ಕಾವ್ಯ ಸಂಗಾತಿ
ದೇಶಾಭಿಮಾನದ ಕಿಚ್ಚು
ಶಿವಲೀಲಾ ಹುಣಸಗಿ

ಸತ್ಯದ ಹಾದಿ ದುರ್ಗಮವೆಂದು
ನಿತ್ಯ ಕೊರಗಿದವರೆಷ್ಟೋ
ತ್ಯಾಗ ಬಲಿದಾನಗಳ ಮಹಾಪೂರ
ರೊಚ್ಚಿಗೆದ್ದ ಕೊಳ್ಳಿದೆವ್ವಗಳ ಸಾಲು
ಪಟಪಟನೆ ಉದುರಿದ ಹೆಣಗಳು
ಪಿಸ್ತೂಲ್ ಗಂಜಿ ಭೂಗತವಾದವರೆಷ್ಡೋ
ಮರಳಿಬಾರದ ಊರಿಗೆ ಪಯಣ..
ವಿಪರ್ಯಾಸ ನಮಗೆ ನಾವೆ ಶತ್ರು..
ನಾಯಿ ರೊಟ್ಟಿಗಾಗಿ ಕಾದುಕುಳಿತಂತೆ
ಹಯಗಳ ಲದ್ದಿಯೆತ್ತಿ ಉಂಡಂತೆ
ಬೂಟುಗಾಲಿನ ಪಾಲಿಶ್ ಎದೆಗಪ್ಪಿದಂತೆ
ಅಬ್ಬಾ ಎಂಥ ಸುಖ,ರಕ್ತ ಹೀರುವಿಕೆಗೆ
ಉಂಬಳವನ್ನೂ ಮೀರಿಸಿದವರು
ಲಾಠಿ ಏಟಿಗೆ ಮುರಾಬಟ್ಟೆ ಬದುಕಾದಂತೆ
ಆದ್ರೂ ಅನ್ಯಾಯದ ಧ್ವನಿ ಗಂಟಲಲ್ಲಿಲ್ಲ
ಅತಿಥಿ ಸತ್ಕಾರಕೆ ಎತ್ತಿದ ಕೈ ನಮ್ಮದು
ದುಃಖ ಮರೆಮಾಚಿ ರತ್ನಗಂಬಳಿ ಹಾಸಿ
ನಮ್ಮೊಳಗಿನ ಅಸಮಾನತೆಯ ತೆರೆದವರು
ಮಂಕುದಿನ್ನೆಗಳಾಗಿ ಸ್ವಾರ್ಥದಾಟಕೆ
ದೇಶವ ಪರತಂತ್ರಕೆ ಬಲಿಯಾಗಿಸಿದವರು
ಬುದ್ದನು ಸೋತ ಸತ್ಯ ದರ್ಶನ ಮಾಡಿಯು
ಬುದ್ದಿ ಬರಲಿಲ್ಲ ನಮ್ಮಂತರಂಗಳಿಗೆ
ಅಧಿಕಾರದ ಮೋಹಕೆ ನಿರ್ಗತಿಕರು ಬಡವರು
ಅವರೆಂದೂ ಮೇಲೆಳಲಿಲ್ಲ ಧ್ವನಿ ಮೊಳಗಲಿಲ್ಲ
ತುಟಿಕಚ್ಚಿ ನೋವ ನುಂಗಿ ಸಾವನ್ನಪ್ಪಿದರು
ತಾಳ್ಮೆಗೂ ಮಿತಿಯಿದೆ ಸಿಡಿದೆದ್ದವರ ಬಾಳು
ಅಸಹನೀಯತೆಯ ಗೋಳು
ಮನಸ್ಸು ಸ್ವಾತಂತ್ರ್ಯ ಬಯಸಿದ್ದೆ ಮುನ್ನುಡಿ
ಪ್ರಾಣದಾಹುತಿ ಭಾರತಾಂಬೆಯ ಮುಕ್ತಿಗೆ
ಅಬ್ಬಾ! ಇನ್ನೂರು ವರ್ಷಗಳ ಕಾಲಾಪಾನಿ!
ಹೋರಾಡಿ ಮಡಿದವರಿಗೆ ಗೊತ್ತು ಸ್ವಾತಂತ್ರ್ಯ
ದೇಶಾಭಿಮಾನದ ಕಿಚ್ಚು ಸ್ವಂತಿಕೆಯದಾಗಲಿ
ಭಾರತೀಯ ಸಂಸ್ಕೃತಿಯ ಕಹಾನಿ
ಭಾರತೀಯರಿಗೆ ಮುನ್ನುಡಿಯಾಗಲಿ
ಅಮೃತ ಮಹೋತ್ಸವ ಶಾಶ್ವತ ಉಸಿರಾಗಲಿ.
ಭಾರತೀಯ ಸಂಸ್ಕೃತಿಯ ಕಹಾನಿ
ಭಾರತೀಯರಿಗೆ ಮುನ್ನುಡಿಯಾಗಲಿ
ಅಮೃತ ಮಹೋತ್ಸವ ಶಾಶ್ವತ ಉಸಿರಾಗಲಿ.
ಸ್ವಾತಂತ್ರ್ಯದ ಕಿಚ್ಚು’ ಹೇಗಿತ್ತು ಎಂಬುದು ಕಣ್ಣು ಕಟ್ಟುವಂತಿದೆ .ಸುಂದರ ಅತೀ ಸುಂದರ ಅಭಿವ್ಯಕ್ತಿ
ಸ್ವಾತಂತ್ರ್ಯ ಹೋರಾಟದ ಕ್ಷಣಗಳು ಕಣ್ಣ ಮುಂದೆ ಹಾದು ಹೋದಂತಾಯಿತು. ಸುಂದರ ಬರವಣಿಗೆ.