ಅಂಕಣ ಸಂಗಾತಿ
ಗಜಲ್ ಲೋಕ
ವೃತ್ತಿ -ಪ್ರವೃತ್ತಿಗಳಲ್ಲಿ ಅರಳಿದ
ಪಾಟೀಲರ ಗಜಲ್ ಕೆಂದಾವರೆ…
ಗಜಲ್ ತಾರೆ ಹೃದಯವಂತಿಕೆಯ ಆಗಸದಲ್ಲಿ ನೂರ್ ನಂತೆ ಹೊಳೆಯುತ್ತ ರಸಿಕರ ತನು-ಮನವನ್ನು ಸಂತೈಸುತ್ತಿದೆ. ಇಡೀ ಲೋಕವನ್ನೇ ವ್ಯಾಪಿಸಿರುವ ಗಜಲ್ ಜನ್ನತ್ ಕುರಿತು ಮಾತನಾಡುತಿದ್ದರೆ ಅದೇನೋ ಸೆಳೆತ, ಅದೆಂಥದೋ ಆನಂದ!! ಆ ಅಮೂರ್ತ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮಲ್ಲಿಯ ಮನಸು ಸದಾ ತುಡಿಯುತಿರುತ್ತದೆ. ಕರುನಾಡಿನ ಅಸಂಖ್ಯಾತ ಗಜಲ್ ಗೋ ಅವರಲ್ಲಿ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಶಶಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಕಲಮ್ ಗೆ ಚಾಲ್ತಿ ನೀಡುವೆ…!!
“ಅವರು ಎಷ್ಟು ದಿನಗಳ ಬಾಯಾರಿಕೆಯಿಂದ ಬಳಲುತಿರುವರೊ
ಇಬ್ಬನಿಯ ಒಂದು ಹನಿಯೂ ಅವರಿಗೆ ಝರಿಯಂತೆ ಭಾಸವಾಗುವುದು”
–ಕೈಸರ್-ಉಲ್ ಜಾಫರಿ
“ಕಷ್ಟಪಟ್ಟು ದುಡಿಯಬೇಕೆನ್ನುವುದು ಜೀವನದ ಧ್ಯೇಯವಾದರೆ, ಅದೃಷ್ಟ ಎನ್ನುವುದು ಮನೆ ಬಾಗಿಲಿಗೆ ಬರಲಿದೆ” ಎಂಬ ಗೋಲ್ಡ್ ಸ್ಮಿತ್ ಅವರ ಮಾತು ಬದುಕಿನ ಗತಿಯನ್ನು ಬಿಂಬಿಸುತ್ತದೆ. ನಿತ್ಯದಲ್ಲಿ ದುಡಿದು ತನ್ನ ಹಾಗೂ ತನ್ನ ಕುಟುಂಬದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಭವಿಷ್ಯಕ್ಕಾಗಿ ಹಣ ಸಂಗ್ರಹಿಸುವ ವೃತ್ತಿಯೊಂದಿಗೆ ಪ್ರವೃತ್ತಿಯ ತುಡಿತ ಸದಾ ಇದ್ದೇ ಇರುತ್ತದೆ. ಪ್ರವೃತ್ತಿ ನಮ್ಮ ಪ್ರತ್ಯಕ್ಷಾನುಭವಕ್ಕೆ ನಿಲುಕುವ ಪದಾರ್ಥವಲ್ಲ. ವರ್ತನೆಯ ವೀಕ್ಷಣೆಯ ಆಧಾರದ ಮೇಲೆ ಒಂದು ಜೀವಿ ಯಾವ ಪ್ರೇರಣೆಗೆ ಒಳಪಟ್ಟಿರುವುದೆಂದು ನಾವು ಊಹಿಸಬಹುದು. ಪ್ರೇರಣೆ ಪ್ರತ್ಯಕ್ಷ ಅಂಶವಲ್ಲ. ವರ್ತನೆ ಮಾತ್ರ ಪ್ರತ್ಯಕ್ಷ ಅಂಶ. ಇಂಥಹ ಪ್ರೇರಣೆ ಜೀವಿಗೆ ಒಂದು ಅದ್ಭುತ ಶಕ್ತಿಯನ್ನು ಕೊಡುತ್ತದೆ. ಅವುಗಳಲ್ಲಿ
