ಗಜಲ್ ಜುಗಲ್ ಬಂದಿ

ಅಹರ್ನಿಶಿ ನಲುಗುತ್ತಿದೆ ಮುತ್ತಿನಂಥ ಸೊಲ್ಲು ಬದುಕಾಗುತಿದೆ ಮಾಯಾಬಜಾರ್
ವ್ಯವಸ್ಥೆಗಳ ಸತ್ವದೊಳಗೆ ಕ್ಷೀಣಿಸುತ್ತಲಿದೆ ಬದ್ಧತೆ ದಿನವಾಗುತಿದೆ ಮಾಯಾಬಜಾರ್

ಕಲ್ಪನೆಯಲಷ್ಟೇ ಮೆರೆಸಿಬಿಡು ಸವಿನಯದ ಭಾವಗಳಿಗೆ ಮನ್ನಣೆಯನಿತ್ತು ಸುಖದಿ
ಕಾಂಚನದ ನಶೆಯಲಿ ತೂರಾಡಿದೆ ಸುವಿಚಾರ ಕ್ಷಣವಾಗುತಿದೆ ಮಾಯಾಬಜಾರ್

ಶರಧಿಯಾಳದಿ ಅವಿತಿದೆ ಮಾನವತೆಯ ಸೆಲೆ ಅರಸಲಿ ಎಂತು ಏಕಾಂಗಿಯಾಗಿ
ಐಕ್ಯತೆಯ ಹೆಸರಿನಲಿ ಅಸುವಿಗಂಟಿದೆ ದಾಸ್ಯ ಹೆಜ್ಜೆಗಳಾಗುತಿದೆ ಮಾಯಾಬಜಾರ್

ಲಗಾಮು ಹಾಕಿಕೋ ಚಿತ್ತವೇ ಸ್ವಪ್ನಗಳ ಚಕ್ರವ್ಯೂಹ ನೀವೇದಿಸುತಿಹ ಆಮಂತ್ರಣಕೆ
ಸಾಸಿರ ಸಂವತ್ಸರಗಳ ಭವ್ಯಭಾವ ಬಡವಾಗಿದೆ ಗಮ್ಯವಾಗುತಿದೆ ಮಾಯಾಬಜಾರ್

ಬಣ್ಣಗಳ ಅಳೆಯುವ ಸೋಗುಗಳ ಹೆಜ್ಜೆಗೆ ಗೆಜ್ಜೆ ಕಟ್ಟುವವಳಲ್ಲ ತರ್ಕಿಷ್ಠೆ ‘ನಯನ’
ಸವೆಯುತಿಹ ಕ್ಷಣವೂ ಯಶೋಗಾಥೆಗೆ ಸಿದ್ಧ ನಾಳೆಗಳಾಗುತಿದೆ ಮಾಯಾಬಜಾರ್.

ನಯನ. ಜಿ. ಎಸ್.

ತರಹೀ ಗಜಲ್ : ನಯನ ಅವರ ಊಲಾ ಮಿಸ್ರಾ

ಅಹರ್ನಿಶಿ ನಲುಗುತ್ತಿದೆ ಮುತ್ತಿನಂಥ ಸೊಲ್ಲು ಬದುಕಾಗುತಿದೆ ಮಾಯಾಬಜಾರ್
ಅಹೋರಾತ್ರಿ ಕದಡುತ್ತಿವೆ ಮುಗ್ಧ ಹೃದಯಗಳು ಜಗವಾಗುತಿದೆ ಮಾಯಾಬಜಾರ್

ಮೃಷೆಯ ಮುಖವಾಡಗಳು ಬಿಕರಿಯಾಗುತಿವೆ ಭರ್ಜರಿಯಾಗಿ ರಾಜ ಪಥದಲ್ಲಿ
ಮಡಿದ ಮನಷ್ಯತ್ವದ ಗೋರಿಯ ಮೇಲೆ ಉದಯವಾಗುತಿದೆ ಮಾಯಾಬಜಾರ್

ಬಯಸಿ ಬಳಲದಿರು ಅನುನಿತ್ಯ ಭವ್ಯ ಭಾವಗಳನ್ನು ಅಸುನೀಗಿದ ಮನಸುಗಳಿಂದ
ನೈತಿಕತೆಯ ಶವಯಾತ್ರೆಯಲಿ ಕುಣಿದಾಡಲು ನಡೆಯಾಗುತಿದೆ ಮಾಯಾಬಜಾರ್

ಕರುಳ ಬಳ್ಳಿಯ ನಂಟನು ಮರೆತು ಹೆತ್ತೊಡಲ ನೋಯಿಸಿ ನಗುವ ನರಾಧಮರು
ಕರುಣೆಯು ಕಣ್ಮರೆಯಾಗಿ ಇಹದೊಳಗೆ ಸಂಬಂಧವಾಗುತಿದೆ ಮಾಯಾಬಜಾರ್

ಕಲುಷಿತಗೊಂಡ ಕನವರಿಕೆಗಳು ಎಡವುತ್ತಾ ಸಾಗುತ್ತಿವೆ ‘ವಿಜಯ’ದ ಹಾದಿಯಲ್ಲಿ
ಕಿತ್ತೊಗೆದ ಚಿತ್ತವೃತ್ತಿಯು ಬೆಂಬಿಡದೆ ಕಾಡಿ ಕುಣಿಕೆಯಾಗುತಿದೆ ಮಾಯಾಬಜಾರ್.

——————-

ವಿಜಯಪ್ರಕಾಶ್. ಕೆ.

Leave a Reply

Back To Top