ಕಲ್ಲಾಗುವ ಸಂಕಟ,ಮಮತಾ ಶಂಕರ್ ಹೊಸ ಕವಿತೆ

ಕಾವ್ಯ ಸಂಗಾತಿ

ಕಲ್ಲಾಗುವ ಸಂಕಟ

ಮಮತಾ ಶಂಕರ್

ನೀನು ಮಾತಾಡುವಾಗೆಲ್ಲಾ
ನಾನು ಮೌನವಾಗಿದ್ದುಬಿಟ್ಟೆ
ಕೇಳಿಸಿಕೊಳ್ಳುವ ಸುಖ ಸಿಗಲೆಂದು
ಜಗತ್ತು ನನ್ನನ್ನು ಮೌನದ ಕಲ್ಲಾಗಿಸಿಬಿಟ್ಟಿತು

ಮಾತುಗಳ ಮಹಾರಾಜರು
ಬಹಳುಂಟು ಈ ಜಗದಲ್ಲಿ
ನಾನು ಹುಡುಕುತ್ತಿದ್ದುದು
ನನ್ನ ಮೌನ ಓದುವ ನಿನ್ನನ್ನು

ನೀನು ನೋಯಿಸಿದಾಗ ಅತ್ತಿರಬಹುದು
ಆದರೀಗ ಅರಿವಾಗಿದೆ ದೋಷ
ನನ್ನ ಕನಸುಗಳದೇ ಎಂದು

ಗೊತ್ತಿದೆ ನನಗೆ ಪ್ರತಿ ಭಾವಗಳಿಗೂ
ಅಕ್ಷರ ಸಿಗುವುದಿಲ್ಲ
ಪ್ರತಿ ಆಸೆಗಳಿಗೂ ನನಸಾಗಲೆಂಬ
ಹಾರೈಕೆಗಳು ಸಿಗುವುದಿಲ್ಲ ಎಂದು

ತಿಳಿದಿರಲಿ ನಿನಗೆ ಹೃದಯ ಕೇವಲ
ಒಮ್ಮೆ ಮಾತ್ರ ಒಲವಿಗೆ ಮಿಡಿಯುತ್ತದೆ
ಮತ್ತೆ ಮಿಡಿಯುವುದನ್ನು ಪ್ರೀತಿ
ಎನ್ನುವುದಿಲ್ಲ ಎಂದು

ಸಂತೆಯೊಳಗೆ ಸಂತನಂತಿರುವುದು
ಚಳಿಗಾಳಿ ಬಿಸಿಲು ಮಳೆಗೆ ಸ್ಪಂದಿಸದೆ ಮೂಕವಾಗಿರುವುದು
ಕಡುಕಷ್ಟ ಕಲ್ಲಾಗಿ ನಿಂತು ದೇವರೆನಿಸಿಕೊಳ್ಳುವುದು


14 thoughts on “ಕಲ್ಲಾಗುವ ಸಂಕಟ,ಮಮತಾ ಶಂಕರ್ ಹೊಸ ಕವಿತೆ

    1. ಮೌನದ ಬಗೆಗಿನ ಕವಿತೆ ನೆನಪಿನಲ್ಲುಳಿದು ಕಾಡುವಷ್ಟು ಮಾರ್ಮಿಕವಾಗಿದೆ! ಅಭಿನಂದನೆಗಳು

      1. ಧನ್ಯವಾದಗಳು ತೇರಳಿ ಸರ್ ನಿಮ್ಮ ಪ್ರತಿಕ್ರಿಯೆಗೆ

  1. ಸರಳ ಸಹಜ ನಿರಾಡಂಬರ ಕವಿತೆ…ಅಭಿನಂದನೆಗಳು

    1. “ಕಡುಕಷ್ಟ ಕಲ್ಲಾಗಿ ನಿಂತು ದೇವರೆನಿಸಿಕೊಳ್ಳುವುದು” ತುಂಬಾ ಇಷ್ಟವಾಯಿತು ಮಮತಾ ಮ್ಯಾಡಂ ಈ ಸಾಲು. ಇತ್ತೀಚಿನ ನಿಮ್ಮ ಕವನಗಳು ಮೂರ್ತದಿಂದ ಅಮೂರ್ತದತ್ತ ಗೆಲ್ಲು ಚಾಚಿರುವುದು, ಕಾವ್ಯ ಗೆಲ್ಲುವ ಬಗೆ.
      ಅಭಿನಂದನೆಗಳು

      1. ಕಾನತ್ತಿಲ ಸರ್ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

  2. ಮಮತಾ ಮೇಡಂ ಅದ್ಭುತ ಕವನ
    ಜಗದ ಜಂಜಡಗಳಿಗೆ ಕಲ್ಲಾಗಬೇಕೆಂದರೆ ಅದೂ ಕೂಡ ಕಷ್ಟವೇ
    ಸೂಪರ್….

    1. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಮೀನಾಕ್ಷಿ ಮೇಡಂ

Leave a Reply

Back To Top