ಸಾಹಿತ್ಯ-ಸಂಗೀತ, ಓದು-ಬರವಣಿಗೆ, ಆಟೋಟ, ಉಪನ್ಯಾಸ, ಪ್ರವಚನ-ಪ್ರವಾಸ, ನಾಟಕ-ಸಿನೆಮಾ-ಯಕ್ಷಗಾನ, ವಾದ್ಯಗಳನ್ನು ನುಡಿಸುವುದು, ಕೃಷಿ-ತೋಟಗಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ವ್ಯವಹಾರ, ಛಾಯಾಗ್ರಹಣ, ಭಜನೆ-ಭಾಷಣ, ಚಿತ್ರಕಲೆ, ಅಡುಗೆ, ಹಾಡು-ಹಸೆ, ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಹೀಗೆ ಹಲವಾರು ರೀತಿಯ ಪ್ರವೃತ್ತಿಗಳು ಮನುಷ್ಯನ ಮನಸ್ಸನ್ನು ನಿರಂತರವಾಗಿ ಪಾದರಸದಂತೆ ಇಡುತ್ತವೆ. ಇವುಗಳಿಂದ ಮನೋವಿಕಾಸವಾಗುತ್ತದೆ. ಉತ್ತಮ ಹವ್ಯಾಸಗಳಿಂದ ಉದ್ಯೋಗದಲ್ಲಿ ಇನ್ನಷ್ಟು ಆಸಕ್ತಿ ಮೂಡಲು ಸಾಧ್ಯ. ಏಕೆಂದರೆ ಕಾಲ ಕಾಲಕ್ಕೆ ಪರಿವರ್ತನೆ ಹೊಂದುವ ಸಮಾಜದಲ್ಲಿ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ವೃತ್ತಿ-ಪ್ರವೃತ್ತಿಗಳು ಹಾಲು-ಜೇನಿನಂತೆ ಹದವಾಗಿ ಬೆರೆತಾಗ ಪ್ರವೃತ್ತಿಗಳು ವೃತ್ತಿ ಜೀವನಕ್ಕೆ ಅಡ್ಡಗೋಡೆಗಳಾಗದೆ ಸಾಧನೆಗೆ ಸೇತುವೆಗಳಾಗಿ ವ್ಯಕ್ತಿಗೂ ಗೌರವ ತಂದುಕೊಡುತ್ತವೆ. “ಒಳ್ಳೆಯದನ್ನು ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡಬೇಕು.” ಎಂಬ ಚಾಣಕ್ಯ ಅವರ ಮಾತುಗಳು ಪ್ರವೃತ್ತಿಯ ಜೀವಂತಿಕೆಯನ್ನು ಸಾರುತ್ತವೆ. ಓದು-ಬರಹ ಎಂಬ ಪ್ರವೃತ್ತಿಗಳು, ಅದರಲ್ಲೂ ಸಾಹಿತ್ಯದ ಸಿಂಚನವಾದರೆ ವ್ಯಕ್ತಿಯ ವ್ಯಕ್ತಿತ್ವ ನೇಸರನಂತೆ ಹೊಂಗಿರಣಗಳನ್ನು ಸೂಸುತ್ತದೆ. ಗಜಲ್ ಎನ್ನುವುದು ಹಲವು ಮೆದು ಮನಸ್ಸುಗಳ ಕಲಮ್ ಗೆ ಶಾಹಿ ಆಗಿ ಹಲವು ದಸ್ತಾವೇಜುಗಳನ್ನು ರೂಪಿಸಿದೆ. ಇತ್ತೀಚಿಗಂತೂ ಜಾಗತಿಕ ಅದಬ್ ನಲ್ಲಿ ಗಜಲ್ ನ ಗುಂಗುರೂ ಸದ್ದು ಹೆಚ್ಚಾಗಿಯೇ ಪ್ರತಿಧ್ವನಿಸುತ್ತಿದೆ. ಇದಕ್ಕೆ ನಮ್ಮ ಕನ್ನಡ ನುಡಿ ಜಾತ್ರೆಯೂ ಹೊರತಲ್ಲ. ಅಸಂಖ್ಯಾತ ಕಸ್ತೂರಿ ಲೇಪಿತ ಮನಸುಗಳು ಗಜಲ್ ಗೋಯಿಯಲ್ಲಿ ನಿರತವಾಗಿವೆ. ಅಂತಹ ಮನಸ್ಸು ಹೊಂದಿರುವವರಲ್ಲಿ ಮಹಾದೇವ ಪಾಟೀಲರೂ ಒಬ್ಬರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭೂಷರು (ರಾಂಪೂರು) ಗ್ರಾಮದಲ್ಲಿ ಶ್ರೀ ಶಾಂತನಗೌಡ ಮತ್ತು ಶ್ರೀಮತಿ ಶಿವಗಂಗಮ್ಮ ದಂಪತಿಗಳ ಮಗನಾಗಿ ೧೯೮೨ ಏಪ್ರಿಲ್ ೧೫ರಂದು ಜನಿಸಿರುವ ಮಹಾದೇವ ಎಸ್. ಪಾಟೀಲ ಅವರು ಓದಿದ್ದು ಬಿ.ಎ. ಪದವಿ. ಸ್ವಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ‘ರಾಜಕೀಯದಲ್ಲಿ ರಾವಣರು’ ಸಾಮಾಜಿಕ ನಾಟಕವನ್ನು ರಚಿಸಿ, ತಮ್ಮ ಗ್ರಾಮದಲ್ಲಿ ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಕಾಲೇಜು ಹಂತದಿಂದಲೇ ಕಥೆ, ಕವಿತೆ, ಚುಟುಕು, ನಾಟಕ.. ಹೀಗೆ ಸಾಹಿತ್ಯದಲ್ಲಿ ಕೃಷಿ ಮಾಡುತ್ತ ಬಂದಿರುವ ಇವರು ಕನ್ನಡ ಸಾರಸ್ವತ ಲೋಕಕ್ಕೆ ಗಾಂಧಿ ಬಜಾರ (ಕವನ ಸಂಕಲನ), ಭೂಷರಾಧೀಶ್ವರ (ಶರಣರ ಜೀವನ ಚರಿತ್ರೆ), ಮುತ್ತಿನ ತೆನೆ (ಚುಟುಕು ಸಂಕಲನ) ಇವುಗಳೊಂದಿಗೆ ‘ಬಿಸಿಲು ಬಿದ್ದ ರಾತ್ರಿ’, ‘ಸುಡುವ ತಂಗಾಳಿ’, ಎಂಬ ಗಜಲ್ ಸಂಕಲನ.. ಮುಂತಾದ ಹಲವಾರು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಮಹಾದೇವ ಪಾಟೀಲ್ ಅವರು ನಾಡಿನ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ, ಗಜಲ್ ಗೋಷ್ಠಿ ಭಾಗವಹಿಸಿ ಕವನ-ಗಜಲ್ ವಾಚನ ಮಾಡಿದ್ದಾರೆ. ಇವರ ಅನೇಕ ಬರಹಗಳು ದಿನಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರಿಗೆ ಕರುನಾಡಿನ ಬಹಳ ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಸದ್ಯ ಇವರು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಸೂಯೆ ಇಲ್ಲದ ಪ್ರೀತಿ ಈ ಸಂಸಾರದಲ್ಲಿ ನಮಗೆ ಸಿಗಲಾರದು. ಅದರ ಹೊರತು ಪ್ರೀತಿಸುವುದಾದರೂ ಹೇಗೆ ಅಲ್ಲವೆ..? ನಿಜವಾದ ಅಸೂಯೆಯು ಪ್ರೀತಿಯ ಭಾವನೆಯನ್ನು ಯಾವಾಗಲೂ ಜೀವಂತವಾಗಿಡುತ್ತಲೆ ಹೆಚ್ಚಿಸುತ್ತದೆ. ಪ್ರೇಮಿಗಳ ಪ್ರತಿಯೊಂದು ನಡೆಯು ತಮ್ಮ ಸಾಜನ್-ಸಜನಿಯ ಯೋಚನೆಯಲ್ಲಿಯೆ ಕೊನೆಗೊಳ್ಳುತ್ತದೆ. ನಿರಂತರವಾಗಿ ತಮ್ಮ ಪ್ರೇಮಿಯ ಚಿಂತೆಯಲ್ಲಿರುವ ಅವರಿಗೆ ಬೇರೆ ಯಾವ ಯೋಚನೆಯೂ ಅವರಿಗಿರದು. ಇಂಥಹ ಪ್ರೀತಿಯಲ್ಲಿ ಅರಳಿದ, ಅರಳುತ್ತಿರುವ ಗಜಲ್ ಪ್ರೀತಿ ರಸಿಕರ ಹೃದಯಕ್ಕೆ ದಸ್ತಕ್ ನೀಡುತ್ತಿವೆ. ಮನುಷ್ಯ ಉಸಿರಾಡುತ್ತಿರುವುದು ಗಾಳಿಯಿಂದಾದರೂ ಈ ಧರತಿಯಲ್ಲಿ ಬದುಕಿರುವುದು, ಬದುಕುತ್ತಿರುವುದು ಮಾತ್ರ ಪ್ರೀತಿಯ ಶಬನಮ್ ಗಾಗಿ!! ಈ ಪ್ರೀತಿಯನ್ನು ಪರೀಕ್ಷಿಸಲು, ಪಕ್ವಗೊಳಿಸಲು ‘ವಿರಹ’ ಎಂಬ ಜ್ವಾಲೆ ಪ್ರೇಮಿಗಳ ನಡುವೆ ಗೋಡೆಯನ್ನು ನಿರ್ಮಿಸುತ್ತದೆ. ವಿರಹದ ಉತ್ಕಟತೆ ಗಜಲ್ ಗೆ ಜೀವ ನೀಡಿ ಸಾರ್ವತ್ರಿಕಗೊಳಿಸುತ್ತದೆ. ಲೈಲಾ-ಮಜ್ನೂ, ಶಿರಿನ್-ಫರ್ಹಾದ್, ಯೂಸುಫ್-ಜುಲಾಖಾ ಮುಂತಾದವರೆಲ್ಲ ಜೀವನಪರ್ಯಂತ ವಿರಹದ ದಳ್ಳುರಿಯಲ್ಲಿ ಬೆಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಗಜಲ್ ಗೋ ಮಹಾದೇವ ಪಾಟೀಲ್ ಅವರ ಗಜಲ್ ಗಳಲ್ಲಿ ಪ್ರೀತಿಯ ತೀವ್ರತೆ, ಪ್ರೇಮದ ರಸಗಟ್ಟಿ, ಒಲವಿನ ಆಲಿಂಗನ, ವಿರಹದ ಉರಿ, ಸಾಮಾಜಿಕ ಸಂವೇದನೆಯ ಪ್ರತಿಧ್ವನಿ, ಶೋಷಿತ ಮನುಸ್ಸುಗಳ ಅಸಹಾಯಕತೆ, ರಾಜಕೀಯದ ಸ್ಥಿತ್ಯಂತರ, ಧರ್ಮಗಳ ಕಸಾಯಿಖಾನೆ, ಕೋಮು ಸೌಹಾರ್ದತೆಯ ಹಂಬಲ, ಹಸಿವಿನಂಗಳದ ಆಕ್ರಂದನ, ಕಾರ್ಮಿಕರ ರಕುತದ ವಾಸನೆ, ಸ್ತ್ರೀ ಸಂವೇದನೆಯ ಮೆಲುಮಾತುಗಳು, ಮಾನವೀಯ ಮೌಲ್ಯಗಳ ತಿಕ್ಕಾಟ, ಭಾವನಾ ತೋಟದೊಳಗೆ ನಮ್ಮನ್ನು ಮುಳುಗಿಸುವ ಭಾವದೀಪ್ತಿ… ಎಲ್ಲವೂ ಬಹುತ್ವದ ಪಾರಿಭಾಷಿಕ ನೆಲೆಯಲ್ಲಿ ಹದಗೊಂಡಿವೆ.
ಇದರೊಂದಿಗೆ ಇನ್ನೂ ವಿಶೇಷವೆಂದರೆ ಇವರ ಗಜಲ್ ಗಳಲ್ಲಿ ಶರಣ, ಸೂಫಿ, ತತ್ವಪದಕಾರರ ದಟ್ಟವಾದ ಛಾಯೆಯನ್ನು ಗುರುತಿಸಬಹುದು.
