ಅಂಕಣ ಸಂಗಾತಿ

ನೆನಪಿನದೋಣಿಯಲಿ

ನನ್ನ ಮೊದಲ ಸೈಕಲ್ ಸವಾರಿ

ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ 

ಅಂದರೆ  ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ .

ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ ಪುಟ್ಟ ಸೀಟ್ ನಲ್ಲಿ ಮೊದಲು ಕೂರಿಸಿಕೊಂಡು ಹೋಗುತ್ತಿದ್ದರು. ನಂತರ ತಂಗಿ ಬಂದಮೇಲೆ ನನಗೆ ಹಿಂದುಗಡೆಗೆ ಡಿಮೋಶನ್. ಅವಳನ್ನು ಮುಂದೆ ಕೂಡಿಸಿಕೊಳ್ಳುತ್ತಿದ್ದರು ಅಂತೂ ಜುಮ್ಮಂತ ಹೋಗುವುದು ಒಂದು ತರಹ ಖುಷಿ ಕೊಡುತ್ತಿತ್ತು ಆಗ . ಸ್ವಲ್ಪ ದೊಡ್ಡವರಾದ ಮೇಲೆ ಎಲ್ಲರಿಗೂ ಸೈಕಲ್ ಕಲಿಯುವ ಆಸೆ . ನಾನೂ ಅದಕ್ಕೇನು ಹೊರತಲ್ಲ. ಅಲ್ಲದೆ ಸುತ್ತಮುತ್ತ ಇದ್ದ ನನ್ನ ಆಟದ ಪಾರ್ಟ್ನರ್ಸ್ ಗಳು ಎಲ್ಲರೂ ಕಲಿತಾಗಿದ್ದು ಆಗ ನಾನೊಬ್ಬಳೇ ಆಡ್ ಮ್ಯಾನ್ ಔಟ್.  ಬೇಗ ಕಲೀಬೇಕು ಅನ್ನೋ ಆಸೆಗೆ  ಆಜ್ಯ ಹೊಯ್ದಿತ್ತು 

ನಾನಾಗ 8—9 ವರ್ಷದವಳಿರಬಹುದು. ಬೇಸಿಗೆ ರಜೆಯಲ್ಲಿ ಸೈಕಲ್ ಕಲಿಯುವ ಹುಚ್ಚು ತಲೆಗೇರೀತು. ತಲೆಗೆ ಏನಾದರೂ ಹುಳು ಹೊಕ್ಕಿತೆಂದರೆ ಶತಾಯ ಗತಾಯ ಮಾಡೇ ತೀರುವ ಜಾಯಮಾನದವಳು ನಾನುˌ ಸರಿ ಅಮ್ಮನ್ನ ಒಪ್ಪಿಸಾಯ್ತು.ಅಣ್ಣ ಬೈತಾರೆ ಅಂತ ಅವರು ಆಫೀಸಿಗೆ ಹೋದಾಗ ಅಂತ ಸಮಯವೂ ನಿಗದಿಯಾಯ್ತು.ನಮ್ಮ ಏರಿಯಾದ ಏಕಮಾತ್ರ ಸೈಕಲ್ ಶಾಪ್ ನಲ್ಲಿ ಓಡಿಸೋಕೆ ಬರುತ್ತಾ ಅಂತ ನೋಡೇ ಬಾಡಿಗೆಗೆ ಕೊಡ್ತಿದ್ದುದು.

ಹಾಗಾಗಿ ಎದುರುಮನೆ ಹರ್ಷನಿಗೆ ಸೈಕಲ್ ತರಲು ಹಾಗೂ ಕಲಿಸಲು ದಮ್ಮಯ್ಯ ಗುಡ್ಡೆ ಹಾಕಿ ಒಪ್ಪಿಸಾಯ್ತು.10 ಗಂಟೆಗೆ ಹೋದವನು 12ಗಂಟೆಗೆ ಬಂದ. 30ಪೈಸೆ ಬಾಡಿಗೆ.ನನ್ನ ತಂಗಿಯರು ಮತ್ತಿತರ ಚಿಳ್ಳೆ ಪಿಳ್ಳೆಗಳೇ ನನ್ನ ಮಹಾನ್ ಸಾಹಸದ ಪ್ರೇಕ್ಷಕ ಪ್ರೋತ್ಸಾಹಕರು.ಸರಿ ಸೀಟ್ ಮೇಲೆ ಆಸೀನಳಾದೆ. ಸೈಕಲ್ ಬೀಳದಂತೆ ಹರ್ಷ ಹಿಡಿದು ಕೊಂಡಿದ್ದ. ಹಾಗೇ ನಿಧಾನಕ್ಕೆ ಎರಡು ರೌಂಡ್ ಹೊಡೆದ್ನಾ. ಆಹಾ ಬಂದೇ ಬಿಡ್ತು balance ಅನ್ನೋ ಹುಮ್ಮಸ್ಸಿನಲ್ಲಿ speed ಆಗಿ ಹೊಡೆಯಕ್ಕೆ ಶುರು. ಗಾಳಿಯಲ್ಲಿ ತೇಲ್ತಿದೀನಿ ಅಂದ್ಕೊಂಡು ಹಿಂದೆ ತಿರುಗಿದೆ ಅವರೆಲ್ಲಾ ಎಲ್ಲೋ ದೂರದಲ್ಲಿ. ಎಷ್ಟು ದೂರ ಹಿಂದೇನೇ ಓಡಕ್ಕಾಗುತ್ತೆ?ನನಗೋ ಸೈಕಲ್ ಯಾರೂ ಹಿಡ್ಕೊಂಡಿಲ್ಲ ಅಂತ ಗೊತ್ತಾಗಿ ಗಾಬರಿ.ರೋಡ್ ಡೌನುˌ ಹಿಂದೆ ತಿರುಗಿದಾಗ ಹ್ಯಾಂಡಲ್ ಬಲಕ್ಕೆ ತಿರುಗಿ ಸೈಕಲ್ ರೋಡು ಬಿಟ್ಟು ಫುಟ್ಬಾತಿಗೆ ಇಳೀತಾ. ಬ್ರೇಕ್ ಹಾಕಕ್ಕೂ ತೋಚಲಿಲ್ಲ. ನೇರ ಹೋಗಿ ಅಂಬಿಕಮ್ಮ ಅವರ ಮನೆ ಕಾಂಪೌಂಡಿಗೆ ಡಿಕ್ಕಿ. ಸೈಕಲ್ ಒಂದು ದಿಕ್ಕು. ನಾನು ಒಂದು ದಿಕ್ಕುˌಚರಂಡಿಯ ಚಪ್ಪಡಿ ಕಲ್ಲು ತಾಕಿ ಮಂಡಿಯೊಡೆದು ರಕ್ತ ಸುರಿಯಲು ಶುರುˌಅಷ್ಟರಲ್ಲಿ ನನ್ನ ಹಿಂಬಾಲಕರ ಪಡೆ ಹಾಜರ್ .ನನ್ನ ತಂಗಿಯರು ಛಾಯ ಮತ್ತು ವೈಶಾಲಿಯರ ಜೋಡಿ ವಾಲಗ ಶುರು ಆಗಿತ್ತು.ಹರ್ಷನದು ಸೈಕಲ್ spot inspection.ಮುರಿದು ಹೋಗಿದ್ರೆ ಬೈಸಿಕೊಳ್ಳೋನು ಅವನೇ ಅಲ್ವಾ ಪಾಪ!ಮನೆಯೊಳಗಿಂದ ಅಂಬಿಕಮ್ಮ ಅರಿಸಿನ ಕಾಫಿಪುಡಿ ತಂದು ಮೆತ್ತಿದ್ರು.ಬೀದಿಯ ಕೊನೆಯಲ್ಲಿದ್ದ ನಮ್ಮ ಮನೆಯಿಂದ ಅಮ್ಮ ಬಂದ್ರು. ಅವರ ಹೆಗಲಿನಾಸರೆಯಲ್ಲಿ ಕುಂಟುತ್ತಾ ಮನೆ ಸೇರಿದೆ. ಅಣ್ಣ ಬಂದ ಮೇಲೆ ಇನ್ನೊಂದು ರೌಂಡ್ ಬೈಗುಳ ತಿಂದಾಯ್ತು.ಅಲ್ಲಿಗೆ ನನ್ನ ಸೈಕಲ್ ಸವಾರಿ ಕನಸಿಗೆ ತಿಲಾಂಜಲಿ. ಜುಂ ಅಂತ ಸೈಕಲ್ಲಲ್ಲಿ ತಿರುಗೋ ನನ್ನ ಕನಸು ಇಂದಿಗೂ ನನಸಾಗಿಲ್ಲ. ಈಗ two wheeler ಕಲಿತು ಓಡಿಸ್ತಿದ್ರೂ ಸೈಕಲ್ ಮಾತ್ರ ಹತ್ತಿಲ್ಲ ಇದುವರೆಗೂ.


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

  1. ತುಂಬ ಸುಂದರ ಚಿತ್ರಗಳೊಂದಿಗೆ ಪ್ರಸ್ತುತಪಡಿಸಿ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ವಂದನೆಗಳು ಧನ್ಯವಾದಗಳು .
    ಸುಜಾತಾ ರವೀಶ

Leave a Reply

Back To Top