ಎದೆಯ ಕಪಾಟು,ವಾಣಿ ಯಡಹಳ್ಳಿಮಠರವರ ಕವಿತೆ

ಕಾವ್ಯ ಸಂಗಾತಿ

ಎದೆಯ ಕಪಾಟು

ವಾಣಿ ಯಡಹಳ್ಳಿಮಠ

ಇಂದಲ್ಲದಿದ್ದರೇ ಮತ್ತೆಂದು ಎಂದು,
ಸಮಯವಿದುವೇ ಸರಿಯಿದೆ ಎಂದು .
ತೆರೆದು ನೋಡಿದೆ ಎದೆಯ ಕಪಾಟು ಇಂದು ,
ಕಾತರಿಸಿ ಕಡಲಾಯಿತು ಈ ಮನವಿಂದು ..

ಮುದ್ದಾದ ನೆನಪುಗಳ ಆಟಿಕೆ ,
ಮುರಿದೊದ ಕನಸುಗಳ ಕಗ್ಗಂಟು .
ಸಂತೈಸಿದ ಕ್ಷಣಗಳ ಕಲೆ ,
ಬದಿಗೊತ್ತಿದ ಬಯಕೆಗಳ ಬಿಂಬ .

ಮುದ ನೀಡಿ ಮುದ್ದಿಸಿದ,
ಮಾತುಗಳ ಇಂಚರ .
ಒಣಗಿದರೂ ಒಲವಿನಿಂದಿಟ್ಟ,
ಒಲುಮೆಯ ಗುಲಾಬಿ .
ಹರಿದರೂ ಸುಘಂಧ ಸೂಸುವ ,
ಹರೆಯದ ಓಲೆ .
ಪುಟ ಸೇರದಿದ್ದರೂ ,
ಪುಳಕಗೊಳಿಸಿದ ಪ್ರೇಮ .

ಕಂಗಳ ಹಾದಿ ಸಿಗದೇ
ಕಳವಳಿಸಿದ ಕಂಬನಿಯ ತೇವ ,
ಪದಗಳಿಗೂ ನಿಲುಕದೇ ,
ನೆಲಕಚ್ಚಿದ ನಿಲುವಿನ ದನಿ .
ಹೊರಲಾಗದೆ ಹೊರೆಯೆಂದೆನಿಸಿ,
ಇಳಿಸಿದ ಭಾವ .
ಬದುಕುಗಾಣದೆ ಉಸಿರುಗಟ್ಟಿದ
ಬಾಂಧವ್ಯದ ಮೂಟೆ .

ಮತ್ತೇನೂ ಕಾಣಸಿಗಲಿಲ್ಲ
ಈ ಮನಕೆ ,,,
ಮುಚ್ಚಿ ಕಪಾಟು ಮೂಲೆ ಸೇರಿತು ..
ತುಸು ನಸುನಕ್ಕು ,
ತುಸು ಮುಸು ಮುಸು ಅತ್ತಿತು …
———————–

Leave a Reply

Back To Top