“ಅವನು ಹಾಕಿದ್ದು ಕೇಸರಿ ಜೋಳಿಗೆ ಇವನು ಹಾಕಿದ್ದು ಹಚ್ಚಹಸಿರು
ಬಟ್ಟೆಯಲಿ ಅಡಗಿರುವ ಬಣ್ಣಗಳು ಬೇರೆ ನೇಯುವ ನೂಲುವೊಂದೆ”
ಪ್ರಕೃತಿಯಲ್ಲಿ ಅರಳುವ ‘ಕಾಮನಬಿಲ್ಲು’ ನಮ್ಮ ಬದುಕಿನ ವಿವಿಧ ಮಗ್ಗುಲಗಳನ್ನು ಒಂದೇ ನೆಲೆಯಲ್ಲಿ ಹಿಡಿದು ಇಟ್ಟಿರುವುದರ ಸಾಂಕೇತಿಕ ರೂಪವಾಗಿದೆ. ಮನುಷ್ಯ ನಿಸರ್ಗದ ಒಡಲನ್ನು ಅರಿಯುವ ಪ್ರಯತ್ನದಲ್ಲಿ ಅದರ ಎದೆಯನ್ನು ಬಗೆಯುತ್ತಿರುವುದು ದುರಂತವಾದರೂ ಬಯಲಸತ್ಯವಾಗಿದೆ! ಪ್ರತಿಯೊಂದು ಜನಾಂಗ, ಪ್ರತಿಯೊಂದು ಧರ್ಮ ಒಂದೊಂದು ಬಣ್ಣದ ಪೇಟೇಂಟ್ ತೆಗೆದುಕೊಂಡಂತೆ ವರ್ತಿಸುತ್ತಿರುವುದು ಬೌದ್ಧಿಕ ದಿವಾಳಿತನದ ಮುನ್ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಮಹಾದೇವ ಪಾಟೀಲ್ ಅವರು ಇಂದಿನ ರಾಜಕೀಯ ಪಕ್ಷಗಳು ಬಣ್ಣಗಳನ್ನು ಬಳಸಿಕೊಂಡು, ಬಣ್ಣ ಬಣ್ಣದ ಮಾತುಗಳನ್ನು ಆಡುತ್ತ ; ಬಣ್ಣ ಬಣ್ಣವಾಗಿ ಸಮಾಜವನ್ನು ಒಡೆಯುತ್ತಿರುವ ರೀತಿಯನ್ನು ಕಣ್ಣ ಮುಂದೆ ರಾಚುವಂತೆ ಕಟ್ಟಿ ಕೊಟ್ಟಿದ್ದಾರೆ. ಈ ಮೇಲಿನ ಷೇರ್ ‘ಹಿಂದು-ಮುಸ್ಲಿಂ ಅಲಗ್ ಹೈ, ದೋನೋ ಕಾ ಮತಲಬ್ ಏಕ್ ಹೈ’ ಎನ್ನುವ ಮೋಹರಂ ಪದವನ್ನು ನೆನಪಿಸುತ್ತದೆ.
ಮನೆ ಅರಮನೆಗಳನ್ನು ಕಟ್ಟಿದರೂ ಸ್ವಂತ ಸೂರಿಲ್ಲದವರು ನಾವು”
“ಕಲ್ಲು ಮಣ್ಣು ಇಟ್ಟಿಗೆ ಹೊತ್ತು ಬದುಕು ಸಾಗಿಸುವವರು ನಾವು
ಆರಕ್ಷಕ ವೃತ್ತಿಯಲ್ಲಿರುವ ಶ್ರೀಯುತರು ಸಹಜವಾಗಿಯೇ ಸಮಾಜದ ವಿವಿಧ ಸ್ತರಗಳ ಜನರ ಒಡನಾಟವನ್ನು ಹೊಂದಿರುತ್ತಾರೆ. ಆ ಒಡನಾಟದ ಫಲವೆಂಬಂತೆ ಅವರಲ್ಲಿ ಸಾಮಾಜಿಕ ಸಂವೇದನೆ ಜಾಗೃತಗೊಂಡದ್ದು ಅವರ ಗಜಲ್ ಗಳಲ್ಲಿ ಕಾಣುತ್ತೇವೆ. ಈ ಮೇಲಿನ ಷೇರ್ ಬಡವರ, ದಿನಗೂಲಿ ನೌಕರರ ಜೀವನದ ಧಾರುಣ ಕತೆಯನ್ನು ಎಳೆಎಳೆಯಾಗಿ ಬಿಡಿಸುತ್ತಿದೆ. ಬಂಡವಾಳಶಾಹಿಯ ಕಳಸಕ್ಕೆ ಕಾರ್ಮಿಕರು ತಳಪಾಯವಾಗುವ, ತಮಪಾಯವಾಗಿಸುತ್ತಿರುವ ರೀತಿ ನಿಜಕ್ಕೂ ಜಿಜ್ಞಾಸೆಗೆ ಹಚ್ಚುತ್ತದೆ. ಗಗನಚುಂಬಿ ಕಟ್ಟಡಗಳ ಬುನಾದಿಯಾಗುವ ಏಷ್ಟೋ ಅಸಂಖ್ಯಾತ ಗಾರೆ ಹೊತ್ತ ಹೆಗಲುಗಳಿಗೆ ಒಂದು ಸೂರು ಇಲ್ಲದೆ ಇರುವುದು ನಮ್ಮ ಆಧುನಿಕತೆಗೆ, ನಮ್ಮಲ್ಲಿರುವ ಆದರ್ಶಗಳಿಗೆ ಹಿಡಿದ ಗ್ರಹಣವಾಗಿದೆ. ಸುಖನವರ್ ಪಾಟೀಲ್ ಅವರ ಸಮ ಸಮಾಜದ ಕನಸನ್ನು ಇಲ್ಲಿಯ ಅಶಅರ್ ಸಾದರ ಪಡಿಸುತ್ತಿರುವ ರೀತಿ ಅನ್ಯೋನ್ಯ ಎನಿಸುತ್ತದೆ.
