ಮಾಯಿ…ನಿನ್ನ ಗುಂಗಿನೊಳಗ-ದೇವರಾಜ್ ಹುಣಸಿಕಟ್ಟಿ.

ಮಾಯಿ…ನಿನ್ನ ಗುಂಗಿನೊಳಗ

ದೇವರಾಜ್ ಹುಣಸಿಕಟ್ಟಿ.

ಸ್ವಾತಂತ್ರ್ಯ ಅಂದ್ರೆ
ಅದೇ ಮಾಯಿ ನಿನ್ನ ಮಡಿಲ ನೆನೆದು….
ಹೃದಯ ದೊಳಗೆ ಮಣಿದು……!

ಉಸಿರುಸಿರು ನಿನ್ನ ಹುಡಿಯ ತುಂಬಿ
ಆಡಿ-ನಲಿದ ದೇಹವು ನಿನ್ನ ಅಡಿಗೆ ಎರಗಿ….
ಉಸಿರನೇ ಒತ್ತೆ ಇಟ್ಟು ಗೆದ್ದು ಕೊಟ್ಟ
ಹಿರಿಯರ ತ್ಯಾಗಕ್ಕೆ ಭಾವದಲಿ ಮರಗಿ…!

ತಲೆ ಎತ್ತಿ ಜಾತಿ-ಧರ್ಮ-ಭಾಷೆ ಮೀರಿ
ಒಂದೇ ಮಾತರಂ ಎಂದ್ ಬಿಡತವಲ್ಲ ಅದಾ….!

ನಸುಕಿನ್ಯಾಗ ಎದ್ದು
ತುಸು ಮಸುಕಾದ ಕಣ್ಣ ಉಜ್ಜಿ
ರಾತ್ರಿ ಎಲ್ಲ ಅಮ್ಮ ಬರೆದ ಕೊಟ್ಟ ಭಾಷಣ
ಕನ್ನಡಿ ಮುಂದೆ ಮತ್ತೆ-ಮತ್ತೆ ಒಪ್ಪಿಸಿ….!
ತಪ್ಪುಗಳ ಮತ್ತೆ-ಮತ್ತೆ ತಪ್ಪಿಸಿ..!

ಗತ್ತಿನಿಂದ ಬಿಳಿ ಬಟ್ಟಿ ತೊಟ್ಟು….
ದೇಶ ಭಕ್ತಿಯನ್ನೇ ಮೈ-ಮನದಲಿ ಉಟ್ಟು….!

ಹೂವ ಅಂತಾ ಚಿಕ್ಕ
ಕೈಯಲ್ಲಿ ಹೂವ್ ಹಿಡಿದು….!!
ಹೃದಯದೊಳಗೆ ಸಾವಿರ
ಸಾವಿಲ್ಲದ ಕನಸು ಮುಡಿದು….!!

ರಾಷ್ಟ್ರ ಧ್ವಜದೊಳಗೆ ಒಂದೊಂದೇ
ಬಣ್ಣ-ಬಣ್ಣದ ಹೂವ್ ತುಂಬಿ…!
ವಿವಿಧತೆಯೇ ದೇಶದ ಅಸ್ತಿತ್ವವೆಂದು ನಂಬಿ…..!!

ಮೇಲೆಕೆ ಮೇಲಕೆ ಹೋದಂಗ್….!
ಹೃದಯದೊಳಗ ಕ್ರಾಂತಿ
ವೀರರ ಗುಂಗ…!!
ಮಾಯಿ ನಿನ್ನ ಸಂಗ…!!!

ಹಿಲೋಮತ್ ಅಂದ ಧ್ವಜದ ಹಗ್ಗ…. ಎಳೆದ ಕೂಡಲೇ….
ಒಂದೇ ಉಸಿರೊಳಗ ಕಣ್ಣ ಅಲಗದಂಗ್…!!

ಮಾಯಿ ನಿನ್ ಹಾಡಿ ಹಾಡ ಹಾಡಿ…..
ಅಜ್ಜನ ಕೂಡ ನಿನ್ ಧೂಳ
ಹಣಿಗೊತ್ತಿದ ನೆನಪಿದೆಯಲ್ಲ ಅದಾ….!!

ಅಪ್ಪ ಕೊಟ್ಟ ಎಂಟಾಣೆಯಲ್ಲಿ….
ಗೆಳೆಯರು ಕೂಡಿ ತಂಟಿ ತಕರಾರ ಇಲ್ಲದಂಗ….!
ಸೈಕಲಿಗೊಂದ್ ಧ್ವಜ ಕೊಂಡ…
ಶಾಲ್ಯಾಗ ಕೊಟ್ಟ ಸೊಂಟಿ ಪೇಪರ್ ಮಂಟ ಇಸ್ಕೊಂಡು…
ತುಂಟ ನಗಿ ಬೀರಿ….
ಹೆಗಲ್ ಮೇಲೆ ಕೈ ಇಟಕೊಂಡ್…
ಮುಗಿಲ್ ಕೈಗೆ ಸಿಕ್ಕ ಖುಷಿ ತುಂಬಿಕೊಂಡ್….
ಓಣಿ-ಓಣಿಯ ತಿರುಗಿ ಶಿಸ್ತಿನಿಂದ
“ಭಾರತ ಮಾತಕೀ ಜೈ “ಎಂದ್
ಗಂಟಲೊಳಗ ದೇವರ ಹೊಕ್ಕಂಗ ನಿನ್ ಹೆಸರ ಕೂಗಿ…..!
ನಿನ್ನ ನಾಮದೊಳಗ ಎಲ್ಲ ಮರೆತು ಬಿಟ್ಟಿದ್ವಲ್ಲ ಅದಾ….!

ಇಲ್ಲಾ…
ನಿನ್ನ ಅದಾದೊಳಗ ನಮ್ಮ ಹದಾ ಕೂಡಿ…!
ತಿರಂಗಾದ ಬಣ್ಣ ಕಣ್ಣ-ಕಣ್ಣೊಳಗೂ ಮೂಡಿ…!
ಮೊಗದೊಳಗ ಮಾಯಿ ನಿನ್ನ ಮಾಯೆ ತುಂಬಿತ್ತಲ್ಲ ಅದಾ…..!!

ನಾನ್ ಕಂಡ ಸ್ವಾತಂತ್ರಕ್ಕೆ ಎಷ್ಟು ಸೊಗವಿದೆಯೋ ಗೊತ್ತಿಲ್ಲ….
ಅವ್ವ ನಿನ್ನ ಕಣ-ಕಣ ನನ್ನ ಮನದೊಳಗೆ ತುಂಬಿ ಹಬ್ಬಿ
ಹಬ್ಬ ಆಚರಿಸಿದ್ದ ನೆನಪ್ ಮಾತ್ರ…..
ನನ್ ಜನಾ ಚಂದ್ರನ ಮೇಲೆ ಲಗ್ಗೆ ಇಟ್ಟು….
ಮಂಗಳನಕಡೆ ಹೆಜ್ಜೆ ಹಾಕೋವರೆಗೂ
ಸ್ವಾತಂತ್ರ್ಯ ಸಿಕ್ಕಿದೆ ನೋಡ್ ನಮಗ…..!!


Leave a Reply

Back To Top