ಕಪ್ಪು ಶಿಲೆ-ಸವಿತಾ ಇನಾಮದಾರ್ ಅವರ ಕವಿತೆ

ಕಾವ್ಯ ಸಂಗಾತಿ

ಕಪ್ಪು ಶಿಲೆ

ಸವಿತಾ ಇನಾಮದಾರ್

‘ ಕಪ್ಪು ಶಿಲೆ’ , ‘ ಕಪ್ಪು ಶಿಲೆ’ ಎಂದು ಅಣಕವಾಡುತ್ತಿದ್ದರು
ಎನ್ನ ಒನ್ನೊಡಹುಟ್ಟಿದ ಅಕ್ಕ-ತಮ್ಮಂದಿರು.
ಆಗ ಮಮತೆಯ ಮಡಿಲಲ್ಲಿ ಅಡಗಿಸುತ್ತಿದ್ದಳೆನ್ನ
ತಾಯಿ ನರ್ಮದೆ, ಕೊಟ್ಟಳು ಅಪಾರ ಪ್ರೀತಿಯನ್ನ.

ಹೀಗಿರುವಾಗೊಂದು ದಿನ ಹಲವು ಆಗಂತುಕರು ಹೊತ್ತುಕೊಂಡು ಹೋದರೆನ್ನ ಅಪರಿಚಿತ ಸ್ಥಳಕ್ಕೆ,
ಒಡಹುಟ್ಟಿದವರನ್ನಗಲಿ ಒಬ್ಬಂಟಿ ನಿಂತಾಗ ಹಲುಬಿದೆ ಎನ್ನ ತಾಯ ಮೃದು ಸ್ಪರ್ಷಕ್ಕೆ.

ಯಾರು ತಂದರಿಲ್ಲಿ ನನ್ನ?
ಏಕೆ ತಂದರಿಲ್ಲಿ ಎನ್ನುತ್ತಾ ಭಯದಿಂದ ಥರ-ಥರನೇ ಕಂಪಿಸಿದೆ.

ಸುತ್ತಿಗೆ ಚಾಣಿಗಳ ಪೆಟ್ಟು ಥಟ್ಟನೇ ಬಿದ್ದಾಗ ಒದ್ದಾಡಿದೆ ವಿಲ-ವಿಲನೇ ನೋವು ತಾಳಲಾರದೆ.

ಈ ರೀತಿಯ ದಿನಚರ್ಯೆ ನಡೆಯಿತೆಷ್ಟೋ ದಿನ,
ಆದರೂ ಕರಗಲಿಲ್ಲಾ ಅವರೆಲ್ಲರ ಕಠೋರ ಮನ.

ಹಗಲಿರುಳೆನ್ನದೇ ಆ ಪೆಟ್ಟುಗಳನ್ನು ಸಹಿಸಲೇ ಬೇಕಾಯ್ತು,
ನೋಡ-ನೋಡುತ್ತಲೇ ಎನ್ನ ಮಹಾಕಾಯ ಕೃಷವಾಗಿ ಹೋಯ್ತು.

ಆದರೆ…..
ಇಂದೇಕೋ ಸೂರ್ಯೋದಯಕ್ಕೂ ಮೊದಲು
ಸುವಾಸಿತ ಪನ್ನೀರೆನ್ನ ಮೈಮೇಲೆ ಬಿತ್ತು,
ಹಾಲು-ಮೊಸರು, ತುಪ್ಪ, ಜೇನುತುಪ್ಪದಿಂದೆಗೆ ಎನಗೆ ಮಜ್ಜನವೇಕೆ ಮಾಡಿಸಿದರೆಂದು ತಿಳಿಯದಾಯ್ತು.

ಭಕ್ತಿ-ಪ್ರೀತಿಯಿಂದ ಎನ್ನ ತಂದು ನಿಲ್ಲಿಸಿದರೀಗ
ಅಮೃತ ಶಿಲೆಯ ಸುಂದರ ಮಂಟಪದ ಮೇಲೆ….
ಕೊಟ್ಟರು ಕೈಯ್ಯಲ್ಲೊಂದು ಕೊಳಲು,
ಇಟ್ಟರು ರತ್ನ ಖಚಿತ ಕಿರೀಟ ಎನ್ನ ಗುಂಗುರು ಶಿರದ ಮೇಲೆ.

ಗಂಟೆ-ಜಾಗಟೆ, ಶಂಖನಾದ ವೇದಘೋಷದ ಜೊತೆಗೆ
ಸುವಾಸಿನಿಯರ ಸಿರಿಕಂಠವೂ ಕೇಳತೊಡಗಿತು.
‘ಶ್ಯಾಮ ಸುಂದರಾ’ , ‘ಕೃಷ್ಣ ಮುರಾರಿ’ ಎಂದೆನ್ನುವ ಧ್ವನಿ
ದಶ-ದಿಕ್ಕುಗಳಲ್ಲಿ ಪ್ರತಿಧ್ವನಿಸತೊಡಗಿತು.

ಈಗ
ಅದೆಷ್ಟೋ ಭಕ್ತಾದಿಗಳ ಮೊರೆಯನ್ನು ಕೇಳುತ್ತ,
ಮುಗುಳು ನಗೆಯ ಬೀರುತ್ತಾ ನಿಂತಿರುವೆನು ನಾನು ಬೃಂದಾವನದಲ್ಲಿ….

ಹಣೆಯ ಬರಹಕ್ಕೆ ಹಲುಬದೇ, ಬಾಳಸಮರ ಎದುರಿಸುತ್ತಾ ಮುನ್ನುಗ್ಗುವ ನನ್ನ ಮಾತೆಯನ್ನು ನೆನೆಯುತ್ತಲಿರುವೆ.
ಆಕೆಯ ಮಮತೆಗೆ ನಮಿಸುತ್ತಲಿರುವೆ.


2 thoughts on “ಕಪ್ಪು ಶಿಲೆ-ಸವಿತಾ ಇನಾಮದಾರ್ ಅವರ ಕವಿತೆ

Leave a Reply

Back To Top