ಪ್ರತಿ ಹೃದಯದ ಗೂಡಿನಲ್ಲಿ ಕಂಬಿನಿಯ ಕಡಲು ಹೆಪ್ಪುಗಟ್ಟಿರುತ್ತದೆ. ಹಿಮದಂತ ನೋವಿಗೆ ಸಾಂತ್ವಾನದ ಬಿಸಿಯಪ್ಪುಗೆ ನೀಡುವುದೇ ಗಜಲ್ ಎಂಬ ಕರುಣಾಮಯಿ ನೀರೆ. ಬಳಲಿ ಬೆಂಡಾದ ಮನಸುಗಳಿಗೆ ನಗುವಿನ ಸಿಂಚನ ಹಂಚುತ್ತಿರುವ ಇಂಥಹ ಗಜಲ್ ಪರಂಪರೆ ಗಜಲ್ ಗೋ ಮಹಾದೇವ ಪಾಟೀಲ್ ಅವರಿಂದ ಮತ್ತಷ್ಟು ಪಸರಿಸಲಿ ಎಂದು ಶುಭ ಹಾರೈಸುತ್ತೇನೆ.
“ಒಂದು ಮಾತೂ ಆಡದೆ ಇರುವುದೊಳಿತು, ಮೌನ ಮಾತಿಗಿಂತಲೂ ಮಿಗಿಲು
ಏನಾಯಿತೆಂದು ಕೇಳೆನು ನಾನು, ಅನುಭವಿಸಿದ್ದು ಒಂದು ಕಾರ್ಪಣ್ಯದ ಬದುಕು, ಅಸಂಖ್ಯ ಸಾವು”
–ಮೀರ್ ತಖೀ ಮೀರ್
ಗಜಲ್ ಕಾರವಾನ್ ನಲ್ಲಿ ಸುತ್ತಾಡುತ್ತಿದ್ದರೆ ಗಜಲ್ ಪ್ರೇಮಿಗಳಿಗೆ ಆಯಾಸವಾಗುವುದೆ ಇಲ್ಲ. ಅಶಅರ್ ನ ಜೋಕಾಲಿ ಜಗತ್ತಿಗೆ ತಂಬೆರಲನ್ನು ನೀಡುತ್ತಿದೆ. ಅದರ ಸೊಂಪಿನಲ್ಲಿ ಮೈಮರೆತವರಿಗ ವಕ್ತ್ ಎಚ್ಚರಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿಯಾರದ ಮುಳ್ಳುಗಳ ಮುಂದೆ ಮಂಡಿಯೂರುತ್ತ ಇಲ್ಲಿಂದ ನಿರ್ಗಮಿಸುವೆ. ಮುಂದಿನ ಗುರುವಾರ ಮತ್ತೊಬ್ಬ ಗಜಲ್ ಗೋ ಒಬ್ಬರ ಗಜಲ್ ಗೊಂಚಲಿ ನೊಂದಿಗೆ ಮತ್ತೆ ಬರುತ್ತೇನೆ. ಅಲ್ಲಿಯವರೆಗೆ ಅಲ್ವಿದಾ ದೋಸ್ತೋ..
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