮನ್ನೇ ಹುಡುಕ್ತಾ ಇದ್ದೀವಿ.. ಒಳಗೆ ಬನ್ನೀ ಪ್ಲೀಜ್’ ಅಂದ್ರು.

ಕಮಲಾ ನನ್ನ ನೋಡಿ ಸ್ವಲ್ಪ ಮುಜುಗುರ ಪಡುತ್ತಾ‘ ನೀ..ನೀವು..ಯಾರು ಮ್ಯಾಡಮ್ ಜೀ’ ಅಂತ ಕೇಳಿದ್ಲು. ಆದ್ರೆ ನಾನು ಉತ್ತರಿಸುವುದಕ್ಕೂ ಮೊದಲೇ  ಆದಿತ್ಯನ ಫೋನ್ ಬಂತು-‘ ಹಲ್ಲೋ ಮ್ಯಾಡಮ್.. ಎಲ್ಲಿ ಮಾಯವಾಗಿ ಬಿಟ್ರೀ.. ಇನ್ನೂ ತುಂಬಾ ಜನರ ಆಡಿಶನ್ ಬಾಕಿ ಇದೆ. ಹರಯಾಣವಿ ಅಮ್ಮ ಅಂತೂ ಫೈನಲ್ ಆದ್ರು.. ಇನ್ನು ಉಳಿದವ್ರು ಅಂದ್ರೆ- ತಮಿಳು ಅಮ್ಮ. ಎಲ್ಲಿಂದ ತರೋದು/? ನಿಮ್ಮ ಫ್ರೆಂಡ್ ಬರ್ತೀನೀಂತ ಹೇಳಿದ್ರಲ್ಲಾ.. ಇನ್ನೂವರೆಗೂ ಪತ್ತೆ ಇಲ್ಲಾ. ಒಂದು ವೇಳೆ ಯಾರೂ ಸಿದಗೇ ಹೋದ್ರೆ ನೀವೇ ತಮಿಳು ಅಮ್ಮಾನೂ ಆಗಬೇಕಾಗುತ್ತೆ ಓಕೆ’. ಅಂತ ಜೋರಾಗಿ ಹೇಳಿದ. ನಾನು ನಗುತ್ತಾ  –ಅರೇ ಆದೀ ನೋ ವರೀಜ್.. ನಾನೀಗ ತಮಿಳು ಅಮ್ಮನ ಜೊತೆಗೇ ಕೂತಿದ್ದೀನಿ. ಅವರನ್ನ ಒಳಗೆ ಕರೆತರ್ತಾ ಇದ್ದೀನಿ ತಾಳು ಅಂದೆ.

ಪಾಪ ಆದಿತ್ಯ.. ಅವನ ಪಾಡೂ ನನಗಿಂತ ಚೆನ್ನಾಗಿರಲಿಲ್ಲ ಅನ್ನಿ. ಇಲ್ಲಿಯವರೆಗೆ ತನ್ನ ತಂದೆಯ ಕೈಕೆಳಗೆ ಕೆಲ್ಸಾ ಮಾಡುತ್ತಿದ್ದ. ಆವಾಗ ಇಷ್ಟೆಲ್ಲಾ ಜವಾಬ್ದಾರಿ ಹೊರಬೇಕಾಗ್ತಿರಲಿಲ್ಲ. ಇದೇ ಮೊದಲ ಬಾರಿಗೆ ಎಲ್ಲಾ ಜಾಹಿರತುಗಳನ್ನ ನಿರ್ದೇಶಿಸುವ ಭಾರ ಹೊತ್ತ ಕಾರಣ ಮದ್ಯಾಹ್ನದವರೆಗೂ ನಮಗೆ ಬೇಕಾದ ಕಲಾವಿದರು ಸಿಗದೇ ಹೋದದ್ದಕ್ಕೆ  ತಲೆಬಿಸಿ ಮಾಡಿಕೊಂಡಿದ್ದ. ಎರಡು ದಿನದಿಂದ ಸರಿಯಾಗಿ ನಿದ್ದೆನೂ ಮಾಡಿಲ್ಲಾ ಅಂತ ಇವತ್ತು ಬೆಳಿಗ್ಗೆ ಹೇಳ್ತಿದ್ದ.

ನನ್ನ ಮಾತು ಮುಗೀತಿದ್ದ ಹಾಗೆ ಆಕೆ- ‘ಮ್ಯಾಡಮ್ ಜೀ ನೀವ್ಯಾರು ಅಂತ ಕೇಳಿದಳು. ನಾನು- ನಗುತ್ತಾ ‘ನಾನು  ಸವಿತಾ ಇನಾಮದಾರ್ ಅಂತ, ಇಲ್ಲಿ ಅಸಿಸ್ಟೆಂಟ್ ಡೈರೆಕ್ಟಾಗಿ ಕೆಲ್ಸಾ ಮಾಡ್ತಿದ್ದೀನಿ. ಮತ್ತೆ ನಿಮ್ಮನ್ನ ಆಡೀಶನ್ ಇಲ್ಲದೇನೇ  ತಮಿಳು ಅಮ್ಮನ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ದೀನಿ. ಆದ್ರೆ ಒಂದು ಬಾರಿ ಕೆಮೆರಾ ಮುಂದೆ ನೀವು ಹ್ಯಾಗೆ ಕಾಣಿಸ್ತೀರೀಂತ ನೋಡೋಕೆ ಬಯಸ್ತಿನಿ.. ಬನ್ನಿ, ನನ್ನ ಜೊತೆಗೆ ಒಳಗೆ’ ಅಂದೆ.

ಆಕೆ ಗಲಿಬಿಲಿಗೊಂಡು ನನ್ನ ಕೈ ಹಿಡಿಯುತ್ತಾ- ಅಯ್ಯೋ ಮುರುಗಾ… ಸಾರಿ.. ಸಾರೀ ಮ್ಯಾಡಮ್ ಜಿ.. ನೀವೂ ಇವರೆಲ್ಲರ ಹಾಗೆ ಇಲ್ಲಿ ಬಂದಿದ್ದೀರೀಂತ ತಿಳಿದಿದ್ದೆ. ಮತ್ತೆ ನಾನು ಇವಳಿಗೆ ಹಾಗೇ ಏನೋ ಚೂರು- ಪಾರು ಆಕ್ಟಿಂಗ್ ಅಂತ ಕಲಿಸಿದ್ದೆ.. ನನಗೇನೂ ಬರೋದಿಲ್ಲಾ ಮ್ಯಾಡಮ್ ಜೀ.. ನನ್ನ ಒಳಗೆ ಕರೆದೊಯ್ಯ ಬ್ಯಾಡ್ರೀ’ ಅಂತ ಅಂಗಲಾಚಿದಳು.

ಅವಳ ಕಣ್ಣುಗಳಲ್ಲಿ ಭಯಕ್ಕಿಂತ ಹೆಚ್ಚು ಆಶ್ಚರ್ಯ ತುಂಬಿತ್ತು. ಅದಕ್ಕೆ ನಾನು- ನೋಡ್ ಕಮಲಾ.. ಯಾವಾಗ ಅವಕಾಶಗಳು ನಮ್ಮ ಬಾಗಿಲನ್ನ ತಟ್ಟುತಾವೋ ಆವಾಗ ಯೋಚಿಸ್ತಾ ಕೂತ್ಕೋ ಬಾರದು.. ಬಾಗಿಲನ್ನ ತೆರೆಯದೇ ಹೋದ್ರೆ ಮುಂದೆ ಎಂದಿಗೂ ಈ ರೀತಿಯ ಅಪೂರ್ವ ಯೋಗ ಸಿಗದೇ ಹೋಗಬಹುದು.  ಕಮಾ.. ಬನ್ನಿ..ಬನ್ನಿ. ನಿಮ್ಮ ಟೀವಿ ಮತ್ತೆ ಸಿನೆಮಾದ ದೊಡ್ಡ ಪರದೆಯ ಮೇಲೆ ಕಾಣುವ  ಕನಸನ್ನ ನನಸಾಗಿಸೋ ಸಮಯ ಬಂದಿದೆ.. ಇನ್ನು ಜಾಹಿರಾತಿನ ಜಗತ್ತು ನಿಮ್ಮನ್ನ ಕಾಯ್ತಾ ಇದೆ.’ ಅಂತ ಹೇಳಿ ಕೈ ಹಿಡಿದು ಕರೆದೊಯ್ದೆ. ನಾನವಳ ಕೈಹಿಡಿದು ಇದನ್ನೆಲ್ಲಾ ಹೇಳೋವಾಗ ತುಂಬಾ ಖುಶಿಯಾಗ್ತಾ ಇತ್ತು. ಆಕೆಯ ಕಣ್ಣಲ್ಲೂ ಆನಂದ ಭಾಷ್ಪ ಕಂಡಾಗ ನನ್ನ ಮನಸಿಗೆ ಏನೋ ಒಂದು ರೀತಿಯ ಸಮಾಧಾನ ಸಿಕ್ಕಿತ್ತು. ‘ ಮ್ಯಡಮ್ ಜೀ ಥ್ಯಾಂಕ್ಯೂ… ಥ್ಯಾಂಕ್ಯೂ’ ಆಕೆ ನನ್ನ ಗಟ್ಟಿಯಾಗಿ ಅಪ್ಪಿ ಹಿಡಿದಳು. ಕವಿತಾ..ಜೀವನ ತುಂಬಾ ಸುಂದರ ಮತ್ತು ಸೋಜಿಗವಾಗಿದೆ.  ಯಾವಾಗ್ಲೂ ಸಂತೋಷ ಪಡಬೇಕು..ಮತ್ತೆ ಹಂಚಬೇಕು. ಬಾ. ಕಣ್ಣೀರನ್ನ ಒಅರೆಸಿಕೋ.. ಒಳಗೆ ಹೋಗೋಣ.

ಕೆಮೆರಾದ ಮುಂದೆ ನಿಂತಾಗ ಕವಿತಾ ಮೊದಲೊಮ್ಮೆ ಭಯಪಟ್ಟರೂ ತನ್ನ ಡೈಲಾಗನ್ನ ಪೂರ್ತಿ ಹೇಳಿದಳು. ಮೂರನೇ ಟೇಕಿಗೆ ಆದಿತ್ಯ ಓಕೆ ಅಂದು ನನ್ನ ನೋಡಿ ನಕ್ಕ.

ಅಗಸ್ಟ್ 15 ರಂದು ನಮ್ಮ ಶೂಟಿಂಗ್ ಆಯ್ತು. 8 ಭಾಷೆಯ ಅಮ್ಮಂದಿರು ಮತ್ತು ಅವರ 8 ಹೆಣ್ಣು ಮಕ್ಕಳು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದಗ ಕವಿತಾ ಎಲ್ಲಾ ಅಮ್ಮಂದಿರಿಗೆ ಮಲ್ಲಿಗೆಯ ಮಾಲೆಯನ್ನು ತಂದಿದ್ದಳು.  ಶೂಟಿಂಗ್ ಮದ್ಯಾಹ್ನದವರೆಗೆ ಮುಕ್ತಾಯಗೊಂಡಿತು.

ಇನ್ನೂ ಆಕೆಯೊಂದಿಗೆ ಇಡ್ಲಿಯ ಪಾರ್ಟೀ ಮಾಡೋದಿದೆ.

ಇಡ್ಲಿಯ ಕವಿತಾ ಇಂದು ಅಡವರ್ಟೈಸಮೆಂಟಿನ ಕವಿತಾ ಮ್ಯಾಡಮ್ ಆಗಿದ್ದಾಳೆ. ಆದ್ರೆ ಫೋನ್ ಮಾಡಿ – ಮತ್ತೆ ಯಾವಾಗ ನನ್ನ ಕರೀತಿರಿ ಮ್ಯಾಡಮ್ ಅಂತ ಕೇಳ್ತಾ ಇರ್ತಾಳೆ. ನೋಡೋಣಾ.

ಅತ್ತೆ ಮುಂದಿನ ಜಾಹಿರಾತಿಗೋಸ್ಕರ ನನ್ನ ಹುಡುಕಾಟ ನಡೆದಿದೆ.. ಯಾರು..ಯಾವಾಗ ..ಎಲ್ಲಿ ಸಿಗ್ತಾರೋ ನಾ ಕಾಣೆ. ಸಿಕ್ಕವರೆಲ್ಲಾ ನನ್ನ ಪಕ್ಕಾ ಸ್ನೇಹಿತರಾಗಿದ್ದಾರೆ. ಪ್ರೀತಿಯ ಬಳ್ಳಿ ಹಬ್ಬುತ್ತಾ ಇದೆ.

ಮತ್ತೆ ನನ್ನ ಮುಂದಿನ ಜಾಹೀರಾತಿನ ರೂಪಿಸಿಯರ ಹುಡುಕಾಟ ನಡೆದಿದೆ.


ಸವಿತಾ ಇನಾಮದಾರ್.

       

Leave a Reply

Back To Top